ಗುರುವಾರ, ಜನವರಿ 19, 2012

ನವಿಲು ಕಣ್ಣಿನ ಗಾಯದ ಚಿತ್ರಗಳು

ಊರು ಎನ್ನುವ ಪದ ಎಲ್ಲ ಸಮುದಾಯಗಳನ್ನು ಒಳಗೊಂಡ ತಾಣ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸುಳ್ಳಾಗುತ್ತಿದೆ. ಅದು ಮಾನಸಿಕವಾಗಿ ಕೇರಿಯಿಂದ ಬೇರ್ಪಟ್ಟ ಜಾಗ ಮಾತ್ರ. ಇದು ಇವತ್ತಿನ ಸ್ಥಿತಿಯೋ ಅಥವಾ ಯಾವತ್ತಿಗೂ ಹೀಗೆ ಇತ್ತೋ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಗ್ರಾಮೀಣಕೇರಿ ಎನ್ನುವ ಸಮುದಾಯ ಅದು ಒಂದು ಜೀವ ಸಮುದಾಯವಾಗಿಯೂ ಸಹ ಇವತ್ತು ನಮ್ಮನ್ನಾಳುವ ಪ್ರಭುಗಳಿಗೆ ತೋರುತ್ತಿಲ್ಲ. ಇದೇ ಸಮುದಾಯದ ಪ್ರತಿನಿಧಿಗಳಾಗಿ ರಾಜಕೀಯ ಮುಖಂಡರಾದವರೂ ಸಹ ಅಲ್ಲಿಯೂ ಮತ್ತೊಂದು ರೀತಿಯ ದಾಸ್ಯದಲ್ಲಿಯೇ ಮುಂದೆ ನಡೆದಿದ್ದಾರೆ. ತಾವು ಹುಟ್ಟಿ ಬೆಳೆದು ಬಂದ, ತಮಗೆ ಬದುಕು ಕೊಟ್ಟ ಹಳ್ಳಿಗಳ ಕೇರಿ ಇಂದು ಅವರಿಗೆ ಅಪರಿಚಿತವಾಗಿದೆ. ಕನಿಷ್ಠ ಪಕ್ಷ ಗ್ರಾಮೀಣಕೇರಿಗಳ ತಳಮಳವನ್ನೂ ಕೇಳಿಸಿಕೊಳ್ಳುವ ವ್ಯವಧಾನವೂ ಇಲ್ಲದ ಸ್ಥಿತಿಗೆ ತಳ ಸಮುದಾಯದ ಪ್ರತಿನಿಧಿಗಳು ತಲುಪಿರಬೇಕಾದರೆ, ಇನ್ನು 'ಒಬ್ಬ ಏಕಲವ್ಯನಿಗಾಗಿ ಹಾಸ್ಟೇಲ್ಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ' ಎನ್ನುವ ನಾಡ ಪ್ರಭುಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ?


ಭೋಜದಲ್ಲಿ ಮುರಿದು ಬಿದ್ದ ಕೇರಿ ಬದುಕು

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ತುದಿಯಲ್ಲಿರುವ ಈ ಭೋಜ ಕನರ್ಾಟಕದ ಗಡಿಯಲ್ಲಿರುವ ಒಂದು ಹಳ್ಳಿ. ಇತ್ತೀಚೆಗೆ ಒಂದು ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆ ಊರಿನ ಅಂದಾಜು ಐದನೂರಕ್ಕು ಹೆಚ್ಚು ಜನ ಕೇರಿಯ ಮೇಲೆ ದಾಳಿ ಇಟ್ಟರು. ಅದೀಗ ನಿದಿರೆಗೆ ಜಾರುತ್ತಿದ್ದ ಜೀವಗಳ ಜೀವ ಕೈಗೆ ಬಂದು ತಲ್ಲಣದಲ್ಲಿ ಮುದುಡಿ ಹೋದವು. ದಾಳಿಕೋರರು ತೂರಿದ ಕಲ್ಲುಗಳ ಬಾಯಿಗೆ ಕರುಣೆಯಿರಲಿಲ್ಲ. ಆ ಕಲ್ಲುಗಳಿಗೆ ಮೊದಲು ಬಲಿಯಾದದ್ದು ಆ ಕೇರಿಯ ಬೆಳಕು. ಬೀದಿಯ ಕಂಬದ ದೀಪಗಳೆಲ್ಲ ಉದುರಿ ಹೋದವು . ಒಮ್ಮಿಂದೊಮ್ಮೆಗೆ ಕೇರಿಯ ತುಂಬ ಭಯಾನಕ ಕತ್ತಲು. ಕಿವಿಗಡಚಿಕ್ಕುವ ಅಸಹ್ಯ ಬೈಗುಳಗಳು. ಮನೆ ಮನೆಯ ಕದಗಳೆಲ್ಲ ಮುರಿದು ಬಿದ್ದವು. ಮನೆಯೊಳಗಿನ ಜೀವಗಳೆಲ್ಲ ಬೇಟೆಗಾರರಿಗೆ ಹೆದರಿದ ಮೊಲಗಳಂತೆ ನಡುಗುತ್ತಾ ಮೂಲೆ ಸೇರಿದವು. ಇವರ ಕ್ರೌರ್ಯಕ್ಕೆ ಬಲಿಯಾಗದ ವಸ್ತುಗಳೆ ಉಳಿಯಲಿಲ.್ಲ ನಾಲ್ಕಾರು ಬೈಕ್ ಗಳು ನಜ್ಜು ಗುಜ್ಜಾದವು. ಗುಡಿಸಲುಗಳು ನಡಮುರಿದುಕೊಂಡು ನೆಲಕ್ಕೆ ಒರಗಿದವು. ಗೋಡೆಗಳೆಲ್ಲ ಅಂಗಾತ ಮಲಗಿದವು ವಯಸ್ಸಾದ ಮುದುಕರಂತೆ. ಒಳಕ್ಕೆ ಬಂದು ಕೈಗೆ ಸಿಕ್ಕು ಒಡೆದು ಹೋದ ವಸ್ತುಗಳಲ್ಲಿ ಟಿ.ವಿ., ಡಿ.ವಿ.ಡಿ, ಕುಚರ್ಿಗಳು ತಾವೇ ಸೇರಿದವು. ಈ ರೀತಿ ಹಾಳು ಮಾಡುವ ಮನಸ್ಸುಗಳಿಗೆ ಬಲಿಯಾದ ವಸ್ತುಗಳ ಆಯ್ಕೆಯಲ್ಲಿಯೇ ತಿಳಿಯುತ್ತದೆ ಇವರ ಅಸಹನೆ ಎಂಥದ್ದು ಎಂಬುದು. ವಸ್ತುಗಳನ್ನು ಮತ್ತೆ ಕೊಳ್ಳಬಹುದು, ಆದರೆ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಹದಿನಾರು ವರುಷದ ಹುಡುಗನಿಗೆ ಆದ ತೊಂದರೆ ತುಂಬಿಕೊಡುವರಾರು? ದುರಾಕ್ರೋಶದ ಮನಸ್ಸು ಒದ್ದ ರಭಸಕ್ಕೆ ಕದದ ಹಿಂದೆ ಆತು ನಿಂತಿದ್ದ ಗಭರ್ಿಣಿ ಹೆಣ್ಣು ಮಗಳು ನೆಲಕ್ಕೆ ಬಿದ್ದು ಅನುಭವಿಸಿದ ನೋವಿಗೆ ಹೊಣೆ ಯಾರು?

ಕೇರಿಗೆ ಸೇರಿದ ಕೆಲ ಹುಡುಗರು ರಸ್ತೆಯಲ್ಲಿ ವಾಲಿಬಾಲ್ ತೂರಾಡುತ್ತಾ ಬರುತ್ತಿದ್ದಾಗ ಒಬ್ಬ ಅಜ್ಜನಿಗೆ ಬಡಿದಿದೆ, ಈ ತಪ್ಪಿಗೆ ಹುಡುಗರನ್ನು ಹಿಡಿದು ಬಡೆದದ್ದಾಗಿದೆ. ಅದೂ ಅಲ್ಲದೆ ತಪ್ಪು ಮಾಡಿದ ಹುಡುಗರ ತಂದೆ ತಾಯಿಗಳು ಅಜ್ಜನ ಮನೆಗೆ ಹೋಗಿ ತಪ್ಪಾಯಿತೆಂದು ಕೈ ಮುಗಿದು ಕ್ಷಮೆ ಕೇಳಿ ಬಂದದ್ದಾಗಿದೆ. ಮತ್ತೊಂದು ದಿನ ಕೇರಿಯವನೊಬ್ಬ ದಾರಿಯಲ್ಲಿ ಕುಡಿದು ಓಲಾಡುತ್ತ ಬರುತ್ತಿದ್ದಾಗ ಒಬ್ಬ ಹೆಣ್ಣುಮಗಳಿಗೆ ಕೈ ತಾಗಿಸಿದ್ದಾನೆ. ಆ ಹೆಣ್ಣುಮಗಳು ಕುಡಿದವನನ್ನು ಬಾರಿಸಿದ್ದಾಳೆ. ಕುಡಿದ ಅಮಲಿನ ಅವಿವೇಕದ ವ್ಯಕ್ತಿ ಮರಳಿ ಆ ಮಹಿಳೆಗೆ ಹೊಡೆದು ಪರಾರಿಯಾಗಿದ್ದಾನೆ. ಇದು ಘಟನೆಯ ಸ್ಥಳದಲ್ಲಿ ಈ ಹಲ್ಲೆಗೆ ತಿಳಿದು ಬಂದ ಕಾರಣ.

ವಿಷಾದದ ಸಂಗತಿಯೆಂದರೆ ಮೇಲ್ಜಾತಿಯವರೇ ಸಾಮೂಹಿಕವಾಗಿ ತಪ್ಪು ಮಾಡಿದರೂ , ಅವರ ತಪ್ಪಿಗೆ ಕೇರಿಯೇ ಸಾಮೂಹಿಕವಾಗಿ ಶೋಷಣೆಗೆ ಬಲಿಯಾಗಬೇಕಾಗುತ್ತದೆ. ಕೇರಿಯವ ಒಬ್ಬನೇ ತಪ್ಪು ಮಾಡಿದರೂ , ಇಡೀ ಕೇರಿಯೇ ಆ ತಪ್ಪಿಗೆ ಬಲಿಯಾಗಬೇಕಾಗುತ್ತದೆ. ಭೋಜ ಕ್ಕೆ ಸಂಬಂಧಿಸಿದಂತೆ ಇಲ್ಲಿ ತಪ್ಪು ಮಾಡಿದವನನ್ನು ಶಿಕ್ಷಿಸಲು ಬೇರೆ ದಾರಿಗಳಿರಲಿಲ್ಲವೆ? ಕನರ್ಾಟಕದ ಗ್ರಾಮೀಣಕೇರಿಗಳ ವಾಸ್ತವಗಳೇ ಹೀಗೆ ಎನಿಸುತ್ತದೆ.

ಹೇಗಿದೆ ನಾಯಕನೂರು?

ಊರಿನ ಜಮೀನ್ದಾರನ ಕೆಂಗಣ್ಣಿಗೆ ಬಲಿಯಾಗಿ, ಬಹಿಷ್ಕಾರಕ್ಕೆ ಒಳಗಾಗಿದ್ದ ನಾಯಕನೂರಿನ ಕೇರಿಯ ಜನ ಸಕರ್ಾರದ ಮಧ್ಯ ಪ್ರವೇಶದಿಂದ ಸ್ವಲ್ಪ ಸಮಾಧಾನದಿಂದಿದ್ದರು. ಎಷ್ಟೆಲ್ಲ ಜನಪ್ರತಿನಿಧಿಗಳು , ಅಧಿಕಾರಿಗಳು ಬಂದು ಹೋಗಿ ಕೆಲವು ತಿಂಗಳೇ ಆದರೆ ಇಲ್ಲಿಯ ಪರಿಸ್ಥಿತಿ ವಿಷಾದ ಹುಟ್ಟಿಸುತ್ತದೆ. ಇವರನ್ನು ಮಾತನಾಡಿಸಿದಾಗ ಅವರ ಮನದಾಳದಿಂದ ಹೊರ ಬೀಳುವ ಮಾತುಗಳು ಆದ್ರ್ರತೆ ತರಿಸುತ್ತವೆ.

ಇನ್ನೇನು ಬಿದ್ದೇ ಬಿಡುತ್ತವೆ ಎನ್ನಿಸುವಂಥ ಮನೆಗಳು , ಇಕ್ಕಟ್ಟಾದ ಸಂದಿಗಳಲ್ಲಿ ಮೈಯೆಲ್ಲ ಗಾಯ ಮಾಡಿಕೊಂಡು ನಿಂತುಕೊಂಡಿವೆ. ಈ ಕೇರಿಯಲ್ಲಿ ಸುಮಾರು 37 ಕುಟುಂಬಗಳಿವೆ. ಒಬ್ಬರಿಗೂ ಹೇಳಿಕೊಳ್ಳಲೂ ಸಹ ತುಂಡು ಭೂಮಿಯಿಲ್ಲ. ಯಾವ ಮನೆಗೂ ಶೌಚಾಲಯವೇ ಇಲ್ಲವೆಂದ ಮೇಲೆ 'ಗ್ರಾಮ ನೈರ್ಮಲ್ಯ' ಎಲ್ಲಿಂದ ಬರಬೇಕು.ಕೆಲವು ಕಡೆ ಮಾಡಲು ಕೆಲಸಗಳಿವೆ, ಆದರೆ ಕೈಗಳಿಲ್ಲ. ನಾಯಕನೂರಿನ ಈ ಕೇರಿಯಲ್ಲಿ ದುಡಿಯಲು ಕೈಗಳು ಸಿದ್ಧ ಇವೆ, ಆದರೆ ಕೆಲಸ ಕೊಡುವ ಮನಸ್ಸುಗಳಿಲ್ಲ. ತಿಪ್ಪಣ್ಣ . ಮಾದರ ಯಾವಾಗಲೋ ನಿಮರ್ಿಸಲಾಗಿರುವ ತನ್ನ ಮನೆಯಲ್ಲಿ 20 ಜನರ ತನ್ನ ಕುಟುಂಬದೊಂದಿಗೆ ಒಟ್ಟಿಗೆ ವಾಸಿಸುತ್ತಿರುವುದಾಗಿ ಹೇಳುತ್ತಾನೆ. 'ಮನೆಗೆ ಅಳಿಯ ಬಂದರೆ ದುರ್ಗಮ್ಮನ ಗುಡಿಯೇ ಗತಿ' ಎನ್ನುತ್ತಾನೆ. ಇದು ತಿಪ್ಪಣ್ಣನ ಕಥೆ ಮಾತ್ರವಲ್ಲ. ಹಲವು ಜನರದ್ದು ಇದೇ ವ್ಯಥೆ. ಕರಿಯಪ್ಪ. ತಾಯಿ ಯಲ್ಲವ್ವ ಮಾದರ ಎಂಬ ಅಜ್ಜನಿಗೆ ಎಂಟು ತಿಂಗಳಿನಿಂದ ವೃಧ್ದಾಪ್ಯ ವೇತನ ಬಂದಿಲ್ಲ. ಕರಿಯಪ್ಪ ತಾಯಿ ಕರಿಯವ್ವ ಮಾದರ ಎಂಬ ಅಜ್ಜನ ಸ್ಥಿತಿಯೂ ಇದೆ. ಈ ಇಳಿವಯಸ್ಸಿನಲ್ಲಿಯೂ ಕೆಲಸ ಹುಡುಕಿಕೊಂಡು ದುಡಿದು ತಿನ್ನದೆ ಗತ್ಯಂತರವಿಲ್ಲದ ಸ್ಥತಿಯಲ್ಲಿ ಈ ಅಜ್ಜಂದಿರಿದ್ದಾರೆ.

ಈ ಕೇರಿ ಅಸಮಾನ ಅಭಿವೃಧ್ದಿಯ ಚಿತ್ರದಂತಿದೆ. ಇಲ್ಲಿ ತಲೆತಲಾಂತರದಿಂದ ಇಂದಿನವರೆಗೂ ಒಬ್ಬನೇ ಒಬ್ಬ ನಿಗೂ ನೌಕರಿ ಸಿಕ್ಕಿಲ್ಲವೆಂದರೆ, ಮೀಸಲಾತಿ ಮರೀಚಿಕೆಯೇ ಅಲ್ಲವೇ? ಸ್ವಾತಂತ್ರ್ಯ ಬಂದು ಆರು ದಶಕಗಳೇ ಆಗಿದ್ದರೂ ನಮ್ಮ ಕೇರಿಗಳು ಇನ್ನೂ ಅಲ್ಲೇ ಇವೆ. ಆಶ್ರಯ ಯೋಜನೆ ಯಾರಿಗೆ ಆಶ್ರಯ ಕೊಟ್ಟಿದೆ? ಸಂಧ್ಯಾ ಸುರಕ್ಷಾ ಯಾರ ರಕ್ಷಣೆಗೆ ನಿಂತಿದೆ?

ನಡುಮಧ್ಯಾಣ ತಲೆ ಮೇಲೆ ಕೈ ಹೊತ್ತು ಗುಂಪಾಗಿ ಕುಳಿತ ಮಹಿಳೆಯರನ್ನು ಮಾತನಾಡಿಸಿದರೆ ಇಸ್ಟು ದಿನ ಉದ್ಯೋಗ ಖಾತ್ರಿ ಒಳಗ ಕೆಲಸಕ್ಕ ಹೊಕ್ಕಿದ್ವಿರಿ, ಈಗ ಅದು ಮುಗಿದೈತಿ.. ಕೆಲಸಕ್ಕ ಯಾರೂ ಕರಿ ಒಲ್ರು , ಬುದ್ದಿ ಬರಬೇಕ ನಿಮ್ಗ ಅಂತಾರೀ.. ಅದ್ಕ ಚಿಂತ್ಯಾಗೇತ್ರಿ. ಈ ಊರಿನಲ್ಲಿ ಖಾಯಿಲೆ ಬಿದ್ದರೆ ಔಷಧಿಗಾಗಿ ಪಕ್ಕದ ಊರಿಗೆ ಹೋಗಬೇಕಾದ ಸ್ಥಿತಿಯಲ್ಲಿ ಈ ಜನರಿದ್ದಾರೆ. ನೀವು ಜಾತ್ರೆ ಮಾಡುವುದಿಲ್ಲವೆ ಎಂಬ ಪ್ರಶ್ನೆಗೆ ಇಲ್ರಿ.. ಒಂದು ಸಾರಿ ಎಲ್ಲಾರೂ ಸೇರಿ ನಮ್ಮ ಕೇರಿ ದುರ್ಗವ್ವನ ಜಾತ್ರಿ ಮಾಡೋಣಂತ ನಿಧರ್ಾರ ಮಾಡಿದ್ವಿ.. ಆದ್ರ ನಮ್ಮ ದುರ್ಗವ್ವಗ ಯಾರೂ ಬನ್ನಿ ಮುಡಿಯಾಕ ತಮ್ಮ ಹೊಲದೊಳಗ ಬಿಟ್ಟುಕೊಳ್ಳಲಿಲ್ರಿ.. ಅದ್ಕ ಬಿಟ್ಟು ಬಿಟ್ವಿರಿ ಎನ್ನುತ್ತಾರೆ. ಶೋಷಣೆ ಸಾಂಸ್ಕೃತಿಕವಾಗಿಯೂ ಇರಬಹುದೆ?

ಈ ಬಹಿಷ್ಕಾರದ ಘಟನೆ ನಡೆದ ನಂತರ ಬಂದ ಜನ ಪ್ರತಿನಿಧಿಗಳು ಎಲ್ಲರ ಮನೆ ರಿಪೇರಿ ಮಾಡಿಸಿಕೊಡುವುದಾಗಿಯೂ, ವಾರಕ್ಕೊಂದು ಸಾರಿ ಬಂದು ನಿಮ್ಮ ಯೋಗಕ್ಷೇಮ ವಿಚಾರಿಸುವುದಾಗಿಯೂ ಹೇಳಿ ಹೋದದ್ದೇ ಬಂತು ಅವರಿಗಾಗಿ ಇವರು ಇನ್ನೂ ಕಾಯುತ್ತಿದ್ದಾರೆ. ಭೂಮಿ ಕೊಡುವುದಾಗಿ ಹೇಳಿದ್ದನ್ನು ಹಗಲಿರುಳು ಕನವರಿಸುತ್ತಿದ್ದಾರೆ. ಭೂಮಿ ಕಿತ್ತುಕೊಳ್ಳಲು ಮಾತ್ರ ಗೊತ್ತಿರುವ ನಮ್ಮ ನಾಡ ಪ್ರಭುಗಳಿಂದ, ತಲೆಮಾರಿನಿಂದಲೂ ನಿರ್ಗತಿಕ ಬದುಕು ದೂಡುತ್ತಿರುವ ತಳಸಮುದಾಯದ ಬದುಕಿಗೆ ಆಧಾರವಾಗಿ ಭೂಮಿಯನ್ನು ದಯಪಾಲಿಸುವ ನೈತಿಕ ಯೋಗ್ಯತೆ ಹೇಗೆ ಬಂದೀತು?

ನಾಯಕನೂರಿನ ಕೇರಿಯ ಜನ ಐವತ್ತು ಲಕ್ಷ ಅನುದಾನ ಬಂದಿರುವನ್ನು ಅಧಿಕಾರಿಗಳಿಂದ ತಿಳಿದು ಆ ದುಡ್ಡಿನಲ್ಲಿ ತಮಗೊಂದು ವಸತಿ ಪ್ರದೇಶ, ಅದರಲ್ಲಿ ಕನಿಷ್ಠ ಅಗತ್ಯಗಳಾದರೂ ಇರುವ ಮನೆಗಳು ಬೇಕೆಂದು ಬೇಡಿಕೆ ಇಟ್ಟಿರುವುದಾಗಿ ಹೇಳುತ್ತಾರೆ. ಯಾರ ಮೇಲೂ ಅವಲಂಬಿತರಾಗದೆ ತಮ್ಮ ಅನ್ನ ತಾವೇ ದುಡಿದುಕೊಳ್ಳಲು , ದುರ್ಗವ್ವನಿಗೆ ಬನ್ನಿ ಮುಡಿಸಲು, ಭೂಮಿಗಾಗಿ ಹಂಬಲಿಸುತ್ತಿದ್ದಾರೆ. ಅವರ ಬೇಡಿಕೆ ಈಡೇರಿಸುವ ಪ್ರಬಲ ಇಚ್ಛಾಶಕ್ತಿ ಇರುವವರಾರು?

ಮತ್ತೆ ಮತ್ತೆ ಏಕಲವ್ಯ

ಇತ್ತೀಚಿನ ಕೆಲ ಬೆಳವಣಿಗೆಗಳನ್ನು ನೋಡಿದರೆ ಇದು ತಳಸಮುದಾಯಗಳ ಅಳಿವಿನ ಕಾಲ ಎನ್ನಿಸುತ್ತದೆ. ನಮ್ಮ ಊರುಗಳ ಶಾಲೆಗಳನ್ನು ಕೋಟರ್ಿಗೆ ಹೋಗಿ ಉಳಿಸಿಕೊಳ್ಳಲು ಹೆಣಗುತ್ತಿರುವಾಗಲೇ, 154 ಪರಿಶಿಷ ್ಟಜಾತಿ ಪಂಗಡಗಳ ಹಾಸ್ಟೆಲ್ಗಳನ್ನು ಮುಚ್ಚುತ್ತಿರುವ ಸುದ್ದಿ ಬಂದಿದೆ. ಕೆಲವು ಹಾಸ್ಟೆಲ್ಗಳ ಒಂದು ರೂಮಿನಲ್ಲಿ ಹಿಡಿಸಲಾರದಷ್ಟು ಹುಡುಗರು ತುಂಬಿಕೊಂಡು ಓದುತ್ತಿರುವುದಕ್ಕೆ ಇನ್ನೂ 200 ಹಾಸ್ಟೆಲ್ ಗಳ ಬೇಡಿಕೆ ಸರಕಾರದ ಮುಂದಿರುವಾಗಲೇ ಈ ನಿಧರ್ಾರವೆಂದರೆ , ನಮ್ಮನ್ನಾಳುವ ಪ್ರಭುಗಳ ನೀತಿ ಕೇವಲ ದಲಿತ ವಿರೋದಿ ಮಾತ್ರವಲ್ಲ , ಮುಖ್ಯವಾಗಿ ಅಸ್ಪೃಶ್ಯರ ವಿರೋಧಿ ಎನಿಸುತ್ತದೆ.

ಏಕಲವ್ಯರು ಮತ್ತೆ ಮತ್ತೆ ಅನಾಥರಾಗುತ್ತಿದ್ದಾರೆ. ಜಮಖಂಡಿಯ ಹಾಸ್ಟೆಲ್ ವೊಂದರಲ್ಲಿ ತಿನ್ನಬಹುದಾದ ಅನ್ನಕ್ಕಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುವ ಸ್ಥಿತಿಗೆ ಬಂದಿರುವಾಗ ಹಾಸ್ಟೆಲ್ ಗಳೆ ಮುಚ್ಚಿದರೆ ಮುಂದೇನು? ಅಕ್ಷರ ದಿಂದಲೆ ಅನ್ನದ ಕನಸು ಕಾಣುವ ಕಣ್ಣುಗಳಿಗೆ ಭರವಸೆಗಳೆ ಉಳಿಯುತ್ತಿಲ್ಲ. ಆಧುನಿಕತೆಯ ನಾಗಾಲೋಟದಲ್ಲಿ ಶಿಕ್ಷಣ ದುಬಾರಿ ಸರಕಾಗಿರುವಾಗ ನಾಯಕನೂರಿನಂಥ ಕೇರಿಗಳಿಂದ ಬರುವ ಕಣ್ಣೀರು ಮಾರವ ಹುಡುಗರು ಕೊಳ್ಳುವುದೆಲ್ಲಿಂದ ಬಂತು ? ಅಕ್ಷರದಿಂದ ಬದುಕಿಗೆ ಬೆಳಕು ಹುಡುಕುವ ಹುಡುಗರ ಆಸೆಗಳು ಕೇರಿಯಲ್ಲೇ ಕಮರಬೇಕೆ?

ಗಾಯಕ್ಕೆ ಮುಲಾಮು ಹುಡುಕುತ್ತಾ..

ಈಗೀಗ ನವಿಲಿನ ಅಸ್ಟೂ ಕಣ್ಣಿನಲಿ ತೋರಲಾಗದ ಗಾಯದ ಚಿತ್ರಗಳು. ಕೇರಿ ಅಲ್ಲೇ ಕಾಲು ಮುರಿದುಕೊಂಡು ಬಿದ್ದಿದೆ. ಸಂವಿಧಾನಿಕ ಮೀಸಲಾತಿ ಅಸಮಾನತೆಯ ಅಭಿವೃಧ್ದಿಗೆ ಬಲಿಯಾಗಿದೆ.ಈ ಗಾಯಗಳು ಕೇವಲ ನಿರ್ಗತಿಕತೆಯಿಂದ ಮಾತ್ರ ಆದವುಗಳಲ್ಲ, ಯಾರೋ ಬಾರಿಸಿದ ಗಾಯಗಳೂ ಸೇರಿವೆ. ಸಾವಿರ ಸಾವಿರ ಕೋಟಿಯ ಲೆಕ್ಕದಲ್ಲಿ ಮಾತನಾಡುವ ನಮ್ಮ ಸರಕಾರದ ಅಭಿವೃಧ್ದಿ ನೀತಿ ಯಾರ ಪರವಾಗಿದೆ ಅಥವಾ ಯಾರ ಹೆಸರಿನಲ್ಲಿ ಯಾರಿಗೆ ದೊರೆಯುತ್ತಿದೆ ಎಂಬುದನ್ನು ಅವಲೋಕಿಸಿದಾಗ ಸಿಕ್ಕ ಕೆಲವು ಚಿತ್ರಗಳು ಮಾತ್ರ ಇವು. ದುಡಿಯಲು ಜನರಿಲ್ಲ ಎಂಬ ಕೊರಗು ನಾಯಕನೂರಿನಂತ ಊರುಗಳಲ್ಲಿ ಎಷ್ಟು ನಿಜ. ಊರು ಮತ್ತು ಕೇರಿಯ ನಡುವಿನ ಅಂತರ ಬರಬರುತ್ತಾ ಕಡಿಮೆಯಾಗಬೇಕಾದದ್ದು ಬದಲಾಗಿ ಆಧುನಿಕತೆಯ ಧಾವಂತದಲ್ಲಿ ಕೇರಿಯನ್ನು ಮರೆತ ಊರು ಬಹಳ ದೂರ ಬಂದು ಬಿಟ್ಟಿದೆ, ಅಲ್ಲಿಯೇ ಉಳಿದವರಿಗೆ ತೆವಳಲೂ ಸಾಧ್ಯವಾಗುತ್ತಿಲ್ಲ.

ಜಾತಿ ಮಾತ್ರ ಇಂದು ತನ್ನ ಕ್ರೌರ್ಯ ಪ್ರದಶರ್ಿಸುತ್ತಿಲ್ಲ, ಭೋಗದ ವಾರಸುದಾರರ ಆಳದ ಸ್ವಾರ್ಥ ಇಲ್ಲಿ ತನ್ನ ಕರಾಳತೆ ಮೆರೆಯುತ್ತಿದೆ. ಇಂದು ದಲಿತ ಲೋಕ ಸಮಾನ ಆಭಿವೃಧ್ದಿಗೆ ಹಪಿಹಪಿಸುತ್ತಿಲ್ಲ, ಉಳಿವಿಗಾಗಿ ಹೋರಾಟ ನಡೆಸುತ್ತಿದೆ. ಅನ್ನ, ವಸತಿ, ಬಟ್ಟೆಗಳು ಕಡಿಮೆಯಾದರೂ ಬದುಕೇವು ವಿದ್ಯಗೇ ಕುತ್ತು ಬಂದರೆ ಹೇಗೆ ಬದುಕುವುದು?

ಯೋಜನೆ, ಆಯೋಗ, ಅಧಿಕಾರ ಯಾವುದಕ್ಕಿವೆ, ಅವು ಇರುವುದಾದರೂ ಎಲ್ಲಿ ಎಂದು ನಮ್ಮ ಕೇರಿಗಳು ಕೇಳುತ್ತಿವೆ. ಉತ್ತರಿಸುವವರು ಸಿಂಹಾಸನ ಉಳಿಸಿಕೊಳ್ಳುವ ಅವಸರದಲ್ಲಿದ್ದಾರೆ. ಹೇಗೆ ಅಭಿವೃಧ್ದಿ ಸಾಧ್ಯ ಎಂಬುದು ಮುಖ್ಯವಾಗದೆ, ಯಾರಿಗೆ ಪಟ್ಟಾಭಿಷೇಕವಾಗಿ ಯಾರು ಸಾರೋಟಿನಲ್ಲಿ ಮೆರವಣಿಗೆ ಹೊರಡಬೇಕು ಎಂಬುದೇ ಮುಖ್ಯವಾಗಿರುವವರಿಂದ ಕೇರಿಯ ಗಾಯದ ಕಣ್ಣಿಗೆ ಮುಲಾಮು ಹೇಗೆ ನಿರೀಕ್ಷಿಸುವುದು?

ಇಷ್ಟೆಲ್ಲದರ ಮಧ್ಯ ಸವಣೂರಿನ ಭಂಗಿ ಬಂಧುಗಳು ನಡೆಸಿದ ಎರಡು ವರ್ಷದ ನಿರಂತರ ಹೋರಾಟದ ಛಲದಿಂದ , ಕಡಿಮೆಯಾದರೂ ಇರಬಹುದಾದ ಕೆಲವು ಸಾಂಸ್ಕೃತಿಕ, ಸಾಹಿತ್ಯಿಕ, ತಳಸಮುದಾಯದ ನಾಯಕರ ಚಿಂತನೆಯ ಇಚ್ಛಾಶಕ್ತಿಯ ಸಾತ್ ನಿಂದ ಎಂಟು ಜನ ಭಂಗಿ ಬಂಧುಗಳಿಗೆ ನೌಕರಿ ದೊರೆತು, ಅನ್ನಕ್ಕೆ ದಾರಿಯಾಗಿದೆ. ಆದರೆ ಮ್ಯಾನ್ ಹೋಲ್ ಗಳಲ್ಲಿ ಬಿದ್ದು , ಪೌರಕಾಮರ್ಿಕರು ಸಾಯುತ್ತಲೇ ಇದ್ದಾರೆ. ಕೆಲವು ಜೀವಗಳನ್ನೇ ಕಳೆದುಕೊಂಡ ಕೆಜಿಎಪ್ ನ ಕುಟುಂಬಗಳು ಅನಾಥವಾಗಿ, ಹೊತ್ತಿನ ಗಂಜಿಗೂ ಪರದಾಡುತ್ತಿವೆ.

ಭೋಜ, ನಾಯಕನೂರು, ಹಾಳಕೇರಿ ಯಂಥ ಊರುಗಳು ಮಾತ್ರ ಅಸಮಾನತೆಯ ದಳ್ಳುರಿಯಲ್ಲಿ ಬದುಕನ್ನು ಸುಟ್ಟುಕೊಳ್ಳುತ್ತಿಲ್ಲ. ಒಂದೇ ಬಿಕ್ಕಿನ ಹಲವು ಮರುದನಿಗಳು ಯಾವುದೇ ಊರಿಗೆ ಹೋದರೂ ಕೇಳಿಸುತ್ತವೆ, ಕರುಣೆ ಇರುವ ಮನಸ್ಸುಗಳಿಗೆ ಮಾತ್ರ. ಶೋಷಣೆಯ ಮುಖಗಳನ್ನು ಹೇಗೆ ವಿಭಾಗಿಸುವುದು? ಆಥರ್ಿಕ, ಸಾಮಾಜಿಕ, ಸಾಂಸ್ಕೃತಿಕ.. ನಮ್ಮ ವಿಂಗಡಣೆಗಳನ್ನು ಅಣಕಿಸುವಂತೆ ಕಾಲ ಮುನ್ನಡೆಯುತ್ತಿದೆ. ಕೇರಿಯೊಂದಿಗಿನ ಊರಿನ ಅಸಹನೆಯನ್ನು ತಾಳಿಕೊಳ್ಳುವ ದಲಿತ ಲೋಕದ ಚೈತನ್ಯವನ್ನು ಹೊಗಳುವದೊ? ಕಂಬಾಲಪಲ್ಲಿಯಲ್ಲಿಯೇ ಅಪರಾಧಿಗಳು ಬಿಡುಗಡೆಯಾಗಿರುವಾಗ ಬಹಿಷ್ಕಾರ ಹಾಕಿದವರಿಗಾಗಿಯಗಲೀ , ಕೇರಿಯ ಮೇಲೆ ದೊಡ್ಡ ದೊಡ್ಡ ಕಲ್ಲು ತೂರಿದವರಿಗಾಗಲಿ ಶಿಕ್ಷೆ ಹೇಗೆ ನಿರೀಕ್ಷಿಸಬಹುದು? ಒಂದು ಹಂತಕ್ಕೆ ಕೇರಿಯ ಜೀವಗಳಿಗೆ ಮನೆ ಕೊಡಬಹುದು, ಭೂಮಿ ಕೊಡಬಹುದು, ಆದರೆ ಅಂದು ರಾತ್ರಿ ಮನೆಯ ಮೇಲೆ ಕಲ್ಲುಗಳು ಬಿದ್ದಾಗ ಅನುಭವಿಸಿದ ತಲ್ಲಣಗಳಿಗೆ, ಬಿದ್ದ ಹೊಡೆತಕ್ಕೆ , ಶತಶತಮಾನದಿಂದಲೂ ಅನುಭವಿಸುತ್ತಲೇ ಬಂದು ಮನಸ್ಸಿನೊಳಗೆ ಉಂಟಾಗಿರುವ ಮಾಯದ ಗಾಯಗಳಿಗೆ ಮುಲಾಮು ಯಾರು, ಹೇಗೆ ಕೊಡಲು ಸಾಧ್ಯ?

ವೀರಣ್ಣ ಮಡಿವಾಳರ










ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ