ಗುರುವಾರ, ಜನವರಿ 19, 2012

ದಲಾಲ

ರಾಜಸ್ತಾನಿ ಮೂಲ : ರಾಮ ಸ್ವರೂಪ ಕಿಸಾನ್

ಇಂಗ್ಲೀಷ್ ರೂಪಾಂತರ : ಶ್ಯಾಮ್ ಮಾಥೂರ್
ಕನ್ನಡಕ್ಕೆ : ವಿಠಲ ದು. ದಳವಾಯಿ.


ದನಗಳ ವ್ಯಾಪಾರದ ದಲಾಲಿಯಲ್ಲಿ ನನ್ನದು ದೊಡ್ಡ ಹೆಸರು. ದನಗಳನ್ನು ಕೊಳ್ಳುವವರಿಗೆ ಮತ್ತು ಮಾರುವವರಿಗೆ ಮಧ್ಯವತರ್ಿಯಾಗಿ ನಾನು ವ್ಯವಹಾರ ಕುದುರಿಸುತ್ತೇನೆ. ಅದಕ್ಕೆ ತಕ್ಕಂತೆ ನನ್ನ ಆಮದನಿಯೂ ಚೆನ್ನಾಗಿದೆ. ಸಂತೆಗೆ ಹೋದೊಡನೆ ಜನ ನನ್ನನ್ನು ಚಹಾದಂಗಡಿಗೆ ಕರೆದೊಯ್ಯುತ್ತಾರೆ. ಅಂಗಡಿಯವನು ನನ್ನೆಡೆಗೆ ಅರ್ಥಪೂರ್ಣವಾಗಿ ನೋಡಿ ಕಣ್ಣು ಮಿಟುಕಿಸಿ ಕೇಳುತ್ತಾನೆ, ವ್ಯಾಪಾರ ಜೋರೇನ್ರೀ ಸಾಹುಕಾರ? ನಾನು ಅವನಿಗೆ ತುಂಬ ಕ್ಲೋಜು ಎಂದು ಮಂದಿಯೆದುರು ತೊರಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಕೆಲವೊಮ್ಮೆ ಇಂಥವರಿಂದ ಮಾರಿ ತಪ್ಪಿಸಿಕೊಳ್ಳುವುದೆ ಹರಸಾಹಸವಾಗುತ್ತದೆ.

ನಾನು ಸಂತೆಯಿಂದ ಸಂತೆಗೆ, ಜಾತ್ರೆಯಿಂದ ಜಾತ್ರೆಗೆ ಅಲೆಯುತ್ತಲೆ ಇರುತ್ತೇನೆ. ಇಲ್ಲಿಯೇ ನನ್ನ ದಿನದ ರೊಟ್ಟಿ ದುಡಿಯುತ್ತೇನೆ. ವರ್ಷಪೂತರ್ಿ ಎಲ್ಲಾದರೂ ಜಾತ್ರೆಗಳು ಇದ್ದೇ ಇರುತ್ತವೆ. ನನ್ನ ಹತ್ತಿರ ಥರಹೇವಾರಿ ಸುಳ್ಳುಗಳ ದೊಡ್ಡ ದಾಸ್ತಾನೇ ಇದೆ. ರಾತ್ರಿ ಕಂಡ ಬಾವಿಗೆ ನಾನು ಜನರನ್ನು ಹಗಲೇ ಬೀಳಿಸುತ್ತೇನೆ. ತೀರಾ ಯಾತಕ್ಕೂ ಬಾರದ ದನವನ್ನು ಗಬ್ಬಾದ ಮಣಕಿನ ಹಾಗೆ ಮಾರಿಸಬಲ್ಲೆ ಅಥವಾ ಮೈ ಕೈ ತುಂಬಿ ಗಡಿಗೆ ತುಂಬ ಹಾಲು ಹಿಂಡುವ ಎಮ್ಮೆಯಲ್ಲಿ ಎನಾದರೂ ಊನ ಕಂಡು ಹಿಡಿದು ಶಾಶ್ವತ ಕೊಟ್ಟಿಗೆಯಲ್ಲೇ ಕಟ್ಟಿ ಹಾಕಿಸಬಲ್ಲೆ. ಒಂದೇ ಮಾತಿನಲ್ಲಿ ಹೇಳುವುದಾದರೆ ನಾನು ಈ ವಿಷಯದಲ್ಲಿ ನುರಿತ ಜಾದುಗಾರನಂತೆ ಕ್ಷಣಾರ್ಧದಲ್ಲಿ ಕಲ್ಲನ್ನು ರತ್ನವಾಗಿ ಅಥವಾ ರತ್ನವನ್ನು ಕಲ್ಲಾಗಿ ಬದಲಾಯಿಸಬಲ್ಲೆ. ನನ್ನದೆಂತಹ ತಂತ್ರವೆಂದರೆ ಕೊಳ್ಳುವವ ಎದುರಿಗೆ ಬಿದ್ದ ಕಬ್ಬಿಣವನ್ನೂ ಬಂಗಾರವೇಂದೇ ತಿಳಿಯುತ್ತಾನೆ. ಹಾಗಂತ ನಾನು ಕೊಳ್ಳುವವನಿಗಷ್ಟೇ ಟೋಪಿ ಹಾಕುವುದಿಲ್ಲ, ಮಾರುವವನ ಕಿವಿಯ ಮೇಲೂ ದಾಸವಾಳ ಗಿಡವನ್ನೇ ನೆಡುತ್ತೇನೆ. ಕೆಲವು ಚಾಲಾಕಿ ಮಾಲಕರು ಕಣ್ಣು ಬಾಯಿಗಳೆರಡನ್ನೂ ತೆರೆದು ಗಿರಾಕಿ ಹುಡುಕುತ್ತಿರುತ್ತಾರೆ. ನಂಗೆ ಕ್ಯಾರೆ ಅನ್ನುವುದಿಲ್ಲ. ಅಂಥವರಿಗೆ ಅಮವಾಸ್ಯೆಯ ಚಂದ್ರನಂತೆ ಗಿರಾಕಿಗಳು ಮಂಗಮಾಯ ಆಗುವ ಹಾಗೆ ನನ್ನ ಕೈ ಚಳಕ ತೋರಿಸುತ್ತೇನೆ. ಇದರಿಂದ ಸುಸ್ತೆದ್ದು ಹೋಗುವ ಜನ ಎಲ್ಲಾ ನಿಂದೇ ತಂದೆ ಎನ್ನುತ ಕುಂಬಳಕಾಯಿ ಕುಡುಗೋಲು ನನ್ನ ಕೈಯಲ್ಲೇ ಕೊಟ್ಟು ನಿಟ್ಟುಸಿರು ಹಾಕುತ್ತಾರೆ. ಆನರನ್ನು ಹೇಗೆ ಮರಳು ಮಾಡಬೇಕೆಂಬುದು ನಂಗೆ ಗೊತ್ತು. ಇಷ್ಟಕ್ಕೂ ನಾನ್ಯಾರು? ಯಕಶ್ಚಿತ್ ಒಬ್ಬ ದಲಾಲ; ಹೆಸರು ತನಸುಖ್!

ನಂಗೊತ್ತು: ನನ್ನದಿದು ಪುಣ್ಯದ ಕೆಲಸವಲ್ಲ. ಮೂರೂ ಹೊತ್ತು ಮುಗ್ಧರನ್ನು ಮೋಸ ಮಾಡುವುದು ಪುಣ್ಯದ ಕೆಲಸ ಹೇಗಾಗುತ್ತದೆ? ಸುಳ್ಳು ಪಾಪದ ಒಂದು ಸಣ್ಣ ರೂಪವಷ್ಟೇ. ನಾನು ಬದುಕಲು ಗೊತ್ತಿರುವ ದಾರಿ ಇದೊಂದೇ. ನನಗೆ ಹೊಲ ಆಸ್ತಿ ಪಾಸ್ತಿ ಎನೂ ಇಲ್ಲ. ನನ್ನ ಉಸಿರು ಕಮಿಷನ್ ಮೇಲೆಯೆ ನಿಂತಿದೆ. ದಲಾಲ ಎನ್ನುವುದು ಒಂದು ಹೇವರಿಕೆ ಹುಟ್ಟಿಸುವ ಶಬ್ಧ. ಇದಕ್ಕೆ ಸಮಾಜದಲ್ಲಿ ಯಾವ ಕಿಮ್ಮತ್ತೂ ಇಲ್ಲ. ನಂಗಿದು ತಿಳಿದಿದೆ. ಆದರೆ ನಾನು ಅಸಹಾಯಕ. ಇಲ್ಲಿ ನಿಮ್ಮ ಮುಂದೆ ನನ್ನ ಜಾಣತನದ ಬಗ್ಗೆ ಕೊಚ್ಚಿಕೊಳ್ಳುತ್ತಿಲ್ಲ. ಬದಲಿಗೆ ನನ್ನ ವಂಚನೆಯ ಕ್ರೂರ ಕೌಶಲವನ್ನು ಪರಿಚಯಿಸಿದೆ.

ಒಂದು ಗೋಧೂಳಿಯ ಸಂಜೆ ಈ ಘಟನೆ ನಡೆಯಿತು. ನಾನು ಅದೆ ತಾನೆ ಮನೆಗೆ ಬಂದು ಅಂಗಳದಲ್ಲಿದ್ದ ಹೊರಸಿನ ಮೇಲೆ ಹೊರಳಾಡುತ್ತಿದ್ದೆ. ಜಂತಿಯಲ್ಲಿ ಗುಬ್ಬಿಗಳು ಕಚಿಪಿಚಿ ಗದ್ದಲವೆಬ್ಬಿಸಿದ್ದುವು. ಜಂತಿಯೆಲ್ಲ ಇಲ್ಲಣ (ಹೊಗೆಯ ಮಸಿ) ಹತ್ತಿ ಗುಬ್ಬಿಗಳ ಹಾವಳಿಯಿಂದ ಮಣ್ಣೆಲ್ಲ ಉದುರುತ್ತಿದೆ. ನನ್ನ ಹೃದಯದ ಬಣ್ಣವೂ ಇದೇ ಅಲ್ಲವೇ; ನನ್ನೊಳಗೆ ಸವಾಲುಗಳೇಳುತ್ತಿವೆ. ಶಿಥಿಲವಾಗುತ್ತಿರುವ ಚಾವಣಿ ತನ್ನ ದಶಕಗಳ ಇತಿಹಾಸವನ್ನು ಸಾರಿ ಹೇಳುತ್ತಿದೆ. ಹಕ್ಕಿಗಳಿಂದಾದ ತೂತುಗಳು ನನ್ನ ಜೀವನದ ಖಾಲಿತನವನ್ನು ಕಿಲಕಿಲಿಸುತ್ತಿವೆ. ನಾನು ಎಷ್ಟು ಸುಳ್ಳುಗಳನ್ನು ಹೇಳಿದೆ, ಎಷ್ಟೊಂದು ಪಾಪ ಮಾಡಿದೆ. ರೋಗಿಷ್ಟ ದನಗಳನ್ನು ದುಬಾರಿ ರೇಟಿಗೆ ಮಾರಿದೆ, ಎಷ್ಟೊಳ್ಳೆ ದನಗಳನ್ನು ಬಿಡಿಗಾಸಿಗೆ ಕೊಂಡೆ. ಎಲ್ಲ ಈ ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ. ಇಷ್ಟೆಲ್ಲ ದುನರ್ೀತಿ ನಡೆದೂ ಕಡೆಗೇನಿದೆ ಎಲ್ಲ ಖಾಲಿ ಖಾಲಿ!

ಮನದ ತುಂಬ ತುಂಬಿ ತುಳುಕುವಷ್ಟು ಬೇಸರ ದುಗುಡ ಆವರಿಸಿದೆ. ಏನೇನೊ ಹಳೆಯ ಯೋಚನೆಯಲ್ಲಿರುವಾಗ ಅಂಗಳದಲ್ಲಿ ಕೇಳಿಸಿದ ಹೆಜ್ಜೆ ಸಪ್ಪಳ ವಾಸ್ತವಕ್ಕೆ ತಂದಿತು.

ನೋಡಿದರೆ ಅರವತ್ತು ವರ್ಷದ ಮುದುಕ ನಿಂತಿದ್ದಾನೆ.

'ಸಲಾಮ್ರೀ ಯಪ್ಪಾ'

'ಸಲಾಮಪಾ ಯಣ್ಣಾ ಬಾ' ಅಂದೆ.

'ನೀವು ತನಸುಖ್ ಅಲ್ಲಾ?'

'ಹೌದು'

'ನಂಗೊಂದು ಎಮ್ಮಿ ಕೊಂಡುಕೋ ಬೇಕಾಗ್ಯದ' ನನ್ನ ಪಾದದ ಹತ್ತಿರ ಕೂಡುತ್ತ ಅಂವ ಹೇಳಿದ.

ಮುದುಕನ ಮುಖದಲ್ಲಿ ಬಡತನ, ದುಃಖಗಳು ಮೂಡಿಸಿದ ನೆರಿಗೆಗಳು ಸ್ಪಷ್ಟವಾಗಿದ್ದುವು. ಬದುಕಿನ ದಾರುಣತೆಗೆ ಸೋತು ಜರ್ಜರಿತನಾದವನಂತೆ ತೋರುತ್ತಾನೆ. ನನ್ನ ಇದುವರೆಗಿನ ಬೇಸರವನ್ನೆಲ್ಲ ತೊಲಗಿಸುವಂತಹ ಮಿಂಚೊಂದು ನನ್ನ ತಲೆಯಲ್ಲಿ ಥಟ್ಟನೇ ಹೊಳೆಯಿತು. ಹಾಂ! ಇದು ನನಗೊಂದು ಅದ್ಭುತ ಅವಕಾಶ, ನನ್ನೆಲ್ಲ ಪಾಪಗಳನ್ನು ತೊಳೆದುಕೊಳ್ಳಲು. ಈ ದಿನ ಈ ದೀನ ಮುದುಕನಿಗೆ ಒಂದು ಚೆಂದದ ದನ ಕೊಡಿಸಿ ಜೀವನದಲ್ಲಿ ಒಂದಾದರೂ ಉಪಕಾರ ಮಾಡುವ ಸಮಯವಿದೆಂದು ಅಂದುಕೊಂಡೆ.

ಸ್ವಲ್ಪ ನೀರು ಕುಡಿದು ಅಂವ ಕೇಳಿದ, ' ನಾನಂದದ್ದು ಕೇಳಿಸಿತ್ರಿ?'

'ಹೂಂ. ನೀ ಯಾವ್ದಾರ ಎಮ್ಮಿ ನೋಡೀಯೇನ್?'

'ಹೌದ್ರಿ ನಿಮ್ಗ ಗೊತ್ತಿರೋ ಎಮ್ಮಿನೇ ಅದು.'

'ಎಲ್ಲೈತಿ ಅದ?'

'ಖರೇ ಹೇಳ್ಬೇಕಂದ್ರ ಇಲ್ಲೇ ಐತಿ; ನಿಮ್ಮ ಮಗ್ಗಲಮನಿ ಕಾಶಿ ರೇಗಾರಂದು.'

'ಹಾಂ! ಕಾಶೀ ಎಮ್ಮ್ಯಾ!?'

ಕಾಶಿಯ ಹೆಸರು ಕೇಳುತ್ತಲೇ ನನ್ನ ತಲೆ ಗಿರ್ರೆನ್ನತೊಡಗಿತು. ತಲೆತಲಾಂತರದಿಂದ ಬಡತನದ ಶಾಪವನ್ನು ಬಡಿದುಕೊಂಡಿದೆಯೇನೋ ಅನ್ನುವಂತಹ ಮನೆ, ಗುಳಿ ಕಣ್ಣುಗಳ ದುಃಖ ಮಡುಗಟ್ಟಿದ ಮುಖ ಕಣ್ಮುಂದೆ ಅಳತೊಡಗಿದುವು. ಕಾಶಿಯ ಹೆಂಡತಿಯನ್ನು ಕ್ಯಾನ್ಸರ್ ಹಿಂಡಿ ಹಿಪ್ಪೆ ಮಾಡುತ್ತಿದ್ದು, ಆಕೆಗೆ ಚೌಳಿಕಾಯಿ, ಬೆಂಡಿಕಾಯಿಯಂತಹ ಕೂಸುಗಳಿವೆ. ಆಕೆಯ ಆಪರೇಶನ್ ಮತ್ತು ಔಷಧಿಗಾಗಿ ತನ್ನಲ್ಲಿರುವ ಒಂದೇ ಒಂದು ಎಮ್ಮೆಯನ್ನು ಕಾಶಿ ಮಾರಬೇಕೆಂದಿದ್ದ. ಅದನ್ನು ಮಾರಿಸಿ ಕೊಡುವಂತೆ ನನಗೇ ಪದೇ ಪದೇ ನೆನಪಿಸಿದ್ದ.

ಮಾರಿಸಬಹುದಿತ್ತು. ಆದರೆ ಎಮ್ಮೆಯ ಇತಿಹಾಸ ಅಷ್ಟು ಸರಿ ಇರಲಿಲ್ಲ. ಅದು ಈಗಾಗಲೇ ನಾಲ್ಕು ಸಲ ಕಂದಾ (ಗರ್ಭಪಾತ) ಹಾಕಿತ್ತು. ವೆಟರ್ನರಿ ಡಾಕ್ಟರ್ ಚೆಕ್ ಮಾಡಿ ಇನ್ನೊಮ್ಮೆ ಏನಾದರೂ ಇದು ಕಂದಾ ಹಾಕಿದರೆ ಸಾಯೋದು ಗ್ಯಾರಂಟಿ ಎಂದು ಎಚ್ಚರಿಸಿದ್ದರು. ಈಗ ಅದೇ ಎಮ್ಮೆಯನ್ನು ಕೊಡಿಸೆಂದು ಈ ಪಾಪದ ಮುದುಕ ಗಂಟು ಬಿದ್ದಿದ್ದಾನೆ.

ನಾನು ದೊಡ್ಡ ಅಡಕತ್ತರಿಯಲ್ಲಿ ಸಿಲುಕಿಕೊಂಡೆ. ಒಳಗೊಳಗೆ ನೋವು ತಿನ್ನುತ್ತ ನನಗೆ ಒಂದು ಶಬ್ದವನ್ನೂ ಮಾತನಾಡಲಾಗಲಿಲ್ಲ.

ಮುದುಕನೇ ಮೌನ ಮುರಿದ, 'ಏನ್ ವಿಚಾರ ಮಾಡ್ಲಿಕತ್ತೀರಿ? ನಾ ಹೇಳಿದ್ದು ಸರಿ ಬರಲಿಲ್ಲೇನ್ರೀ?

'ಹೇ ಹಂಗೇನಿಲ್ಲ, ಅದ ಕಾಶಿ ಎಮ್ಮೇನು?'

'ಹೌದ್ರಿ, ಮತ್ತ್ಯಾಕ ಚಿಂತಿ ಮಾಡಾತೀರಿ? ಆ ಎಮ್ಮಿ ಒಳಗ ಏನಾರ ಊನ ಐತೇನ್ರೀ ಮತ್ತ? ಕಾಲ ಬೀಳತೇನ್ರೀ ಇಲ್ಲ ಅನಬ್ಯಾಡ್ರೀ ಯಪ್ಪಾ ನಾ ಬಡವ. ನನಗಾಗಿ ಅಲ್ಲದಿದ್ರೂ ನನ ಮಗನ ಮಾರಿ ನೋಡೆರ ಆ ಎಮ್ಮಿ ಕೊಡಸ್ರೀ!'

ನಿನ್ನ ಮಗಾ?

'ಹೂಂನ್ರೀ, ಅಂವಾ ಯಾಡ ವಷರ್ಾತು ದವಾಖಾನ್ಯಾಗ ಇದ್ದನ್ರಿ. ನಿನ್ನ್ಯ ಬಂದಾನ್ರೀ. ಡಾಕತರ್ ಅಂವಗ ಹಾಲ ಕುಡಿಬೇಕಂತ ಹೇಳ್ಯಾರ. ಅದಕ ಈ ಎಮ್ಮೀ ತಗೋಬೇಕಂತ ಇಚಾರ ಮಾಡೇನ್ರೀ. ಇದರಲೇ ನನ ಮನೀ ಉಪ್ಪ ಖಾರಾನೂ ಅಕ್ಕೈತಿ, ಹುಡುಗಗ ಹಾಲ ಸಿಗುವಂಗೂ ಅಕ್ಕೈತಿ ಅನ್ನೋದು ನನ ಬರೋಸ್ರಿ' ಅಂದ.

'ಓಹ್!' ಉದ್ಗರಿಸಿದೆ.

'ಅದಕ್ರೀ ಸಾಹುಕಾರ, ಇದೊಂದ್ ಕೆಲಸ ಮಾಡಿ ಪುಣ್ಯ ಕಟ್ಕೋಳ್ರಿ. ನಾ ಸೋತ ಹೋಗೆನ್ರಿ.'

ನನ್ನೊಳಗೆ ನಡೆಯುತ್ತಿರುವ ಯುದ್ಧ ಮುದುಕನಿಗೆ ಗೊತ್ತು? ಅಲುಗಾಡದೇ ಕುಳಿತಿದ್ದೆ. ಇಡೀ ಜಗತ್ತು ನನ್ನ ಸುತ್ತಲೇ ಗಿರಗುಟ್ಟುತ್ತಿದೆ ಅನ್ನಿಸ್ತು. ಎದೆಯಲ್ಲಿ ಕೋಲಾಹಲದ ಸುನಾಮಿ ಎದ್ದಿತ್ತು. ನನ್ನ ಇಪ್ಪತ್ತು ವರ್ಷದ ದಲಾಲಿ ಜೀವನದಲ್ಲಿ ಯಾವುದೂ ನನ್ನನ್ನು ಇಷ್ಟು ಆಳವಾಗಿ ಅಲುಗಾಡಿಸಿರಲಿಲ್ಲ. ಒಂದೇ ಹೊಡೆತಕ್ಕೆ ಮುದುಕ ನನ್ನೆಲ್ಲ ಪಾಪಗಳಿಗೆ ಶಿಕ್ಷೆ ನೀಡಿದ್ದ. ಚಾಚಿದ ತೋಳುಗಳ ಎರಡು ಹಸಿದ ಆಕೃತಿಗಳು ನನ್ನೆದುರು ನಿಂತಿದ್ದುವು. ಎರಡು ಜೀವಂತ ಅಸ್ಥಿಪಂಜರಗಳು! ಯಾರನ್ನು ಉಳಿಸಲಿ; ಅಳಿಸಲಿ ಯಾರನ್ನು!? ಪ್ರಶ್ನೆಗಳು ನನ್ನನ್ನು ತೀವ್ರವಾಗಿ ಇರಿದುವು. ಈ ಮುದುಕನಿಗೆ ಎನು ಹೇಳಲಿ ಹೂಂ ಅಥವಾ ಉಹೂಂ? ನನ್ನ ಒಂದು ಹೂಂ ಮುದುಕನನ್ನು ಕೊಂದು ಹೂಂಕರಿಸುತ್ತದೆ. ಒಂದು ಉಹೂಂ ಕಾಶಿಯ ಚರಮಗೀತೆ ಹಾಡುತ್ತದೆ.

'ಏನ್ರೀ ಯಪ್ಪಾ ಕಾಶೀ ಮನಿಗೆ ಹೋಗೋನೇನ್ರಿ? ಮುದುಕ ಮತ್ತೇ ಕೇಳಿದ.

'ಯಜ್ಜಾ, ನಾ ದಲಾಲ ಅಲ್ಲ ಹೋಗ!!' ನಾ ಚೀರಿದೆ 'ನಿನಗ ಹೆಂಗ ಅನಸ್ತೈತಿಹಂಗ ಮಾಡು'

ಸಾವಕಾಶ ತನ್ನ ಕೋಲಿನ ಸಹಾಯದಿಂದ ಮುದುಕ ಎದ್ದ, ಕಾಲು ಕಟ್ಟಿದ ಮುದಿ ಕುದುರೆಯಂತೆ ನಡಗುತ್ತ ನಡೆದ.

ನನ್ನ ಹೊರಸಿಗೆ ಬೆನ್ನು ಒರಗಿಸಿದೆ. ಜಂತಿಯಲ್ಲಿ ಗುಬ್ಬಿಗಳ ಜಗಳ ಇನ್ನೂ ಮುಗಿದಿರಲಿಲ್ಲ.






-ವಿಠಲ ದು ದಳವಾಯಿ
ಶಿಕ್ಷಕರು
ಮುಗಳಿಹಾಳ ಅಂಚೆ
ಸವದತ್ತಿ ತಾಲೂಕು
ಬೆಳಗಾವಿ ಜಿಲ್ಲೆ 591129
ಮೊ: 9880300485
        8970075833








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ