ಕಾಗದದ ದೋಣಿ

ಈ ದೋಣಿಯಲ್ಲಿ ಅವಳು ನಾನು ಪಯಣ ಹೊರಟಿದ್ದೇವೆ


ಕಾಣದ ಊರಿಗೆ

ಭೋರ್ಗರೆವ ಸಮುದ್ರ ಲೆಕ್ಕಕ್ಕಿಲ್ಲ



ಏರುವ ಇಳಿಯುವ ಈ ಓಟ ಮೋಜಿನದಲ್ಲ

ಕಂಡದ್ದೆಲ್ಲ ನೀರು ಕಾಣದ್ದೆಲ್ಲ ಊರು

ಪ್ರತಿ ಹೆಜ್ಜೆಯಲೂ ನಿಲುದಾಣದ ನಿರೀಕ್ಷೆ



ಚೂಪು ಹಲ್ಲಿನ ಸುಂದರ ಮೊಸಳೆ ಏರಿ ಏರಿ ಬಂದಂತೆಲ್ಲ

ನಾವು ನಗುತ್ತೇವಷ್ಟೆ



ನಾಲ್ಕು ಕೈಗಳೆ ಹುಟ್ಟು ಕಣ್ಣುಗಳೆ ದಿಕ್ಸೂಚಿ

ತಪ್ಪಿಸಿಕೊಳ್ಳುವ ಆಟ ನಾವು ಆಡುವುದಿಲ್ಲ



ಸಣ್ಣದೋಣಿಯ ಸಮೇತ ನಮ್ಮನು ನುಂಗಿಬಿಡಬೇಕೆನ್ನುವ

ಅದೆಷ್ಟು ತಿಮಿಂಗಿಲುಗಳು

ಬಂಧುಗಳಂತೆಯೆ ತೋರುತ್ತವೆ



ನಾವು ಅವುಗಳ ಮೃದು ಮೈಯ ನೇವರಿಸಿ

ನಮಗಿದ್ದುದರಲ್ಲಿಯೆ ಸ್ವಲ್ಪ ಕೊಟ್ಟು ಸಮಾಧಾನಪಡಿಸುತ್ತೇವೆ

ಪಾಪ ಸಮುದ್ರಜೀವಿಗಳಿಗೆ ಹಸಿವೊಂದೇ ಗೊತ್ತು

ಸಂಬಂಧ ಗೊತ್ತಿಲ್ಲ



ಅಲ್ಲೆಲ್ಲೋ ದೂರದಲ್ಲಿ ನಮ್ಮನ್ನು ಕಂಡೇ

ಉರಿ ಉರಿ ಉರಿವ ಕೆಂಡದುಂಡೆಯ ವಿಳಾಸ ಯಾವುದೆಂದು

ತಲೆಯ ಮೇಲೆ ನಡೆಯುತಿರುವ ಬಾನಾಡಿಗಳ ಮಾತನಾಡಿಸಿದರೆ

ರೆಕ್ಕೆರೆಕ್ಕೆಯಲೂ ಕಣ್ಣೀರುಕ್ಕಿಸುವ ಬೆಳ್ಳಕ್ಕಿಗಳು

ದಿಕ್ಕುತಪ್ಪಿರುವ ಸಂಕಟತೋಡಿಕೊಳ್ಳುತ್ತವೆ



ಹೌದು ಈ ಪಯಣ ಅಷ್ಟು ಸಲೀಸಲ್ಲ

ನಾವೂ ಹಾಗೆ ಬಯಸುವುದಿಲ್ಲ



ವೀರಣ್ಣ ಮಡಿವಾಳರ