ಗ್ರೆಗರಿ ಪತ್ರಾವೊ ಮತ್ತು ಪ್ರಭುತ್ವ

ಮನುಷ್ಯಕುಲದಲ್ಲಿರುವ ಗುಲಾಮ ಮತ್ತು ಪ್ರಭುತ್ವವೆಂಬ ವಿಂಗಡನೆ ಬಹುಶಃ ಜೀವ ಜಗತ್ತಿನ ಬೇರಾವ ಸಂಕುಲಗಳಲ್ಲಿಯೂ ಕಂಡು ಬರುವುದಿಲ್ಲ. ಬೇರೆ ಬೇರೆ ಜೀವ ಸಮುದಾಯಗಳಲ್ಲಿ ಸಂಬಂಧಗಳ ಮೂಲಕ ಜವಾಬ್ದಾರಿ ಹಂಚಿಕೆಯಾಗಿ ಬದುಕು ಸಾಗುತ್ತಿರುತ್ತದೆ. ಜವಾಬ್ದಾರಿ ಹೊತ್ತವರ ಶ್ರಮ ದೊಡ್ಡದಾಗಿರುತ್ತದೆ ಅಲ್ಲದೆ ಪ್ರಾಣ ಪಣಕ್ಕಿಡುವ ಸಂದರ್ಭ ಸಾಮಾನ್ಯವಾದುದು. ಉಳಿದ ಎಲ್ಲ ಜೀವಿಗಳದ್ದು ಅಂತಹುದೆ ಅಥವಾ ಅದಕ್ಕೆ ಸಮಾನವಾದ ಕರ್ತವ್ಯ ನಿರ್ವಹಣೆ ಇರುತ್ತದೆ. ಪಡೆಯುವ ಪ್ರತಿಫಲದಲ್ಲಿ ಪ್ರತಿ ಅಣುವನ್ನು ಹಂಚಿ ತಿನ್ನುವ ಮನೋಧರ್ಮನ್ನು ಮನುಷ್ಯನ ಹೊರತಾಗಿ ಬೇರೆಲ್ಲ ಜೀವಿಗಳಲ್ಲಿ ನೋಡಲು ಸಾಧ್ಯ. ಆದರೆ ಮನುಷ್ಯಕುಲದಲ್ಲಿರುವ ಪ್ರಭುತ್ವದ ವಿನಾಶಕಾರಿ ನಡೆಯನ್ನು ವರ್ತಮಾನದಲ್ಲಿ ಗಮನಿಸಿದರೆ ಬಹುಶಃ ಗುಲಾಮ ಸಂತತಿಯನ್ನು ಹೆಚ್ಚು ಮಾಡುತ್ತಲೇ ಪ್ರಭುತ್ವ ಮಾತ್ರ ಎಕಧಿಪತ್ಯವನ್ನು ಸಾಧಿಸಿ, ಆ ಪ್ರಭುತ್ವದ ಮುಂದಾಳುಗಳಿಗೆ ಮಾತ್ರ ಭೋಗದ ಹಸನಾದ ಬದುಕು ಸಾಧ್ಯವಾಗುತ್ತದೆ. ಎಂಬುದು ಇಂದು ನಮ್ಮ ಕಣ್ಮುಂದಿರುವ, ಅನುಮಾನವೆ ಇಲ್ಲದ ದುರಂತ ಸತ್ಯ. ಇದಕ್ಕೆ ಸಾಕ್ಷಿಯಾಗಿ ಇಲ್ಲಿನೆರಡು ಚಿತ್ರಗಳನ್ನು ಗಮನಿಸಬಹುದು.


ನೆಲವನ್ನು ತಾಯಿಯಾಗಿಯೇ ಕಾಣುತ್ತಿದ್ದ ಗ್ರೆಗರಿ ಪತ್ರಾವೋ, ಯಾವುದೊ ವಸಾಹತುವೊಂದು ತಾನು ಉತ್ತಿ ಬಿತ್ತಿ ಬೇಳೆದ ಭೂಮಿಯನ್ನು ಆಕ್ರಮಿಸಲು ಬಂದಾಗ ತನ್ನೆಲ್ಲ ಸಾಮರ್ಥ್ಯವನ್ನು ಪಣಕ್ಕಿಟ್ಟು, ಕೊನೆಗೆ ಪ್ರಾಣವನ್ನು ಸಹ, ಹೋರಾಟ ಮಾಡಿ ಉಪವಾಸ ಬಿದ್ದು, ತನ್ನ ಅವ್ವನ ಸಮಾನವಾದ ಭೂಮಿಯನ್ನು ಉಳಿಸಿಕೊಳ್ಳಲು ಪ್ರಯತ್ನಪಟ್ಟಿದ್ದು ಈಗ ಇತಿಹಾಸ. ಆದರೆ ವರ್ತಮಾನದ ಸತ್ಯ, ಪ್ರಭುತ್ವದ ದಮನಕಾರಿ ನೀತಿಯ ಪರಿಣಾಮವಾಗಿ ಈಗ ಗ್ರೆಗರಿ ಬಾಯಲ್ಲಿ ಬರುತ್ತಿರುವ ದಯನೀಯ ಮಾತುಗಳೆಂದರೆ "ನನ್ನ ಮುಂದಿರುವುದು ಎರಡೆ ಆಯ್ಕೆಗಳು, ಒಂದು ನಾನೇ ಬಿತ್ತಿ ಬೆಳೆದ ಕೃಷಿ ಭೂಮಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಮತ್ತೊಂದು ಈಗಿರುವ ಭೂಮಿಯನ್ನು ಬಿಟ್ಟು ಕೊಟ್ಟು ಬೇರೆ ಕಡೆ ಭೂಮಿ ಪಡೆಯುವುದು"

ಮತ್ತೊಂದು ಹೃದಯ ಹಿಂಡುವ ಚಿತ್ರವೆಂದರೆ ಇತ್ತೀಚೆಗೆ ಗುರ್ ಗಾಂವನಲ್ಲಿ ಕೃಷಿ ಭೂಮಿಯನ್ನು ಕೈಗಾರಿಕೆಗಳು ವಶಪಡಿಸಿಕೊಳ್ಳುವುದನನ್ನು ವಿರೋಧಿಸುತ್ತಿರುವ ಜನ ಸಮೂಹದಲ್ಲಿ ಒಬ್ಬರು, ಹಲವು ಜನ ಎತ್ತಿದರೂ ಎತ್ತಲಾಗದ ಮರದ ಬೊಡ್ಡೆಯೊಂದನ್ನು ಸಿಲುಬೆಯಂತೆ ಹೆಗಲ ಮೇಲೆ ಹೊತ್ತು, ದೊಡ್ಡ ಸರಪಳಿಗಳಿಂದ ಬಿಗಿದುಕೊಂಡು ಪ್ರತಿಭಟನೆ ಮಾಡುತ್ತಿರುವುದು.

ಈ ರೀತಿಯ ಹಲವಾರು ಚಿತ್ರಗಳು ಇಂದು ನಮಗೆ ಸಾಮಾನ್ಯವೆನ್ನುವಷ್ಟರ ಮಟ್ಟಿಗೆ ಹೆಚ್ಚಾಗಿವೆ. ಅದ್ದರಿಂದ ಬಹುಶಃ ಇಂಡಿಯಾದ ಯಾವ ನಾಗರಿಕನೂ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಅನುಭವಿಸಿಯೇ ಇಲ್ಲ. ಆದರೆ ಈಗ ಹುಟ್ಟುಹಾಕಿರುವ ಬಹುದೊಡ್ಡ ಭ್ರಮೆ ’ ಭಾರತ ಸ್ವತಂತ್ರಗೊಂಡು ಏಳು ದಶಕಗಳಾಗುತ್ತಿವೆ’ ಎಂಬುದು. ಈ ದೇಶ ಪ್ರಜಾಪ್ರಭುತ್ವ ರಾಷ್ಟ್ರ ಎಂಬುದನ್ನು ಸಾರಿ ಸಾರಿ ಹೇಳುವ ನ್ಯಾಯಾಂಗವೇ ಇಂದು ಪ್ರಭುತ್ವದ ವಶದಲ್ಲಿರುವಾಗ ನಾವು ಸರ್ವಾಧಿಕಾರಿ ವ್ಯವಸ್ಥೆಯಲ್ಲಿದ್ದೇವೆಂದೇ ಭಾವಿಸಬೇಕಾಗಿದೆ. ಈ ನೆಲ, ಈ ಹಸಿರು, ಈ ಗಣಿ, ಈ ನೀರು ಮತ್ತು ಈ ಗಾಳಿ ಸ್ವತಂತ್ರ ಭಾರತದ ಪ್ರತಿಯೊಬ್ಬ ನಾಗರಿಕನದೂ ಹೌದು ಎಂಬ ತಿಳುವಳಿಕೆಯೇ ಹಸಿ ಸುಳ್ಳು, ಬದಲಾಗಿ ಇವೆಲ್ಲ ಆಡಳಿತದ ಚುಕ್ಕಾಣಿ ಹಿಡಿದಿರುವ ಪ್ರಭುತ್ವದ ವಾರಸುದಾರರದು ಎಂಬುದು ವಾಸ್ತವ ಸತ್ಯ. ಇಲ್ಲಿ ಕೆಲವರು, ಕೆಲವರಿಗಾಗಿ ಮಾತ್ರ, ಕೆಲವರೇ ಆಡಳಿತ ನಡೆಸುತ್ತಿರುವುದರಿಂದ ಈ ದೇಶದ ಕೋಟ್ಯಾನುಕೋಟಿ ರೈತರು, ಸಾಮಾನ್ಯರು, ಅಬ್ಬೆಪಾರಿಗಳು, ನಿರ್ಗತಿಕರು ಮೇಲಾಗಿ ಎಲ್ಲ ’ನಾಗರಿಕರು’ ನೆಪ ಮಾತ್ರವಲ್ಲವೇ ?

’ಕಂಪನಿ’ ಎಂಬ ಪದ ಮಾನವೀಯತೆಯ ವಿರೋಧಿಯಾದ ಒಂದು ವ್ಯವಸ್ಥೆಯ ಕಾಳ ಕೂಟ. ಎದುರಿಗೆ ಸಿಕ್ಕವರನ್ನು ಅಥವಾ ತನಗೆ ಬೇಕಾದವರನ್ನು ಹುಡುಕಿ ಕಾಲಡಿ ಹೊಸಕಿ ಹಾಕುತ್ತದೆ, ಅಷ್ಟೇ ಅಲ್ಲ ದಮನಿತರ ಹಸಿಮಾಂಸವನ್ನು ಜೀವಸಮೇತ ಹುರಿದು ತಿನ್ನುತ್ತದೆ, ಕೇವಲ ತೀರದ ರಕ್ಕಸ ಹಸಿವಿಗೆ ಮಾತ್ರವಲ್ಲ ನಾಲಿಗೆಯ ರುಚಿಗಾಗಿಯೂ ಸಹ. ಇಂದು ’ನಾಗರಿಕ’ತೆಯ ನೇತಾರರು ಈ ಕಂಪನಿಯ ಸಹವರ್ತಿಗಳು ಮಾತ್ರವಲ್ಲ, ಆ ಕಂಪನಿಯ ಅಂಗಗಳೂ ಹೌದು. ಹೀಗಾದಾಗ ಯಾವ ನಂಬಿಕೆಗಳನ್ನಿಟ್ಟು ವಿನಯದಿಂದ ಮುಂದುವರೆಯಲು ಸಾಧ್ಯ ಅಥವಾ ಯಾವ ರೀತಿಯ ಗೌರವವನ್ನಿಟ್ಟುಕೊಂಡು ಒಪ್ಪಿ ನಡೆಯಲು ಸಾಧ್ಯ ? ಈ ದೇಶ ಮಾತ್ರವಲ್ಲ ವಸಾಹತು ವ್ಯವಸ್ಥೆ ಹೆಜ್ಜೆ ಇಟ್ಟಿರುವ ಪ್ರತಿಯೊಂದು ರಾಷ್ಟ್ರವೂ ಕೂಡ ಈ ಕ್ರೂರತೆಯ ವಿರುದ್ಧ ಮತ್ತೆ ಮತ್ತೆ ಸಮರಕ್ಕೆ ಅಣಿಯಾಗಲೇಬೇಕಿದೆ. ಪ್ರತಿರೋಧದ ಎಲ್ಲ ನೆಲೆಗಳನ್ನು ಸಂಶೋಧಿಸಿ ದಮನ ಮಾಡುವ ಪ್ರಭುತ್ವ ಕೇವಲ ದೈತ್ಯ ಮಾತ್ರವಾಗಿಲ್ಲ ಬುದ್ಧಿವಂತಿಕೆಯದೂ ಆಗಿದೆ ಮತ್ತು ಆ ಬುದ್ದಿಮತ್ತೆಗೆ ಜೀವಪರರೆಂದುಕೊಳ್ಳುವವರ ಕಾಣಿಕೆಯೂ ಇರುವುದೆ ನಮ್ಮ ಮುಂದಿರುವ ಬಹು ದೊಡ್ಡ ಸವಾಲು. ಮನುಷ್ಯಕುಲನ್ನೇ ವಿನಾಶದತ್ತ ತಳ್ಳಿದ ’ನೀಷೆ’ ಯಂಥವರ ಆಲೋಚನೆಗಳು ಮತ್ತೆ ಮತ್ತೆ ನವಿಕರಣಗೊಂಡು ಸೌಮ್ಯ ರೂಪದಲ್ಲಿ ದಾಂಗುಡಿ ಇಡುತ್ತಿರುವುದು ಈ ಯೋಚನೆಗೆ ಗಟ್ಟಿ ಸಾಕ್ಷಿ.

ಆರೋಗ್ಯವಂತ ಮನುಷ್ಯ ಸಂವೇದನೆಯು ವರ್ತಮಾನವನ್ನು ವಾಸ್ತವದ ನೆಲೆಯಲ್ಲಿ ಎದುರುಗೊಳ್ಳುವುದು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಮ್ಮ ಮುಂದಿದೆ. ಬೆವರಿನ ಜೊತೆ ರಕ್ತವನ್ನು ಬಸಿದುಕೊಂಡು ಕಾಲದ ಜೊತೆ ಪೈಪೊಟಿಗಿಳಿದು ಲಾಭಕ್ಕಾಗಿ ಅಲ್ಲ, ತನ್ನನ್ನು ನಂಬಿದವರ ಸಲಹುವದಕ್ಕಾಗಿ ಅನ್ನ ಬೆಳೆವ ರೈತನಿಗೆ, ಪ್ರಭುತ್ವ ಎಂದೂ ಬೆಳೆದ ಬೆಳೆಗೆ, ಪಟ್ಟ ಶ್ರಮಕ್ಕೆ, ತಕ್ಕ ಬೆಲೆಯನ್ನಂತು ಕೊಡಲೇ ಇಲ್ಲ. ಆದರೆ ಆ ಅನ್ನಕ್ಕೂ ಕೊಳ್ಳಿ ಇಡುತ್ತಾ ಜೀವ ಸಂಬಂಧಿಯಾದ ಭೂಮಿಯನ್ನು ಆಕ್ರಮಿಸುತ್ತಿರುವ ರೀತಿಯನ್ನು ನೋಡಿದರೆ ಭೋಗ ಪ್ರಧಾನವಾದ ವ್ಯವಸ್ಥೆ ಮಾತ್ರ ಇನ್ನು ಮುಂದೆ ಬದುಕಬಹುದೇನೋ ಎನಿಸುತ್ತದೆ. ಪರಂಪರೆಯ ಯಾವ ಕಾಲಘಟ್ಟವನ್ನು ಅವಲೋಕಿಸಿದರೂ ಇದೇ ಸತ್ಯಗಳು ಬೇರೆ ಬೇರೆ ರೂಪದಲ್ಲಿರುವುದು ಖಚಿತವಾಗುತ್ತದೆ. ಆದರೆ ಒಂದು ಭಿನ್ನತೆಯೆಂದರೆ ಪ್ರಭುತ್ವ ಎಂದೂ ’ನಿಮ್ಮನ್ನು ನುಂಗುತ್ತಿದ್ದೇವೆ’ ಎಂದು ಹೇಳುತ್ತಿರಲಿಲ್ಲ ಮತ್ತು ಆ ನುಂಗುವಿಕೆ ನುಂಗಿಸಿಕೊಂಡವರಿಗೂ ಗೊತ್ತಾಗುತ್ತಿರಲಿಲ್ಲ. ಈಗ ಕಾಲದ ಬದಲಾವಣೆ ಮತ್ತು ಆಧುನಿಕತೆಯ ನಡೆಯೆಂದರೆ ’ನಿಮ್ಮ ಹಸಿ ಮಾಂಸ, ನಿಮ್ಮ ತಾಯಿ ನೆಲ ನನ್ನ ವಶಕ್ಕೆ ಬೇಕು’ ಎಂದು ಘಂಟಾಘೋಷವಾಗಿ ಫರ್ಮಾನು ಹೊರಡಿಸುತ್ತದೆ ಮತ್ತು ಒಪ್ಪುವಿಕೆ ಅಥವಾ ಪ್ರತಿರೋಧಿಸುವಿಕೆ ಯಾವುದನ್ನೂ ಲೆಕ್ಕಿಸದೆ ನುಂಗುತ್ತದೆ, ನೀರು ಕುಡಿಯುತ್ತದೆ. ನಾಗರಿಕ ಸಮಾಜ ಇದನ್ನೆಲ್ಲ ಕಣ್ಣು ತೆರೆದು ನೋಡಿ ಬಾಯಿಮುಚ್ಚಿಕೊಳ್ಳುತ್ತದೆ, ಯಾವ ಆಶ್ಚರ್ಯವೂ ಇಲ್ಲದೆ.

ಈ ಎಲ್ಲ ಗಂಭೀರ ಸತ್ಯಗಳನ್ನು ಕಂಡು ಅರ್ಥಮಾಡಿಕೊಂಡಾದ ಮೇಲೆ ರೈತರ ಸಾಮಾನ್ಯರ, ದಮನಿತರ ಮುಂದಿನ ನಡೆ ಯಾವುದಿರಬಹುದು... ಕಳೆದು ಹೋದ ಶತ ಶತಮಾನಗಳು ಎಲ್ಲವನ್ನೂ ಅರ್ಥ ಮಾಡಿಸಿವೆ. ಇಲ್ಲಿ ವ್ಯವಸ್ಥೆಯ ಎಲ್ಲ ಹತಿಯಾರಗಳ ಸೂಕ್ಷ್ಮಗಳೂ ಗೊತ್ತು, ಹಾಕಬಹುದಾದ ಆಕ್ರಮಣಕಾರಿ ಪಟ್ಟುಗಳೂ ಸಹ ಗೊತ್ತು. ಇಲ್ಲಿಯ ತನಕ ಮಾಡಿದ ಪ್ರಯತ್ನಗಳೂ ಬಹುಶಃ ಹುಸಿಹೆಜ್ಜೆಗಳು ಮಾತ್ರ. ಮತ್ತೆ ಮತ್ತೆ ಎಡವಿ ಬಿದ್ದಿರುವಾಗಲೂ, ಮತ್ತಷ್ಟು ಗಟ್ಟಿಯಾಗಿ ಮರುರೂಪ ಪಡೆಯುವ ಛಾತಿ ಮಾತ್ರ ಅಂತರ್ಗತವಾಗಿ ಪ್ರವಹಿಸುತ್ತಲೇ ಇದೆ. ಇದಕ್ಕೆ ಬೇರೆ ಬೇರೆ ರೀತಿಯ ಆರೋಗ್ಯಕರ ಆಲೋಚನೆಯ ತೊರೆಗಳು ಸೇರಿಕೊಳ್ಳುತ್ತಲೇ ಇವೆ. ಕಾಲ ಸನ್ನಿಹಿತವಾಗಿದೆ. ನೆಲದೊಂದಿಗಿನ ಸಂಬಂಧ ಸಾಮಾನ್ಯವಾದುದಲ್ಲ. ಈ ಗಟ್ಟಿ ಸಂಬಂಧ ಮತ್ತು ಗಟ್ಟಿ ಪ್ರೀತಿಯೇ ಮುಂದಿನ ನಡೆಗಳನ್ನು ತಾನಾಗಿಯೇ ನಿರ್ಧರಿಸುತ್ತದೆ. ಎಲ್ಲವನ್ನೂ ಕಂಡು ಕೇಳಿ ಬೇಸತ್ತು ತಿರುಗಿ ಬೀಳುವ ಕ್ಷಣಕ್ಕಾಗಿ ಜನ ಕಾದಿದ್ದಾರೆ ಎನ್ನುವುದಕ್ಕೆ ಕೆಳಗಿನ ಒಂದು ನೈಜ ರೂಪಕವನ್ನು ವಿಶದೀಕರಿಸಬಹುದು.

ಮೊನ್ನೆ ಒಂದು ಸರಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿರುವಾಗ ಕಿಕ್ಕಿರಿದು ತುಂಬಿದ್ದ ಬಸ್ ನ ಎಲ್ಲರಿಗೂ ಟಿಕೇಟ ಕೊಡಲು ಪರಿಶ್ರಮ ಪಡುತ್ತಿದ್ದ ಕಂಡಕ್ಟರ್ ಅಂತೂ ಇಂತೂ ಎಲ್ಲರಿಗೂ ಟಿಕೇಟ್ ವಿತರಿಸಿದ್ದ. ಇನ್ನೇನು ಉಳಿದಿರುವ ಒಬ್ಬ ಚಿಕ್ಕ ಹುಡುಗನಿಗೆ ಅರ್ದ ಟಿಕೇಟ್ ಹರಿಯುತ್ತಿರುವಾಗಲೇ ಚೆಕ್ಕಿಂಗ ಅಧಿಕಾರಿಗಳು ದಾಳಿ ಮಾಡಿದರು. ಕಂಡಕ್ಟರನನ್ನು ಹಿಗ್ಗಾ ಮುಗ್ಗಾ ತೆಗಳುತ್ತಾ ತಾವು ಬಂದ ನಂತರವೇ ಆ ಹುಡಗನಿಗೆ ಟಿಕೇಟ್ ಕೊಡುತ್ತಿದ್ದಾನೆಂದು ಆಪಾದಿಸುತ್ತಾ ಆ ಪ್ರಾಮಾಣಿಕ ನಿರ್ವಾಹಕನನ್ನು ಅಮಾನತುಗೊಳಿಸುವ ಮಟ್ಟಕ್ಕೆ ಹೋದರು. ಇದನ್ನೆಲ್ಲ ಗಮನಿಸುತ್ತಲೆ ಇದ್ದ ಜನ ಸಿಟ್ಟಿಗೆದ್ದು "ಹೋಗೋ . . . . . ಈ ರಾಜ್ಯಾನಾ ಹಗಲು ಹೊತ್ತೇ ಲೂಟಿ ಮಾಡಿ, ಮಾರಾಕತ್ತಿರೂ ಮುಖ್ಯಮಂತ್ರಿನಾ, ನಮ್ಮ ತಾಯಿ ನಾಡಿನ ನೆಲ ಬಗದು ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಟೋಪಿ ಹಾಕೂ ಗಣಿ ಧಣಿಗಳನ್ನ ಹಿಡಿ ಹೋಗು, ಈ ಅಮಾಯಕ ಕಂಡಕ್ಟರ ಮೇಲೆ ಎನ್ ತೋರಸ್ತಿ ನಿನ್ನ ದರ್ಪಾನಾ. . .. " ಎನ್ನುತ್ತಾ ಮರುದಾಳಿ ಇಟ್ಟರು. ಇದು ಯಾವುದರ ಸಂಕೇತ ?

ವೀರಣ್ಣ ಮಡಿವಾಳರ