ಬುಧವಾರ, ಡಿಸೆಂಬರ್ 28, 2011

ದ್ವಿಪದಿ


ಬಣ್ಣದ ಕವಿತೆ ಬರೆಯಲು ಹೋದೆ ಕೆಂಪಾಯಿತು
ಭಾರದ ಕವಿತೆ ಬರೆಯದೆ ಉಳಿದರೂ ಹಸಿರಾಗಲಿಲ್ಲ

ಯಾರು ಊರಿದ ಬೀಜವೋ ಈ ಮರದ ತುಂಬ ಬರೀ ಹಣ್ಣು
ತಿನ್ನಲಾಗದು ಗಾಯ ಮಾಡಿದವರ ಹೆಸರು ಹೇಳುವಂತಿಲ್ಲ ಬಾಯೆಲ್ಲ ಹುಣ್ಣು

ಹೇಳಬೇಡವೇ ಮುದ್ದು ಸುರಿಸಿದ ಕಣ್ಣೀರಿನ ಲೆಕ್ಕ ಯಾರಿಗೂ
ಮಾಡದ ಸಾಲ ತೀರೋವರೆಗೂ ಹೆಣಗಲೇಬೇಕು ನಾಡ ಪ್ರಭುವಾಜ್ಞೆ ಸುಮ್ಮನೆ ಅಲ್ಲ

ಬಂದೆಯಾ ಬಾ ಮಲಗಲು ಇಲ್ಲಿ ಕಂಬಳಿಯಿಲ್ಲ ಏನು ಮಾಡೋದು
ಬೀದಿಯ ಹಾಳು ಮಣ್ಣಾದರೂ ಆದೀತು ಹೊಟ್ಟೆಗೆ ಹಳಸಲಿಗೂ ಗತಿಯಿಲ್ಲ

ಕೇವಲ ಮನುಷ್ಯರು

ಕೊಂಡದ ಮೇಲಿನ ನಡಿಗೆ ಕೆಂಡಕ್ಕೆ ರೇಸಿಗೆ ಹುಟ್ಟುವ ಹಾಗೆ


ಕಾಲನ ಕಾಲಿಗೆ ಹಸಿಗಾಯ

ಜಗತ್ತು ಕಾಲದ ಜೊತೆ ಪೈಪೋಟಿಗೆ ಬಿದ್ದು ಆಧುನಿಕತೆ ಅಭಿವೃಧ್ಧಿ ತಂತ್ರಜ್ಞಾನವೆಂದು ಬೊಬ್ಬೆಹೊಡೆದು ನಾಗಾಲೋಟದಲ್ಲಿ ಓಡುತ್ತಿದ್ದರೆ ಮತ್ತೊಂದು ಕಡೆ ಇದೇ ಕಾಲ ಕತ್ತು ತಿರುಗಿಸದೆ ಕಾಲು ಮುರಿದುಕೊಂಡು ಬಿದ್ದಿದೆ. ಚಲಿಸುವುದಂತೂ ದೂರದ ಮಾತು. ಪ್ರತಿ ಹೆಜ್ಜೆಗೂ ಜಾಲಿಮುಳ್ಳು, ಶತಶತಮಾನದಿಂದಲೂ ಮಾಯದ ಹಸಿಗಾಯಗಳು ದೊಡ್ಡದಾಗುತ್ತಲೇ ಇವೆ.

ಸವಣೂರಿನ ಮಾಂಸದ ಮಾರುಕಟ್ಟೆಯ ಒಂದು ಮೂಲೆಯಲ್ಲಿ ನಾಗರಿಕ ಸಮಾಜದಿಂದ ದೂರವೆ ಉಳಿದಂತಿರುವ ಹದಿನೇಳು ಕುಟುಂಬಗಳು ಮಾತ್ರ ನವಾಬರು ಕೊಟ್ಟ ಕೊಟ್ಟಿಗೆಗಳಂಥ ಜೀವಂತ ನರಕದಲ್ಲಿ ಬೀಡುಬಿಟ್ಟು ನರಳಾಟವನ್ನೆ ಬದುಕಾಗಿಸಿಕೊಂಡು ರೋಗಗಳನ್ನು ತಮ್ಮ ಒಡಹುಟ್ಟಿದವರಂತೆ ಭಾವಿಸಿ ಸಾವುಗಳೆಲ್ಲ ಸಹಜವೆಂದುಕೊಳ್ಳುತ್ತಲೇ ಪಾಪಕೂಪದಲ್ಲಿದ್ದರೂ ಹುಸಿಮುಗುಳು ತುಟಿಯ ಮೇಲೆ ಭಾರವಾಗಿ ಹೊತ್ತು ತಲೆತಲಾಂತರದಿಂದ ಊರಮಂದಿಯ ಮಲ ಹೊರುತ್ತಾ ಬದುಕು ದೂಡುತ್ತಿವೆಯೆಂದರೆ.... ಅಂತಃಕರಣ ಮನುಷ್ಯತ್ವ ಪದಗಳು ನಾಚಿಕೆಪಡುತ್ತವೆ.

ಬೀದಿಯಲ್ಲಿ ನಿಂತು ನೋಡಿದರೆ ಒಂದರಮೇಲೊಂದು ವಾಲಿಕೊಂಡು ನಾಗರಿಕ ಸಮಾಜವನ್ನು ಅಣಕಿಸುವಂತೆ ತೋರುವ ಐದು ಜೋಪಡಿಗಳು. ಅಲ್ಲಲ್ಲಿ ಚೆಲ್ಲಾಪಿಲ್ಲಿ ಬಿದ್ದಿರುವ ಚಿತ್ರಗಳಂತಹ ಅಮಾಯಕ ಜೀವಗಳು ತುಟಿಕಚ್ಚಿ ಬಿಕ್ಕುತ್ತಾ ಭೇಟಿಗೆ ಬಂದವರನ್ನು ಭಾಗ್ಯದೆವತೆಗಳೆಂದೇ ಭಾವಿಸಿ ನಿರೀಕ್ಷೆಯ ಕಂಗಳಿಂದ ಎವೆಯಿಕ್ಕದೆ ನೊಡುತ್ತವೆ. ಹೊರಬಾಗಿಲಲ್ಲೆ ಒಲೆಹೂಡಿದ್ದರೆ, ಒಳಗಿಣಿಕಿದಾಗ ಕಾಲುಚಾಚಿ ಮಲಗಲೂ ಸಾಧ್ಯವಿಲ್ಲದ ನಾಲ್ಕುಮೊಳ ಪಡಸಾಲೆಯಲ್ಲಿ ಮೂರು ನಾಲ್ಕು ಕುಟುಂಬಗಳ ನಿತ್ಯ ಜೀವನ ಜಾಥಾ. ಜೋಳಿಗೆಯಲ್ಲಿ ಕಿರುಚಿತ್ತಿರುವ ಹಸುಗೂಸು, ಚಾಪೆಯಲ್ಲಿ ತಾಯಂದಿರ ನಿಟ್ಟುಸಿರು, ಚಿಕ್ಕಮಕ್ಕಳ ಏದುಸಿರಿನ ಕರಾಳ ವಾಸ್ತವ ಜೀವಅಲುಗಾಡಿಸುತ್ತವೆ. ಈ ಅಮಾನುಷ ಬದುಕಿಗೆ ಶತಮಾನದ ಆಯಸ್ಸೆಂದರೆ.... ರಾಜ್ಯ, ದೇಶ, ಪ್ರಜಾಪ್ರಭುತ್ವ, ಸಂವಿಧಾನ, ನ್ಯಾಯ ಮುಂತಾದ ಪದಗಳನ್ನು ಗಾಳಿಗೆ ತೂರುವುದೆ ಲೇಸು.

ಕಿಡಿಯಾಗಿ ಉದುರುತಿವೆ ಕೆಂಡದಾ ಮೋಡ

"ನಾನು ಕೃಷ್ಣ ಓಬಳೇಶ ಭಂಗಿ, ನವಾಬರ ಕಾಲದಗಿನಿಂದ ಮಲ ಹೊತ್ತು ಜೀವನ ಮಾಡ್ತಾ ಬಂದೀವ್ರಿ. ನಮ್ಮಜ್ಜಗ ಈ ಮನೆಗಳ್ನ ನವಾಬ್ರು ಕೊಟ್ಟಿದ್ರಂತ್ರಿ, ಆವಾಗ ಓರ ಹೊರಗ ದೂರಿದ್ವಂತ್ರಿ, ಈಗ ಪ್ಯಾಟಿ ಬೆಳದು ಊರ ಒಲಗ ಸೇರೆವ್ರಿ. ನನು ಚಿಕ್ಕವನಿದ್ದಾಗ ನಮ್ಮಪ್ಪನ ಜೊತೆ ಪಯಿಖಾನೆ ತೊಳೆಯಾಕ ಹೊಕ್ಕಿದ್ನಿರಿ, ಬ್ಯಾರೆ ದಂಧೆ ಯಾವೂ ಸಿಗಲರದ್ದಕ್ಕ ನಾನೂ ಅದನ್ನ ಮುಂದುವರೆಸಿದ್ನಿರಿ, ಊರಾಗ ಹೋದ್ರ ಕತ್ತೆ ಹಂದಿತರ ನೋಡ್ತಾರ್ರಿ, ಇನ್ನು ನಮಗ್ಯಾರು ಕೆಲಸ ಕೊಡ್ತಾರ್ರಿ, ಕೆಲಸ ಭಾಳ ಆತಂದ್ರ ಸಾಲಿಗ್ಹೋಗೊ ಮಗನನ್ನು ದಂಧೇಕ ಕರಕೊಂಡು ಹೋಗಬೇಕಾಕೈತ್ರಿ. ಜಡ್ಡು ಜಾಪತ್ರಿ ಎಲ್ಲಾ ನಮಗ ಮಾಮೂಲಿರಿ. ನಮಗ ಒಂದು ನೋಕ್ರಿ ಕೊಡ್ರಿ ಅಂತ ಅಲದು ಅಲದು ಸಾಕಾತ್ರಿ. ಇಷ್ಟೊಂದು ಮಂದಿ ಅದೀವ್ರಿ, ಐದಾರು ಮಂದಿಗೆ ಮಾತ್ರ ವೋಟಿಂಗ್ ಕಾಡರ್ು ಅದಾವ್ರಿ, ಎರಡು ರೇಷನ್ ಕಾಡರ್ು, ಮನೀನ ಕೊಟ್ಟಿಲ್ಲಾಂದ್ರ ಇನ್ನು ಬ್ಯಾರೆ ಏನು ಕೇಳಬೇಕ್ರಿ,ಹೆಂಗೋ ಬದುಕು

ದೂಡಿಕೊಂಡು ಹೊಂಟಿದ್ವಿರಿ, ಯಾವಾಗ ಪುರಸಭೆನೋರು ಮನಿ ಖಾಲಿ ಮಾಡ್ರಿ ಇಲ್ಲಿ ಕಾಂಪ್ಲೆಕ್ಸಕಟ್ಟತೀವಿ ಅಂದ್ರೋ, ನಮ್ಮ ಜೀವಾನಾ ಹೋದಂಗಾತ್ರಿ ಏನು ಮಾಡಬೇಕೊ ತಿಳಿಲಿಲ್ರಿ. ಎಲ್ಲಾ ಆಫಿಸ ಕಛೇರಿ ,ದೊಡ್ಡೋರು ಏಲ್ಲರಿಗೂ ಕೈಕಾಲೂ ಬಿದ್ದವಿರಿ, ಯಾರೂ ಕಿವಿಗೊಡಲಿಲ್ಲ. ನಮ್ಮ ಹೆಂಡ್ರು ಮಕ್ಳು ನರಳಾಟ ನೋಡಿ ಸಾಯಬೇಕು ಅನ್ನೀಸತಿತ್ರಿ. ಕೊನೆಗೆ ನಾನೋಬ್ಬನೆ ಸತ್ರೆ ಇವರಿಗೆಲ್ಲ ಯಾರು ದಿಕ್ಕು, ಏನೂ ಉಪಯೋಗ ಆಗಂಗಿಲ್ಲಾ, ಏನಾರ ಮಾಡಿ ಜನರಿಗೆ,ಸಕರ್ಾರಕ್ಕೆ ನಮ್ಮ ಸಂಕಟ ತೋಡಿಕೋಬೇಕು ಅವರು ಕಣ್ಣು ಬಿಟ್ರ ನಮ್ಮ ಮಕ್ಕಳ ಬಾಳೆವಾದ್ರು ಚಂದ ಆಕೈತಿ ಅಂತ ಯೋಚನೆ ಮಾಡಿ ಕೊನೆಗೆ ಯಾವೂದು ದಾರಿ ಕಾಣದ ಕಚೇರಿ ಮುಂದ ಹೋಗಿ ಮಲದ ಅಭಿಷೇಕ ಮಾಡಿಕೊಂಡಿವ್ರಿ.""

ಕಂಬನಿಯ ಬೊಂಬೆಮುರಿದು ಬಿದ್ದ ಸದ್ದು

"ನಾನು ನಾಗಮ್ಮ ಭಂಗಿರಿ ಯಪ್ಪ, ನಮಗ ಈ ಮನೀನ ನವಾಬ್ರು ಕೊಟ್ಟಾರ್ರಿ ಆದ್ರ ಆವಾಗೆಲ್ಲಾ ದಾಖಲೆ ಅದೂ ಇದೂ ಇರಲಿಲ್ಲ. ನಮ್ಮ ಹಿರೇರು ಇದು ನಮ್ದ ಮನಿ ಅಂತ ಹೇಳಿ ಹರೇದಾಗ ರೋಗಹತ್ತಿ ಸತ್ತು ಹೋದ್ರು, ಪುರಸಭೆನೋರು ಇದು ಸಕರ್ಾರದ್ದು ಖಾಲಿ ಮಾಡ್ರಿ ಅಂದ್ರುರಿ.

ಹಂಗಾರ ನೀವು ದಾಖಲೆ ಕೊಡ್ರಿ ಅಂದ್ರ, ಕಚೇರಿಗೆ ಬೆಂಕಿ ಬಿದ್ದಾಗ ಏಲ್ಲಾ ಸುಟ್ಟು ಹೊಗ್ಯಾವು ಅಂತಾರ್ರಿ. ಈಗೀಗಂತು ಪಡಬಾರದ ಕಷ್ಪ ಪಡಾಕಹತ್ತೆವ್ರಿ. ನಮ್ಮ ಮನಿಮುಂದ ಅಲ್ಲಿ ಬಾರ್ ಕಾಣಸತೈತಲ್ರಿ ಅಲ್ಲಿಂದ ರಾತ್ರಿ ಕುಡದು ಬಾಟಲಿ, ಕಲ್ಲು ವಗಿತಾರ್ರಿ, ಈ ಮಾಂಸದ ಮಾಕರ್ೆಟನಾಗಿನ ಉಳಿದ ಹೊಲಸ ತಂದ ಮನಿ ಬಾಗಿಲದಾಗ ಸುರವತಾರ್ರಿ, ಹೊರಗ ಬಂದು ನಿಲ್ಲಾಂಗಿಲ್ರಿ, ಬಾಯಿಗೆಬಂದಂಗ ಬೈತಾರ್ರಿ, ನಾವು ಹೆಣ್ಮಕ್ಳು ಬಹಿದರ್ೆಸೆಗೆ ಬೇಲಿಯೊಳಗ ಹೊಕ್ಕಿದ್ವಿರಿ, ಅಲ್ಲೂ ಕಲ್ಲು ಒಗೆಯೋರ್ರಿ, ಹಿಂಗಾದ್ರ ನಾವು ಹೆಂಗ ಬದುಕೋಣ್ರಿ, ಈ ಅಂಜಲಿ ಮೊನ್ನೆ ಹಡೆದಾಳ್ರಿ, ತಗಡೆಲ್ಲಾ ಸೋರತವ್ರಿ, ರಾತ್ರಿ ಆಗಿತ್ರಿ, ಚರಂಡಿ ನೀರೆಲ್ಲಾ ಮನಿಒಳಗ ಬಂತ್ರಿ, ಹಸಗೂಸನ್ನು ಜೋಳಗ್ಯಾಗ ಹಾಕಿ, ಬಾಣಂತಿನ ಕುಚರ್ಿ ಮ್ಯಾಲ ಕುಂದರಸಿ, ನಾವೆಲ್ಲ ಪಾತ್ರೆ ಪಗಡ ತೊಗುಂಡು ನೀರು ಹೊರಗ ಚೆಲ್ಲಾಕ್ಕತ್ತಿದ್ವಿರಿ, ಎಷ್ಟೋ ವರ್ಷದಿಂದ ಇದ ನಮ್ಮ ಬದುಕಾಗೆತ್ರಿ..... ಆದ್ರ ಹಿಂಗ ಬದುಕಾಕು ನಮ್ಮನ್ನ ಬಿಡುವಲ್ರರಿ. ನಮ್ಮ ಜೀವ ಬದುಕೊ ಜಾಗ ಎಲ್ಲೈತ್ರಿ ಯಪ್ಪಾ ನೀವ ತೋರಸಿ'

ಬಡಪಾಯಿ ಕಣ್ಣೀರು ತುಂಬಾ ಸೋವಿ


'' ನನ್ನ ಹೆಸರು ಮಂಜುನಾಥ ಬಾಬು ಭಂಗಿರಿ. ಈಗೀಗ ನಮ್ಮ ಹೊಟ್ಟೆಗೂ ಕಲ್ಲು ಬಿದ್ದೈತ್ರಿ. ಮಲ ಬಳ್ಯಾಕ ಹೋದ್ರ ಲಾಟಿಲೆ ಹೊಡಿತಾರ್ರಿ, ಬೈತಾರಿ, ಯಾಕ್ರಿ ಅಂತ ಕೇಳಿದ್ರ ಇದನೆಲ್ಲ ಮಾಡಬಾರದು ಅಂತಾರ್ರಿ, ಎಷ್ಟೋ ವರ್ಷದಿಂದ ಇದನ್ನ ಮಾಡಿಕೊಂತ ದಿನಾ ಅರವತ್ತು ಎಪ್ಪತ್ತು ರೂ ದುಡಕೋಂಡ ಬಂದು ಹೆಂಗೊ ಬದಕ್ತಿದ್ವಿರಿ. ನಾವು ಮಾಡೊ ಧಂದೆ ತಪ್ಪು ಅಂತಾ ನಮಗೆಂದು ಅನಿಸಿಲ್ರಿ. ಹೇಸಿಗೆ ಮೈಮೇಲೆ ಸುರಿವಿಕೊಳ್ಳಾಕ ಮನಸ್ಸು ಹೆಂಗ ಬಂತು ಅಂತಾ ಕೇಳ್ತಾರಿ. ನಾವು ದಿನಾ ಅದನ್ನ ಮಾಡ್ತೀವ್ರಿ, ತಲೆಗೆ ಮೈಗೆ ಹತ್ತಲಾರದ ಹೆಂಗ ಕೆಲಸ ಮಾಡಬೇಕ್ರಿ, ಎಲ್ಲರೂ ನೋಡ್ಯಾರಿ, ಈ ಸಲ ಕಛೇರಿ ಮುಂದ ಬಂದು ನಾವು ಹಾಕೆಂಡೆವಿ ಅಷ್ಟರಿ. ಇದರಾಗೇನು ಹೊಸದಿಲ್ರಿ, ಈ ಧಂದೆ ಮಾಡಬೇಕಂದ್ರ ಕುಡಿಬೇಕ್ರಿ, ಮೊದಲ ಚಲೋದೇನು ತಿನ್ನಂಗಿಲ್ರಿ, ಮ್ಯಾಲೆ ಕುಡಿತಾ ಹಿಂಗಾದರ ಜೀವ ಎಲ್ಲಿ ಉಳಿತೈತ್ರಿ, ಎಷ್ಟೊ ಜನ ನಮ್ಮೋರು ಸತ್ತ ಹೋಗ್ಯಾರಿ. ಆದರ ನಮ್ಮ ಹೆಂಡ್ರು ಮಕ್ಕಳು ಮರೀನಾದರೂ ಈ ಭಂಡ ಬದುಕು ಬದಕೋದು ಬ್ಯಾಡ್ರಿ, ಅವರಾದ್ರು ಮನುಷ್ಯಾರಂಗ ಬದಕಬೇಕು ಅನ್ನೋದು ಒಂದ ಆಸೆರಿ''

ಎಳೆಯ ಹೂಗಳ ಅಳುದನಿ

'' ನಾನು ಸಾಲಿಗೆ ಹೊಕ್ಕೆನ್ರಿ, ಓದಾಕ ಬರಿಯಾಕ ಕಲಿಯಾಕತ್ತೆನ್ರಿ'' ಎಂದು ತೊದಲು ತೊದಲಾಗಿ ಮಾತನಾಡುವ ಅನನ್ಯ, ಸೌಮ್ಯ, ಪ್ರಿಯಾಂಕರ ಮನಸ್ಸಿನೊಳಗಿನ ದುಗುಡ ಮಾತ್ರ ತೋರಿಸಲಾಗದ್ದು, ಕೆದರಿದ ಕೂದಲು, ಹರಿದ ಬಟ್ಟೆ ಅರ್ದಂಬರ್ದ ತೊಟ್ಟ ಮಕ್ಕಳ ಮುಖದಲ್ಲಿ ಮಾತ್ರ ಈ ದಾರಿದ್ರ್ಯವನ್ನೆಲ್ಲ ಮೀರಿದ ಕಳೆ. ಆದರೆ ಅದರ ಆಯಸ್ಸು ಎಷ್ಟು ? ಒಂದು ವರ್ಷದ ಎರಡು ವರ್ಷದ ಚಿಕ್ಕ ಮಕ್ಕಳ ರೋಧನ ಹೇಳತೀರದ್ದು, ಹೇಳಲಾಗದ್ದು. ಸುಮ್ಮನೆ ಕಿರುಚುತ್ತವೆ ಹಾಲುಣಿಸುವ ತಾಯಂದಿರು ಕಾಯಿಲೆ ಬಿದ್ದಿರುವ ಚಿತ್ರ ಮನಕಲಕುತ್ತದೆ.

ಕಣ್ಣೀರು ಅಳುತ್ತಿದೆ ಕಣ್ಣಿನ ಕಷ್ಠಕ್ಕೆ

ಈ ಶತಶತಮಾನದ ಯಾತನೆಗೆ ಸಂಹಾರವೆಲ್ಲಿದೆ ಹೇಳಿ. ಭೋಗ ಜಗತ್ತಿನ ವಾರಸುದಾರರಿಗೆ ಸಮಾಜದ ಕಟ್ಟಕಡೆಯವರ ಅತ್ಯಂತಿಕ ಸ್ಥಿತಿ ಅರ್ಥಮಾಡಿಕೋಳ್ಳಲು ಪುರುಸೊತ್ತಿಲ್ಲ. ಬವಣಿತರಿಗೆ ಕನಿಷ್ಠ ಈ ದೇಶದ ಪ್ರಜೆಗಳು ಎನ್ನುವ ಅನುಭವ ಕೊಡಲಾರದ ಸ್ಥಿತಿಯಲ್ಲಿ ನಾವಿದ್ದೇವೆ. ಪರಂಪರೆಯ ಪಿಡುಗುಗಳು ಮುನ್ನಡೆಯಲ್ಲಿರುವ ಈ ಕಾಲದಲ್ಲಿ ಮಾಧ್ಯಾಮ ಅತ್ಯಾಧುನಿಕ ಶಯನಗೃಹಗಳ ಸೌಂದರ್ಯ ವರ್ದನೆಯ ಕುರಿತು ತರ್ಕ ಮಾಡುತ್ತಿರುವ ದುರಂತವಿದು. ಲೋಕ ಐಭೋಗ ಪ್ರಧಾನತೆಯ ಲೋಲುಪ್ತತೆಯಲ್ಲಿ ತೇಲುತ್ತಿರುವಾಗ ತನ್ನೊಳಗೆ ಹುಟ್ಟಿರುವ ಈ ರೀತಿಯ ಅಸಹನೀಯ ಕ್ರೌರ್ಯದ ಬೀಜಗಳು ಅಲ್ಲಲ್ಲಿ ಬೆಳೆಯುತ್ತಲೆ ಇವೆ. ಯಾರೂ ಗುರುತಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳದಿದ್ದಾಗಲೂ ಕೃಷ್ಣ, ಮಂಜುನಾಥರಂಥ ಬರ್ಬರ ಚಿತ್ರಗಳು ತಮ್ಮೊಡಲ ದಾವಾನಿಲವನ್ನು ಸಹಜವಾಗಿಯೆ ಆಸ್ಪೋಟಿಸುತ್ತವೆ. ಕೋಟ್ಯಾನುಕೋಟಿ ಬಜೆಟ್ಟು, ವಹಿವಾಟು, ಖಚರ್ಿನ ಬಗ್ಗೆ ಲೆಕ್ಕಹೊಂದಿಸುವ ತರಾತುರಿಯಲ್ಲಿರುವಾಗ ಸ್ವಾತಂತ್ಯ್ರಾನಂತರದ ಎಷ್ಠೋ ವರುಷಗಳುರುಳಿದರೂ ಪ್ರವಾಹದಂತೆ ಹರಿದ ಹಣ ಎಲ್ಲಿ ಹೋಯಿತು? ಅಂತಃಸ್ಸಾಕ್ಷಿಯ ಪ್ರಶ್ನೆಯಿದು. ಸಾಮಾಜಿಕ ನ್ಯಾಯವೆಂಬ ಪದ ಅಸ್ತಿತ್ವದಲ್ಲಿದೆಯೆ? ಎದೆಮುಟ್ಟಿಕೊಂಡು ಸಾಕ್ಷೀಕರಿಸಬೇಕಿದೆ. ವಚನ ಬಂಡಾಯ ಸಂಧರ್ಭದ ಧೂರ್ತತೆಗಿಂತಲೂ ವರ್ತಮಾನ ಕನರ್ಾಟಕದ ಸಾಮಾಜಿಕ ಅಮಾನುಷತೆ ಎಷ್ಟೋ ಪಾಲು ದೊಡ್ಡದು. ಸಹಜೀವಿಯೊಬ್ಬ ಒಡಲುರಿಯಲ್ಲಿ ಬೇಯುತ್ತಿರುವಾಗ, ತಂಗಾಳಿಯನ್ನು ಒಳಕೋಣೆಯಲ್ಲಿ ಕಟ್ಟಿ ಹಾಕಿ ನೆಮ್ಮದಿಯ ನಿದ್ರೆಗೆ ತಹತಹಿಸುವವರಿಗೆ ಹಸಿವಿನ ಬೇಗುದಿಯ ಅನುಭವ ಅರ್ಥ ಮಾಡಿಸುವುದು ಹೇಗೆ? ಸುತ್ತಲೂ ಹೆಡೆಯತ್ತಿದ ಮೂಢ ನಾಗರಗಳಡಿ ನಿತ್ಯ ಪವಡಿಸುವ ಸವಣೂರಿನ ಭಂಗಿ ಸಮುದಾಯ ಇನ್ನು ಕಗ್ಗತ್ತಲಲ್ಲೆ ಇದ್ದು ಬೆಳಕಿನ ಧ್ಯಾನದಲ್ಲಿರುವ ಎಷ್ಟೋ ಬವಣಿತರ ಆಸ್ಮಿತೆ ಉಳಿಸುವುದು ಹೇಗೆ? ಉದಯರವಿಯ ಉರಿಪಾದದ ಕೆಳಗೆ ಬಕಬರಲೆ ಬಿದ್ದಿರುವ ವಸಂತನನ್ನು ಎತ್ತುವವರಾರು?

ಕಾವ್ಯ ಅನುರಣನ

ಸವಾಲು


ಎದೆ ಕಣ್ಣಹನಿ ತುಂಬಿದ ಕೊಡ
ಈ ಹೊತ್ತು
ನಂಬಿಕೆಯ ಜಗತ್ತನ್ನು ಅನುಮಾನಿಸುವ ಸಮಯ

ಗಿಡುಗನ ಸುಳಿವು ಕಂಡರೂ ಹಕ್ಕಿ
ಗೂಡ ಜತನದಿಂದ ಹೊರಬರಲೇಬೇಕು
ಮರಿಗಳ ಹಸಿವ ನೀಗುವ ಸವಾಲಿದೆ

ಹೊಂಚು ಹಾಕಿದ ಬೆಕ್ಕ ಸುಯಿತವ ಧಿಕ್ಕರಿಸಿ
ಕಪ್ಪು ಇಲಿ ಕಾಳು ಕಡಿ ಕದಿಯಬೇಕಿದೆ
ಗುದ್ದಿನ ಕಾವು ಮೈಸುಡುತ್ತದೆ

ನಗುವ ಚಿಗುರೆಲೆಯ ಕೊಂಬೆಯಲಿ ಹಾವು
ನಿಡುಸುಯ್ಯುತಿದೆ
ತರಗೆಲೆಯ ಮೈ ಸವರಲು ಕೈಚಾಚಿದೆ
ಕಾಲಕೆಳಗೆ ಹಳದಿ ಎಲೆಗಳ ಹೆಣದ ಮಿಸುಕು
ಎತ್ತಿಕೊಂಡಾಗ
ಕಣ್ಣು ತಾನೇ ಹನಿಸಿದ ಹೊತ್ತಲ್ಲಿ
ಗಾಳಿಧೂಳ ಹೊತ್ತು ತಂದು ರಾಚಿತು ಮೈಯೆಲ್ಲ ಕೆಂಧೂಳು
ಕರಿಗಲ್ಲದ ತುಂಬ ಮುತ್ತಿನ ಸಾಲು
ಬಿರುಬಿಸಿಲಲ್ಲೂ ಗಿಡ ಹನಿಯುದುರಿಸಿತು ಇಬ್ಬನಿಯನಲ್ಲ.

[ವೀರಣ್ಣ ಮಡಿವಾಳರ ನಮ್ಮ ನಡುವಿನ ಸಶಕ್ತ ಯುವ ಕವಿಗಳಲ್ಲಿ ಒಬ್ಬರು. ತಮ್ಮ ಪ್ರಥಮ ಕವನ ಸಂಕಲನ 'ನೆಲದ ಕರುಣೆಯ ದನಿ' ಯ ಮೂಲಕ ಕಾವ್ಯ ಜಗತ್ತಿನಲ್ಲಿ ದಿಟ್ಟ ಹೆಜ್ಜೆಯೂರಿರುವವರು. 'ಸವಾಲು' ಆ ಸಂಕಲನದ ಒಂದು ಕವಿತೆ.]

ಜೀವ ಪಣಕ್ಕಿಟ್ಟು ಜೀವನ ಕಟ್ಟುವ ಹಾದಿಯಲ್ಲಿ.....
                                                         
ರೂಪ ಹಾಸನ

ಯಾರೂ ಯಾರನ್ನೂ ನಂಬದಂತಹ, ಅನುಮಾನಗಳೇ ಮುಗ್ಧತೆಯನ್ನು ಸುಡುವ ಅಸ್ತ್ರಗಳಾಗುತ್ತಿರುವ ಈ ಹೊತ್ತಿನಲ್ಲಿ ನೋವು-ಕ್ರೌರ್ಯಗಳು ಅಕ್ಕಪಕ್ಕದ ಮನೆಯಲ್ಲೇ ವಾಸಿಸುವ ಮಿತ್ರರಂತಾಗುತ್ತಿವೆ. ನೋವು ಹೊತ್ತು ತರುವ ಹಿಂಸೆಯನ್ನು ಪ್ರಶ್ನಿಸುವಂತೆಯೂ ಇಲ್ಲ. ಏಕೆಂದರೆ ಅದರ ಆಳ ಬೇರುಗಳೆಡೆಯಲ್ಲಿ ಚಾಚಿಕೊಂಡಿರುವ ವಿಷದ ಬೀಜಗಳು ಮತ್ತೆ ಮತ್ತೆ ಮೊಳೆಯುತ್ತಲೇ ಇರುವ ರಕ್ತ ಬೀಜಾಸುರ ಸಂತತಿಯಂತೆ ಎಲ್ಲೆಡೆಗೆ ಚೆಲ್ಲಾಡಿ ಬಿದ್ದು ಗಹಗಹಿಸಿ ನಗುತ್ತಾ ಬೃಹದಾಕಾರವಾಗಿ ಜೀವರಾಶಿಯನ್ನೇ ನುಂಗುತ್ತಿರುವಾಗ ತಲ್ಲಣಿಸುತ್ತಿರುವ ಜೀವ ಹೊತ್ತು ಕವಿತೆ ಕೇಳುತ್ತಿದೆ 'ದಾರಿಯೆಲ್ಲಿದೆ ಇಲ್ಲಿ ನಿಷ್ಕಲ್ಮಶ ಪ್ರೀತಿಗೆ?' ಎಂದು.

ಈ 'ಸವಾಲು' ಕವಿತೆಯಲ್ಲಿ ನಂಬಿಕೆಯ ಪ್ರಪಂಚವನ್ನೇ ಅನುಮಾನಿಸುತ್ತಿರುವ ಈ ಹೊತ್ತಿನಲ್ಲಿ ಕಣ್ಣ ಹನಿ ತುಂಬಿದ ಕೊಡವಾಗಿರುವ ಎದೆಯ ತಲ್ಲಣದ ಎಳೆ ಎಳೆಗಳು ಬಿಚ್ಚಿಕೊಳ್ಳುತ್ತವೆ. ಆಕಾಶದಲ್ಲಿ ಹೊಂಚುತ್ತಿರುವ ಗಿಡುಗನ ಸುಳಿವು ಸಿಕ್ಕರೂ ಹಕ್ಕಿ, ಗೂಡು ಬಿಟ್ಟು ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಾ, ಆತಂಕದಲ್ಲಿ ಹೊರಬರಲೇ ಬೇಕಿರುವ ಅನಿವಾರ್ಯತೆಯನ್ನು ನಮ್ಮೆದುರಿಗೆ ಬಿಚ್ಚಿಡುವ ಕವಿ, ಹಕ್ಕಿಗೆ ಮರಿಗಳ ಹಸಿವು ನೀಗುವ ಸವಾಲಿರುವುದನ್ನು ನೆನಪಿಸಿ, ಪ್ರೀತಿ-ವಾತ್ಸಲ್ಯಗಳ ಮುಂದೆ ಸಾವಿನ ಭೀಕರತೆಯೂ ಕ್ಷುಲ್ಲಕವಾಗುವ ಅಂತಃಕರಣದ ರೂಪಕವನ್ನು ನಮ್ಮೆದುರಿಗೆ ಬಿಚ್ಚಿಡುತ್ತಾರೆ.

ಹೊರಗೆ ಬೆಕ್ಕು ಠಳಾಯಿಸುತ್ತಾ ಇಲಿಗಾಗಿ ಹೊಂಚು ಹಾಕುತ್ತಿದ್ದರೂ ಇಲಿ ಕಾಳು ಕಡಿಯನ್ನು ಕದಿಯಲೇ ಬೇಕಿದೆ. ಅದಕ್ಕೆ ಈ ಜೀವ ವತರ್ುಲದಲ್ಲಿ ತಾನು ಬಿದ್ದಿರುವ ಅರಿವಿಲ್ಲದೆಯೂ, ಬೆಕ್ಕಿನ ಕೈಗೆ ಸಿಕ್ಕಿ ಹಾಕಿಕೊಂಡರೆ ಉಳಿಗಾಲವಿಲ್ಲವೆಂಬ ನಿಜ ಅದಕ್ಕೆ ಗೊತ್ತಿದೆ. ಆದರೆ ಬದುಕಿನ ಸಂಘರ್ಷಗಳು ಎಷ್ಟೇ ದೊಡ್ಡವಾದರೂ ಬದುಕು ಅದಕ್ಕಿಂಥಾ ದೊಡ್ಡದು. ಬದುಕುವುದು ಎಲ್ಲಕ್ಕಿಂಥಾ ಮುಖ್ಯ ಎಂಬ ಅರಿವಿಲ್ಲದೇ ಸಾಗುವ ಪ್ರಕೃತಿ ಸಹಜ ದಾರಿಗೆ, ಎಷ್ಟು ಪೆಟ್ಟುಗಳು ಬಿದ್ದರೂ ಮತ್ತೆ ಚೇತರಿಸಿಕೊಂಡು ಏಳಲೇ ಬೇಕಾದ ಸವಾಲು ಮತ್ತು ಅನಿವಾರ್ಯತೆ.

ಬದುಕು ಮತ್ತು ಅದನ್ನು ಒಳಗೊಳ್ಳುವಾಗ ನಡೆಸುವ ಸಂಘರ್ಷ ಚಿಗುರೆಲೆಯ ಕೊಂಬೆಯಲ್ಲಿ ಹಾವು ನಿಡುಸುಯ್ಯುತ್ತ ಮಲಗಿದಂತೆಂದು ಬೆಚ್ಚಿಬೀಳಿಸುವ ಕವಿ, ಕಾಲಕೆಳಗೆ ಬಿದ್ದಿರುವ ಆ ಮರವುದುರಿಸಿದ ಪಕ್ವಗೊಂಡು ಬಿದ್ದ ಹಳದಿ ಎಲೆಗಳ ಶವದ ಮಿಸುಕಿನಲ್ಲಿ ತರಗೆಲೆಗಳನ್ನು ಪ್ರೀತಿಯಿಂದ ಸವರಲು ಎತ್ತಿಕೊಂಡಾಗ ಕಣ್ಣು ತನ್ನಂತೆ ತಾನೇ ಅದರ ಸಾರ್ಥಕತೆ ನೆನೆದು ಹನಿಗೂಡುತ್ತದೆ. ಸವಾಲಿಗೆ ಎದೆಯೊಡ್ಡಿ ನಿಂತ ಸಂಘರ್ಷ ನೆನಪಿಸುವಂತೆ ಗಾಳಿ ಧೂಳನ್ನು ಹೊತ್ತು ತಂದು ಮೈಯೆಲ್ಲ ಕೆಂಧೂಳು ರಾಚಿದಾಗ, ಆ ಕೆಂಧೂಳು ತೊಳೆಯಲು ತನ್ನದಲ್ಲದ, ಯಕಶ್ಚಿತ್ ತನ್ನ ಮೈಮೇಲಿನ ಇಬ್ಬನಿ ಉದುರಿಸದೇ ಆ ಬಿರು ಬಿಸಿಲಿನಲ್ಲೂ ಆಸರೆಯಾಗಿ ನಿಂತ ಗಿಡ ತನ್ನ ಒಡಲನ್ನೇ ಬಸಿದು ಹನಿಯುದುರಿಸಿದ್ದನ್ನು ಸಾರ್ಥಕತೆಯಿಂದ ಕವಿ ನೆನೆಯುತ್ತಾನೆ.

ಬದುಕಿಗೊಡ್ಡುವ ಸವಾಲುಗಳ ಜೊತೆ ಜೊತೆಗೇ, ಒಳಗಿನಿಂದಲೇ ಹದಗೊಳಲು ಗಟ್ಟಿ ಆಸರೆಗಳೂ ದಾರಿಯುದ್ದಕ್ಕೂ ಇರುತ್ತವೆ. ನೋವು, ಸವಾಲು ಮತ್ತು ಸಂಘರ್ಷಗಳೇ ತುಂಬಿದ ಹಾದಿಯಲ್ಲಿಯೂ, ಪ್ರೀತಿ ಮತ್ತು ಸಹನೆ ತುಂಬಿದ ಕೈಗಳ ಸಾಂತ್ವನ ಇದೆಯೆಂದೇ ಬದುಕು ಸಹ್ಯವಾಗುತ್ತದೆ. ಬದುಕಿನ ಸವಾಲು ಮತ್ತು ಅದನ್ನು ಕಾಯುವ ಜೀವ ಕಾರುಣ್ಯ ಒಟ್ಟೊಟ್ಟಿಗೇ ಸಾಗುವ ಶಕ್ತಿಗಳು. ನುಂಗಿ ನೊಣೆಯಲು ಕಾದು ನಿಂತ ಸಾವಿನ ಸೆರಗಿನಲ್ಲೂ ಕಾಯುವ ಒಂದು ಆಶಾವಾದ ಇರುವೆಡೆಗೆ ನಮ್ಮನ್ನು ಸೆಳೆವ ಕವಿ, ಈ ಸಂಘರ್ಷಮಯ ಬದುಕುವ ಸವಾಲಿಗಿಂತಾ, ಬದುಕುಳಿಯಲೇ ಬೇಕಾದ ಅನಿವಾರ್ಯತೆಯಲ್ಲಿ ಎದುರಾಗುವ ಜೀವ ಪ್ರೀತಿಯ ಹಿರಿಮೆಯನ್ನು ಎತ್ತಿ ಹಿಡಿದು ಆ ಆಶಾವಾದದೆಡೆಗೆ ನಮ್ಮನ್ನು ಕರೆದೊಯ್ಯುತ್ತಾನೆ.

ದ್ವಿಪದಿಗಳು

ಆ ಬಾಡಿದ ಕನಸುಗಳ ನನ್ನ ಕಳ್ಳ ಕಣ್ಣುಗಳಲಿ ಎತ್ತಿಕೊಂಡೆ
ನಿಜ ದಾರಿಹೋಕರು ಮಾಡಿದ ಗಾಯ ಬಲು ಭೀಕರ

ಈ ಜಾವ ಎಳೆ ಮುತ್ತುಗಳು ಅರಳುತ್ತಿವೆ ಕೆಂಪಾಗಿ ಏಕೋ
ಕೂಡಿ ಉಣ್ಣುವ ಕನಸು ಕಾಣದಿದ್ದರೆ ಗಂಟೇನು ಹೋಗುವುದಿತ್ತು

ಬೇಡ ಮಹರಾಯ ಭಿಕಾರಿಗೆ ಬಣ್ಣದ ಷಟರ್ು ಒಪ್ಪುವುದಿಲ್ಲ
ಹೊಟ್ಟೆಗಿಲ್ಲವ್ವ ಬಟ್ಟೆಯ ಮಾತೇಕೆ ಇವಳಿಗೆ ಹೇಳಿ ಪ್ರಯೋಜನವಿಲ್ಲ

ನಿದಿರೆಯಿಲ್ಲದ ಕಣ್ಣು ನಿನ್ನವು ಯಾವಾಗಲೂ ಒರಗಿಕೊಳ್ಳುವ ಕಲ್ಲಿನ ಪ್ರಶ್ನೆ
ಯಾರು ಹೇಳಬೇಕು ಆ ಭಂಡಿಗೆ ಖಾಲಿ ಹೊಟ್ಟೆಯ ಕಣ್ಣು ಹಿಡಿಸುವುದಿಲ್ಲವಂತೆ