ಭಾನುವಾರ, ನವೆಂಬರ್ 13, 2011

ಪೋಗದಿರಲೋ ವಸಂತ...

ಎಲೆ ಉದುರಿ ಬಿದ್ದ ಬೋಳು ಮರದ ಎದೆಯಲ್ಲೊಂದು ಹೊಸ ಚಿಗುರು. ಒಂದಿನಿತು ಬಿಡದೆ ಗಿಡವನಪ್ಪಿದ ಬಳ್ಳಿಯ ಮೈತುಂಬ ಹೂಮೊಗ್ಗು. ಬದುಕಿನ ದಣಿವನೆಲ್ಲ ತೋರುವ, ಇನ್ನೇನು ತನ್ನ ಕಾಲ ಮುಗಿಸಲಿರುವ ಹಳದಿ ಬಣ್ಣ, ನನ್ನನ್ನು ಯಾರೂ ತಡೆಯಲು ಸಾಧ್ಯವೇ ಇಲ್ಲ, ಇನ್ನು ಮುಂದೆ ನನ್ನದೆ ಎಲ್ಲ ಎಂಬಂತೆ ಹೊಮ್ಮುತ್ತಿರುವ ಹಸಿರು, ಒಂದೇ ಮರದಲ್ಲಿನ ಈ ಎರಡರ ಸೋಜಿಗ ತುಂಬ ಆಹ್ಲಾದಕರವಾದದ್ದು. ಬದುಕಿನ ಬವಣೆಗಳಲ್ಲಿ ಮುಳುಗೆದ್ದ ಮುಖದಲ್ಲಿ ಮಂದಹಾಸ ಮೂಡಿಸುವಂತೆ ಮತ್ತೆ ಬಂದಿದ್ದಾನೆ ವಸಂತ ಬಣ್ಣ ಬಣ್ಣದ ಮೋಡಗಳ ತುರುಬಿಗಿಟ್ಟುಕೊಂಡು, ಬೆಂದು ಬಸವಳಿದ ಮಾವು ಬೇವುಗಳಿಗೆ ಹಸಿರಿನುಸಿರಾಗಿ, ಕೋಗಿಲೆಯ ಕೊರಳೊಳಗಿನ ಹರುಷದ ಹೊನಲಾಗಿ, ಹಾಡುತ್ತಾ ಕುಣಿಯುತ್ತಾ, ಅತ್ತೂ ಅತ್ತೂ ದಣಿದ ಕಣ್ಣುಗಳಿಗೆ ಸಾಂತ್ವನವಾಗಿ ಬಂದಿದ್ದಾಳೆ ಕೋಟಿ ಹೂವಿನ, ಕೋಟಿ ಬಣ್ಣದ ಚಲುವಿನ ಚೈತ್ರ. ಎದೆಯ ಗೂಡೊಳಗಿನ ಎಲುಬಿನ ಹಂದರವ, ದನಕರುಗಳು ಹೆದರುವಂತೆ ತೋರಿಸುತ್ತಿರುವ ಬೆಟ್ಟಕ್ಕೆ ಈಗ ಎಳಸು ಹುಲ್ಲಿನ ಹೊದಿಕೆ. ಒಣಗಿದ ರವುದಿಯ ತಿಂದು ತಿಂದು ಬಡಕಲಾಗಿ ಹೋಗಿದ್ದ ಆಡು ಕುರಿಗಳ ಕಣ್ಣಲ್ಲಿ ಮಿಂಚೊಂದು ಮೂಡಿದೆ. ತತ್ರಾಣಿಯ ನೀರು ಖಾಲಿಯಾಗಿ ಕೊಳಲೂದಲು ತ್ರಾಣವಿಲ್ಲದೆ ಎಲೆ ಕಳಚಿದ ಗಿಡದ ಕೆಳಗೆ ವಸಂತಾಗಮನದ ಕಾತರದಲ್ಲಿದ್ದ ದನಗಾಹಿ ಹುಡುಗನ ಪ್ರಜ್ಞೆಯಲ್ಲೊಂದು ಭರವಸೆಯ ಸೆಳಕು. ಎದೆಯ ನೋವೆಲ್ಲ ಕೊಳಲದನಿಯಾಗಿಸಿದವನ ತಪಸ್ಸಿಗೆ ಫಲ ಸಿಕ್ಕಿದೆ. ತತ್ರಾಣಿ ತುಂಬ ಜೀವ ಜಲ, ಸಕಲ ಜೀವಗಳಿಗೆ ತಿಂದು ತಿಂದು ಮೀಗುವಷ್ಟು ಹಸಿರ ಮೇವು. ಮನುಷ್ಯ ಚೈತನ್ಯದಾಳದಲ್ಲಿ ಪ್ರಕೃತಿಯ ಧ್ಯಾನ, ಪ್ರಕೃತಿಯ ಪ್ರತಿ ಮಿಡಿತದಲೂ ಜೀವ ಪೊರೆವ ಹಂಬಲ.


ಸಿಹಿಯುಣ್ಣುವ ಆಸೆಯನ್ನು ಅಣಕಿಸುವಂತೆ ಈ ದುಬಾರಿಯ ದಿನಗಳಲ್ಲಿ ಮತ್ತೆ ಬಂದಿದೆ ಯುಗಾದಿ. ತಾನು ಹೊರುವ ಚೀಲದಷ್ಟೆ ಮಣಭಾರವಾಗಿರುವ ಬದುಕನ್ನು ಹೊತ್ತು ಮಾಲಿಕನಿಗೆ ಕೊಟ್ಟು, ಬೆಳೆದು ನಿಂತ ಮಗಳ ಹೊಸ ಸೀರೆಯ ಕನಸನ್ನು ಈ ಸಲದ ಯುಗಾದಿಗಾದರೂ ನನಸಾಗಿಸುವ ಹಂಬಲ ಅಪ್ಪನಿಗೆ. ಮದುವೆಯಾದದ್ದೆ ಬಂತು ತವರನ್ನು ಕಂಡೆ ಇರದ ಹಿರಿಮಗಳನ್ನು ಅಳಿಯನ ಜೊತೆ ಯುಗಾದಿಯ ನೆಪದಲ್ಲಾದರೂ ಕರೆಸಿಕೊಂಡು ಹೊಸ ಬಟ್ಟೆ ಕೊಟ್ಟು ಹಬ್ಬ ಮಾಡುವ ಅವ್ವನ ಅಭಿಲಾಷೆಗೆ ಎಂದಿಗಿಂತ ನಾಲ್ಕು ಮನೆವಾಳ್ತೆಯ ಹೆಚ್ಚಿನ ಕೆಲಸ. ವರ್ಷದ ಎಲ್ಲ ದಿನಗಳಲ್ಲೂ ದುಡಿಯುವುದಕ್ಕೆ ಹುಟ್ಟಿದಂತಿರುವ ಕೋಟಿ ಜನ ಹಬ್ಬ ಮಾಡಲು ಯುಗಾದಿಗೇ ಕಾಯುವ ನಮ್ಮ ನೆಲದ ಸೋಜಿಗದ ಗುಣ ಅಪರಿಮಿತವಾದದ್ದು. ಹೊಲದಲ್ಲಿನ ಹಸಿರಿನ ಹಬ್ಬವೆ, ಮನೆಯಲ್ಲಿ ಹೊಸ ಬಟ್ಟೆ ತೊಡುವ ಇಚ್ಛಾಶಕ್ತಿಯನ್ನು ಹುಟ್ಟಿಸುತ್ತದೆ. ಎತ್ತರೆತ್ತರ ಏರುವ ಬೆಲ್ಲ ಬೇಳೆಯ ಬೆಲೆಯ ಜೊತೆ ಸೋತರಟ್ಟೆಗೆ ದೊರೆಯದ ಕನಿಷ್ಟ ಕೂಲಿ ಪೈಪೋಟಿಗೆ ಬಿದ್ದು ಹಬ್ಬದಡುಗೆ ಮಾಡಿಸಲೇ ಬೇಕೆಂಬ ಪಣ ತೊಡುತ್ತದೆ. ದುಡಿದ ದುಡಿಮೆಗೆ ತಕ್ಕ ದುಡ್ಡು ಕೊಡುವುದಂತೂ ನಮ್ಮನ್ನು ದುಡಿಸಿಕೊಳ್ಳುವವರಿಗೆ ಸಾಧ್ಯವಾಗಲೇ ಇಲ್ಲ, ’ಕನಿಷ್ಟ ಕೂಲಿಯನ್ನಾದರೂ ಕೊಡಿ ಯುಗಾದಿ ಹಬ್ಬ ಬಂದಿದೆ’ ಎಂದು ಬೊಗಸೆಯೊಡ್ಡಿ ಗೋಗರೆದವರಿಗೆ ಕೊಪ್ಪಳದಲ್ಲಿ ಲಾಟಿ ಏಟಿನ ಸಿಹಿಯುಣ್ಣಿಸಿದ್ದಾರೆ. ಇದು ಒಂದು ಊರಿನ ಒಂದು ಬವಣೆಯ ಚಿತ್ರವಲ್ಲ. ನಮ್ಮ ನಾಡಿನ ಎಲ್ಲ ಊರಿನ ಎಲ್ಲ ಚಿತ್ರಗಳಲ್ಲೂ ಇದೇ ಬಿಕ್ಕಿನ ಬೇರೆ ಬೇರೆ ದನಿಗಳಿವೆ. ಇವುಗಳನ್ನು ಕಾಣುವ ಕೇಳುವ ಯಾವ ಮನಸ್ಸುಗಳಿಗೂ ಪರಿಹಾರ ಒದಗಿಸುವ ದಾರಿಗಳನ್ನು ಕಂಡುಕೊಳ್ಳುವುದು ಬೇಕಿಲ್ಲ. ದುಡಿಮೆಯ ಸಂಸ್ಕೃತಿಗೆ ಇಂದು ಎಲ್ಲಿಲ್ಲದ ಸವಾಲುಗಳು, ಸಂದಿಗ್ಧತೆಗಳು. ಎಲ್ಲ ಸಂಪತ್ತನ್ನು ಏಕತ್ರವಾಗಿಸಿಕೊಂಡಿರುವ ಸಾಹುಕಾರರಿಗೆ ನೆಲ ಜಲ ಗಾಳಿಯೂ ಸಹ ಮಾರಿಕೊಳ್ಳುವ ಸರಕು. ಹೌದು ಈ ಯುಗಾದಿಯ ಪ್ರೀತಿ ಅನೂಹ್ಯವಾದದ್ದು. ಕಣ್ಣ ಹನಿಗಳ ಕಣಜ ಎದೆಯಲ್ಲಿ ಒಟ್ಟು ಗೂಡಿಸಿಕೊಂಡು, ಹೆಂಡತಿ ಮಕ್ಕಳ ಹೃದಯದಲ್ಲಿ ಸ್ವಚ್ಛಂದ ಹಕ್ಕಿಗಳ ಚಿಲಿಪಿಲಿ ಕೇಳುವ ಹುಮ್ಮಸ್ಸನ್ನು ಹೊಮ್ಮಿಸುವ ಯುಗಾದಿಯಿಲ್ಲದಿದ್ದರೆ ಬಹುಶಃ ಎಲ್ಲ ಬದುಕು ನಿಸ್ತೇಜ, ಅಸಹ್ಯ.

ಜಾಗತಿಕ ವಹಿವಾಟಿನ ಇಂದಿನ ದಿನಗಳಲ್ಲಿ ಮಾರುಕಟ್ಟೆಯ ಮೇಲೆ ಮಾರಾಟಕ್ಕಿಡದ ವಸ್ತುವೇ ಇಲ್ಲ. ಇಲ್ಲಿ ಎಲ್ಲವೂ ಬಿಕರಿಗಿದೆ. ಒಂದು ಕಾಲವಿತ್ತು, ಅವರು ಬೆಳೆದ ಬೇಳೆ ಇವರಿಗೆ, ಇವರ ಗಾಣದ ಬೆಲ್ಲ ಅವರಿಗೆ, ಇವರ ಮನೆ ಒಲೆಗೂ, ಅವರ ಮನೆ ಬೆಂಕಿಗೂ ಬಿಡಿಸಲಾಗದ ನಂಟು. ಮನೆಯಾಳಿನ ಮಗನಿಗೆ ಕಡಿಮೆ ದರ್ಜೆಯದ್ದೆ ಆದರೂ ಹೊಸ ಬಟ್ಟೆ ಕೊಡುವಷ್ಟು ಉದಾರವಾಗಿದ್ದ ಜಮೀನ್ದಾರ. ಇಂದಿನ ಕಾರ್ಪೊರೇಟ ಒಡೆಯನ ಉಪದೇಶ ಬೇರೆ. ದುಡಿದವರ ದುಡಿತ ತಂದು ಕೊಟ್ಟ ಐಶಾರಾಮಿಕೆಯ ಭೋಗದಲ್ಲಿ ಮೈ ಮನಸ್ಸುಗಳನ್ನು ಜಡವಾಗಿಸಿಕೊಂಡು ಸದಾ ಸುಖ ನಿದ್ರೆಯ ಮಂಪರಿನಲ್ಲೆ, ಸಮಯದ ಜೊತೆ ಜಿದ್ದಿಗೆ ಬಿದ್ದು ದುಡಿಯುವವರಿಗೆ ’ಹೀಗೆ ದುಡಿಯಬೇಕು, ಹಾಗೆ ದುಡಿಯಬೇಕು’ ಎಂಬ ಪಾಠ ಕೇಳುವುದು ನಮಗೇನು ವಿಸ್ಮಯ ಮೂಡಿಸುವುದಿಲ್ಲ. ಪ್ರಕೃತಿಯ ಮಗುವಾಗಿ ಹುಟ್ಟಿದ ಮನುಷ್ಯನಿಗೆ ’ಹೊಟ್ಟೆ ತುಂಬ ಹಾಲು ಕುಡಿದು ಸೊಂಪಾಗಿ ಬೆಳಯೊ ಕಂದಾ’ ಎಂದು ಎದೆಯೂಡುವ ಅವ್ವನಿಗೆ, ಯಾವಾಗ ಮನುಷ್ಯ ಹಾಲಿನ ಕಡಲೇ ಬಗಿದು ಕುಡಿಯಬೇಕೆಂದು, ಹೆತ್ತವ್ವನ ಎದೆಯನ್ನೆ ಸೀಳುವ ದುಸ್ಸಾಹಸಕ್ಕಿಳದನೊ, ಹೇಗೆ ಸಹಿಸಿಯಾಳು ಪ್ರಕೃತಿ, ಹುಟ್ಟಿಸಿದವಳೆ ಹುರಿದುಮುಕ್ಕದೆ ವಿಧಿಯಿಲ್ಲ. ಸುನಾಮಿಯಾಗಿ, ಚಂಡಮಾರುತವಾಗಿ, ಅಕಾಲಿಕ ಮಳೆಯಾಗಿ ಹೇಗೆ ಬೇಕೂ ಹಾಗೆ ಮನುಷ್ಯ ಜೀವದ ಸೊಕ್ಕು ಮುರಿಯುತ್ತಿದ್ದಾಳೆ.

ಈಗ ನಮ್ಮ ಮುಂದಿರುವುದು ಯಾವ ಯುಗದ ಆದಿ ಅಥವಾ ಯಾವ ಯುಗದ ಅಂತ್ಯ. ಜೀವ ಹುಟ್ಟಿದಾಗಿನ ಆದಿಯ ಅಳುದನಿಗೆ ಇಂದು ಹಲವು ರೂಪ. ಹಿಂದಾದರೆ ರಾತ್ರಿ ಮೂಡುವ ಚುಕ್ಕಿಯನ್ನು ಕಂಡರೆ, ನಾಳೆ ಬೀಳುವ ಮಳೆ ಗೊತ್ತಾಗುತ್ತಿತ್ತು. ಇಂದು ಪರಿಸ್ಥಿತಿ ಹಾಗಿಲ್ಲ ಮೊನ್ನೆ ಸುರಿದ ಅಕಾಲಿಕ ಮಳೆಗೆ ಎದೆಮಟ್ಟ ಬೆಳೆದ ಗೋದಿ ನೆಲಕಚ್ಚಿತು. ಹೋಳಿಗೆ ಮಾಡುವುದು ಹೇಗೆ ? ಇದು ಯಾವ ಕಾಲ ಎಂಬುದೇ ತಿಳಿಯದ ಕಾಲದಲ್ಲಿ ನಮ್ಮ ಬದುಕಿದೆ. ಯಾರು ಹೇಗೆ ಎಂಬುದು ಅರ್ಥವಾಗದ, ಎಲ್ಲಿ ಯಾವಾಗ ಏನು ನಡೆಯುತ್ತದೆ ಎಂಬ ನಮ್ಮ ಎಣಿಕೆ ನಂಬಿಕೆ ಬುಡಮೇಲಾಗುವ, ಯಾರದೋ ಕೈಯಲ್ಲಿ ತಮ್ಮ ಪ್ರಾಣವನ್ನು ಕೊಟ್ಟು, ಆಡಿಸಿದಂತೆ ಆಡುವ ತೊಗಲು ಗೊಂಬೆಯಾಗಿರುವ ಅನ್ನದಾತರ ಸ್ಥಿತಿ, ಈ ಸಂಧಿಗ್ಧತೆ ಇಷ್ಟು ಭೀಕರವಾಗಿ ಇತಿಹಾಸದ ಯಾವ ಪುಟದಲ್ಲೂ ಇರಲಿಕ್ಕಿಲ್ಲ. ಪ್ರತಿ ಯುಗಾದಿಯಂದು ಪ್ರಕೃತಿ ಮೈಪೊರೆ ಕಳಚಿ ಹೊಸ ಜೀವ ಉಕ್ಕಿಸುತ್ತದೆ, ಮನುಷ್ಯ ಬದುಕು ರವರವ ಬಾಯಾರಿಕೆಯನ್ನು ತಣಿಕೊಂಡು ಮತ್ತೆ ಬದುಕುವ ತ್ರಾಣವನ್ನು ಆವಾಹಿಸಿಕೊಳ್ಳುತ್ತದೆ. ಆದರೆ ಇದರ ಪರಿಣಾಮ ಮಾತ್ರ ಹೇಳತೀರಲಾಗದು.

ಹೋದ ಯುಗಾದಿಯಿಂದ ಇಂದಿನ ಯುಗಾದಿಯ ವರೆಗೆ ನಡೆದ ಒಟ್ಟು ಚಿತ್ರಗಳ ಆಚೆ ನಿಂತು ನೋಡಿದರೆ ಹಳೆಯ ಬಿಕ್ಕಿಗೆ ಹೊಸ ಕಾರಣಗಳಿದ್ದಂತೆ ತೋರುತ್ತದೆ. ಜಾಲಿ ಮರದಲ್ಲಿ ನೇಣಿಗೆ ಬಿದ್ದ ಅದೆಷ್ಟು ಅನ್ನದಾತರಿಗೆ ಬದುಕು ಸಹ್ಯವಾಗಿಸುವ ಕನಿಷ್ಟ ಕ್ರಿಯೇಯನ್ನು ನಡೆಸದ ನಮ್ಮನ್ನಾಳುವ ಪ್ರಭುಗಳು ತಮ್ಮ ಪ್ರತಿಷ್ಠೆಯ ಸಮಾರಂಭದಲ್ಲಿ ರೈತಗೀತೆಯನ್ನು ಹಾಡಿಸಿದರೆ ಅದು ಶೋಕಗೀತೆಯಾಗಿ ಮಾತ್ರ ಕೇಳಿಸುತ್ತದೆ. ಒಂದು ಕಡೆ ವಸಂತ ಬವಣಿತರ ಬದುಕಿನ ಅಂತಃಶಕ್ತಿಯನ್ನು ಕಂಡೆ ಜೀವ ಹಿಡಿದಿದ್ದಾನೆ, ಇನ್ನೋಂದು ಕಡೆ ಹುಟ್ಟಿಸಿದ ಮಕ್ಕಳು ಹಸಿವಿನ ಹಾಹಾಕಾರದಲ್ಲಿ ತೊಳಲುತ್ತಿದ್ದರೂ ಒಡೆದ ಗಡಿಗೆಯ ಚಿಪ್ಪಿನಲ್ಲಿ ಆರಿಸಿ ತಂದ ಭತ್ತವನ್ನು ಕುದಿಸಿ ಗಂಜಿ ಕುಡಿಸುವುದನ್ನು ನೇರ ಕಣ್ಣುಗಳಿಂದ ದಿಟ್ಟಿಸಿ, ಒಳಗೊಳಗೆ ಬಿಕ್ಕುವ ಚೈತ್ರಳಿಗೆ ಎಲ್ಲವೂ ವಿಷಾದ ಚಿತ್ರಗಳಾಗಿ ಕಾಡುತ್ತವೆ. ಕೋಟಿ ಜನದ ಬೋಳು ಬದುಕೇ, ಕೆಲವು ಉಳ್ಳವರ ಪಾಲಿಗೆ ಸರಕಾಗಿರುವುದು ಈ ಸಲದ ಯುಗಾದಿಗೆ ಮತ್ತೊಂದು ಸೇರ್ಪಡೆ. ಹೌದು ಎಲ್ಲೋ ಎಡವಟ್ಟಾಗುತ್ತಿದೆ. ಈ ಎಡವಟ್ಟುಗಳು ತಂದೊಡ್ಡಿರುವ ದಾರುಣತೆಯನ್ನು ಮಾತ್ರ ಅನುಭವಿಸುವ ನಾವು ಇವುಗಳ ವಾರಸುದಾರರನ್ನು ಬೊಟ್ಟು ಮಾಡಿ ತೋರಿಸುವಂತಿಲ್ಲ.

ಮತ್ತೆ ಬಂದ ಯುಗಾದಿಗೂ ಹಸನಾದ ಬದುಕಿನ ಕನಸು ನನಸಾಗಿಸುವ ತಾಕತ್ತಿಲ್ಲ. ಚೆಂದದ ಬದುಕಿನ ಕನಸುಗಳನ್ನೂ ಎದೆಯೊಳಗೆ ಬೆಳೆಸಿಕೊಳ್ಳುವ ಕನಸುಗಾರರಿಗೆ ಅವುಗಳನ್ನು ಸಾಕಾರಗೊಳಿಸುವ ಅಧಿಕಾರವಿಲ್ಲ. ಅಧಿಕಾರವುಳ್ಳ ಮಹಾಮಹಿಮರ ಭೋಗದ ಮತ್ತಿನಲ್ಲಿ, ದೀನರ ಬದುಕು ಕೆಟ್ಟ ಕನಸುಗಳಾಗಿ ಕಾಡುವುದಕ್ಕೆ ಅವಕಾಶವಿಲ್ಲ. ಯುಗಾದಿ ಮತ್ತೊಂದು ಹರುಷದ ಹಬ್ಬವಾಗಿ ಬಂದಿಲ್ಲ. ಒಂದೇ ಮನದ ಕೋಟಿ ಬಿಕ್ಕುಗಳನ್ನು ಸಹ್ಯವಾಗಿಸುವ ಕನಿಷ್ಟ ಶಕ್ತಿ, ಜೀವ ಚೈತನ್ಯವನ್ನು ಪ್ರತಿ ಜೀವ ಕನದಲ್ಲೂ ಅನುರಣನಗೊಳಿಸುವ ಸಾಮರ್ಥ್ಯ ಮಾತ್ರ ಈ ಯುಗಾದಿಗೆ ಇದೆಯೇನೋ. ಅದರ ಆಚೆ ನಾವಾಗಿಯೇ ಮಾಡಿಕೊಂಡ ಎಲ್ಲ ಅವಘಡಗಳಿಗೆ ಯಾರನ್ನೂ ದೂರಿ ಪ್ರಯೋಜನವಿಲ್ಲ, ಅದರಲ್ಲೂ ಮುಖ್ಯವಾಗಿ ನಮಗೆ ಬದುಕುವ ಅವಕಾಶ ಕೊಟ್ಟ ಪ್ರಕೃತಿಯನ್ನಂತೂ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಯಾರಿಗೂ ಅರ್ಹತೆ ಇಲ್ಲ. ಇದೇನಿದ್ದರೂ ನಮ್ಮ ಮತ್ತು ನಮ್ಮ ಬದುಕಿನ ಜವಾಬ್ದಾರಿ ಹೊತ್ತ ಆಳುವ ಪ್ರಭುಗಳ ನಡುವಿನ ಜಟಾಪಟಿ. ಈ ಜಗಳದಲ್ಲಿ ಸೋಲು ನಮ್ಮ ಕಡೆಯೇ ನೋಡುತ್ತಿದ್ದರೂ, ಸಮಾನತೆಯ ಕನಸಿನ ಬೀಜಕ್ಕೆ ಮಾತ್ರ ನಮ್ಮ ಬೆವರಿನ ಹನಿಗಳು ನೀರುಣಿಸುತ್ತಿವೆ. ಈ ಯುಗಾದಿಗೆ ಸತ್ತ ಬೀಜಗಳಿಗೆ ಜೀವ ಕೊಡುವ ಶಕ್ತಿ ಇರುವುದಾದರೆ, ಬವಣಿತರ ಬದುಕಿನ ಕನಸಿಗೆ ಚೈತನ್ಯ ತುಂಬುವ ಶಕ್ತಿ ಇದ್ದೆ ಇರುತ್ತದೆ. ಪ್ರಕೃತಿಯ ಪ್ರತಿ ಬದಲಾವಣೆಯಿಂದಲೂ ಕಲಿಯಬೇಕಿದೆ ಕಲಿತಂತೆ ನಡೆಯುವ ಉತ್ಸಾಹವನ್ನು ಉಳಿಸಿಕೊಳ್ಳಬೇಕಿದೆ. ಎದೆ ತುಂಬ ಆಸೆ, ಕಣ್ಣ ತುಂಬ ಕನಸು ಒಟ್ಟುಗೂಡಿಸಿಕೊಂಡು ಇಲ್ಲೆ ಎಲ್ಲೋ ಹಾಳಾಗಿ ಹೋಗಿರುವ ವಸಂತನನ್ನು ಕರೆತರಬೇಕಿದೆ. ಎಲ್ಲ ದಾಳಿಗಳೂ, ಎಲ್ಲ ಹತಿಯಾರಗಳೂ, ಎಲ್ಲ ಕದನಗಳನ್ನೂ ಕಂಡು ಕಂಡು ಬೇಸತ್ತಿರುವ ಚೈತ್ರಳಿಗೆ, ಒಂದೇ ಹೊಟ್ಟೆಯಿಂದ ಹುಟ್ಟಿ ಬಂದ ನಮ್ಮೆಲ್ಲರ ಸಹಬಾಳ್ವೆಯನ್ನು ಈ ಹಬ್ಬದ ನೆವದಲ್ಲಾದರೂ ಮನಗಾಣಿಸಬೇಕಿದೆ.

ಈ ಸಲದ ಯುಗಾದಿಯ ಹೊಸ್ತಿಲಲ್ಲಿ ನಿಂತು ಬಯಸುವುದೇನು ಮತ್ತದೇ ವಸಂತನೊಳಗೆ ಚೈತ್ರ ಒಂದಾಗಿ ಬದುಕಿಗೆ ಭರವಸೆಯ ಬೆಳಕನ್ನು ಹೊತ್ತು ತರಲಿ. ದಾರಿ ತುಂಬಾ ತುಂಬಿರುವ ದುರಂತಗಳ ಬಾಯಾರಿಕೆ ತಣಿಯಲಿ. ಜಾತಿ ಧಿಕ್ಕರಿಸಿದ ಕಾರಣಕ್ಕೆ, ಊರಿನವರಿಂದ, ಸಂಭಂಧಿಕರಿಂದ, ಅಪ್ಪ ಅಮ್ಮ ತಮ್ಮ ಅಕ್ಕ ತಂಗಿಯರಿಂದ ಬಹಿಷ್ಕಾರಕ್ಕೆ ಒಳಗಾಗಿ ದಿನವೂ ಬಿಕ್ಕುತ್ತಿರುವ ನಮ್ಮಂಥವರಿಗೆ ಈ ಕರುಳ ಬಳ್ಳಿಗಳು ಮತ್ತೆ ದೊರಕಲಿ.

ವೀರಣ್ಣ ಮಡಿವಾಳರ



1 ಕಾಮೆಂಟ್‌: