ಹುಟ್ಟಿದ ದಿನ

ಇಂದು ನಾನು ಹುಟ್ಟಿದ ದಿನ, ಬದುಕಿದ್ದೇನೆಂದು


ರುಜುವಾತುಪಡಿಸಲು ನನ್ನ ಬಳಿ ಯಾವ ಪುರಾವೆಗಳೂ ಇಲ್ಲ

ಇದ್ದ ಸಾಕ್ಷಿಗಳನೆಲ್ಲ ಯಾರೊ ಕದ್ದು ಬಿಟ್ಟರು,ಇಲ್ಲ ಕಳೆದುಕೊಂಡದ್ದು ನನ್ನ ತಪ್ಪು

ಯಾರ ಬದುಕಿನಲ್ಲಿಯೂ ತಮಗೆ ತಾವು ಮಾತ್ರ

ಹೇಳಿಕೊಳ್ಳಬಹುದಾದ ಸತ್ಯ ಹುಟ್ಟಬಾರದು, ನನ್ನ ಬದುಕಿನಲ್ಲಿ

ನನಗೆ ನಾನು ಕೂಡ ಹೇಳಿಕೊಳ್ಳಲಾಗದ ನಿಜ ಉದ್ಭವಿಸಿದ್ದಕ್ಕೆ

ಉಸಿರು ನಿಲ್ಲುವವರೆಗಿನ ಪರದಾಟ ತಪ್ಪಿದ್ದಲ್ಲ

ಬಟ್ಟೆ ತೊಟ್ಟೂ ಎಲ್ಲ ಕಾಣಿಸುತ್ತಿರುವ ಪರಪಂಚದ ಬಟಾಬಯಲಿನಲಿ

ಎಲ್ಲ ದಸ್ತಾವೇಜುಗಳ ಹಂಗು ಹರಿದು ನಿಲ್ಲಬೇಕೆನುತಿದೆ ಜೀವ



ಕತ್ತಲಲ್ಲಿ ಕಪ್ಪು ಬೆಕ್ಕಿನ ಹೊಂಚು, ಬಿಲದಲಿ ಸತ್ತಂತೆ ಬಿದ್ದಿರುವ

ಪಾಪಿ ಇಲಿಗೆ ಹೇಗೆ ತಾನೆ ತಿಳಿದೀತು ?

ಲೋಕದ ಆದಿಯಿಂದಲೂ ಹೀಗೆಯೇ.......ಎನ್ನುತ್ತದೆ ಇತಿಹಾಸ

ನನ್ನ ಪ್ರಶ್ನೆ ಒಂದಿದೆ ಜಗಕಂಟಕ ತೀರ್ಪುಗಾರರಿಗೆ

ಕಾಣುತ್ತಿರುವ ಬಿದ್ದ ಹೆಣದ ಮುಂದೆ ಕುಳಿತು ಸಿಹಿತಿನ್ನುವ ಕಾಲವಿತ್ತೆ ?

ಮನೆಯ ಮುಂದಿನ ತಿರುಬೋಕಿ ಹಂದಿ ಓಡಿಸುವ ತ್ರಾಣವಿಲ್ಲದವರೆ

ಅದೆಷ್ಟು ಹತಿಯಾರಗಳು ತುಕ್ಕುಹಿಡಿದವು ನಿಮ್ಮವು ನಿಮ್ಮಂತೆ

ಪರಮನೀಚ ಪಿಶಾಚಿಗಳು ಹುಟ್ಟಿದ ಸಮಯದಲ್ಲಿ

ಭೂಮಿಗೆ ನಗುತ ಕಾಲಿಟ್ಟವನು ನಾನು ಎನ್ನುತ್ತೇನೆ ಅವ್ವನ ಅನುಮತಿಗೆ ಕಾಯದೆ

ಒಳಗಿನ ರಾಕ್ಷಸ ಗಹಗಹಿಸುತ್ತಾನೆ, ಸೈತಾನನಿಲ್ಲದ ಜಾಗವಿಲ್ಲ

ಸತ್ತ ಹೂವಿನ ಪರಿಮಳಕ್ಕೆ ಮುಗಿಬೀಳುವ ಜಗತ್ತು

ತುತ್ತು ಅನ್ನಕ್ಕೆ ಬಾಯಿ ತೆರೆಯುವ ನನ್ನ ಅವಳ ಬಿರುಕು ತುಟಿ

ಬೆಸೆದುಕೊಳ್ಳಲು ಹೇಗೆ ತಾನೇ ಬಿಟ್ಟೀತು ?



ಹಾದಿ ಬೀದಿಯಲ್ಲಿ ಹರಾಜಿಗಿರುವ ಹೂಹೆಣದ ನಗು ನನ್ನದು

ಹೊಟ್ಟೆಬಾಕ ಕ್ರೂರ ಕೈಗಳ ಮಡಿಲು ಸೇರಿದೆ

ಲೋಕದಲ್ಲಿ ಮೊದಲ ಬಾರಿಗೆ ಹುಟ್ಟಿದ ಮಗು...... ನನ್ನಂತೆಯೇ

ಅದೆಷ್ಟು ಬಾರಿ ಅತ್ತೆ ನಾನು ಸತ್ತೆ ನಾನು ಲೆಕ್ಕ ಸಿಗುತ್ತಿಲ್ಲ

ಸತ್ಯ ಗೊತ್ತಿರುವ ಮುಖ ಹೇಡಿಗಳು ಹೇಗೆ ತಾನೇ ಹೇಳಿಯಾರು

ಯಾರಿಗೂ ಗೊತ್ತಾಗದಂತೆ ಸಾಯಿಸುವ, ಸಾಯುವವರಿಗೂ

ಹೊಸ ವಿಧಾನಗಳ ಪ್ರಯೋಗ ನಡೆಸಿದ್ದಾರೆ ಈ ಕಾಲದ ಮೇಲೆ ನನ್ನ ಮೇಲೂ

ನಾನೂ ಹೀಗೆಯೇ ಎಲ್ಲದಕ್ಕೂ ಎದೆಯೊಡ್ಡುವ ವಂಡ ಮಣ್ಣು ಮುಕ್ಕುವ ಹಾವಿನಂತೆ

ಬದುಕಿದ್ದೇನೆಯೋ ಇಲ್ಲವೋ ನನಗೆ ಗೊತ್ತಿಲ್ಲದಂತೆ ಬದುಕಿದ್ದೇನೆ. ಇಲ್ಲವೋ ?

ಕರಗುತ್ತಿರುವ ಜೀವಸಾಕ್ಷಿಯ ಎದಿರು ಎದೆ ಮುಟ್ಟಿಕೊಂಡು ಹೇಳಬಲ್ಲಿರಾ ನೀವು

ಎಷ್ಟು ಪಾಲು ಜೀವವಿದೆ ನಿಮ್ಮ ಆಳದ ಚೇತನಕ್ಕೆ?

ಹುಟ್ಟು, ಹಬ್ಬವಾಗದ ಎಳೆಯ ಕೂಸಿನ ಸಾವಿನ

ರುಚಿ ನೋಡುವ ಅಂಗಾಂಗವೆಲ್ಲ ನಾಲಿಗೆಯಾದ ತ್ರಿಶೂಲ ಬಾಂಬು ತುಪಾಕಿಯ ಗುಂಡಿಗೆ

ಏನು ಹೇಳುತ್ತದೆ ನಿಮ್ಮ ಗುಂಡಿಗೆ?



(ಪ್ರತಿರೋಧದ ಜೀವಸೆಲೆ ಇರೋಮ್ ಶರ್ಮಿಳಾ ಚಾನೂಗೆ ಈ ಕವಿತೆ ಅರ್ಪಿತ)