ಬುಧವಾರ, ಡಿಸೆಂಬರ್ 28, 2011

ಕಾವ್ಯ ಅನುರಣನ

ಸವಾಲು


ಎದೆ ಕಣ್ಣಹನಿ ತುಂಬಿದ ಕೊಡ
ಈ ಹೊತ್ತು
ನಂಬಿಕೆಯ ಜಗತ್ತನ್ನು ಅನುಮಾನಿಸುವ ಸಮಯ

ಗಿಡುಗನ ಸುಳಿವು ಕಂಡರೂ ಹಕ್ಕಿ
ಗೂಡ ಜತನದಿಂದ ಹೊರಬರಲೇಬೇಕು
ಮರಿಗಳ ಹಸಿವ ನೀಗುವ ಸವಾಲಿದೆ

ಹೊಂಚು ಹಾಕಿದ ಬೆಕ್ಕ ಸುಯಿತವ ಧಿಕ್ಕರಿಸಿ
ಕಪ್ಪು ಇಲಿ ಕಾಳು ಕಡಿ ಕದಿಯಬೇಕಿದೆ
ಗುದ್ದಿನ ಕಾವು ಮೈಸುಡುತ್ತದೆ

ನಗುವ ಚಿಗುರೆಲೆಯ ಕೊಂಬೆಯಲಿ ಹಾವು
ನಿಡುಸುಯ್ಯುತಿದೆ
ತರಗೆಲೆಯ ಮೈ ಸವರಲು ಕೈಚಾಚಿದೆ
ಕಾಲಕೆಳಗೆ ಹಳದಿ ಎಲೆಗಳ ಹೆಣದ ಮಿಸುಕು
ಎತ್ತಿಕೊಂಡಾಗ
ಕಣ್ಣು ತಾನೇ ಹನಿಸಿದ ಹೊತ್ತಲ್ಲಿ
ಗಾಳಿಧೂಳ ಹೊತ್ತು ತಂದು ರಾಚಿತು ಮೈಯೆಲ್ಲ ಕೆಂಧೂಳು
ಕರಿಗಲ್ಲದ ತುಂಬ ಮುತ್ತಿನ ಸಾಲು
ಬಿರುಬಿಸಿಲಲ್ಲೂ ಗಿಡ ಹನಿಯುದುರಿಸಿತು ಇಬ್ಬನಿಯನಲ್ಲ.

[ವೀರಣ್ಣ ಮಡಿವಾಳರ ನಮ್ಮ ನಡುವಿನ ಸಶಕ್ತ ಯುವ ಕವಿಗಳಲ್ಲಿ ಒಬ್ಬರು. ತಮ್ಮ ಪ್ರಥಮ ಕವನ ಸಂಕಲನ 'ನೆಲದ ಕರುಣೆಯ ದನಿ' ಯ ಮೂಲಕ ಕಾವ್ಯ ಜಗತ್ತಿನಲ್ಲಿ ದಿಟ್ಟ ಹೆಜ್ಜೆಯೂರಿರುವವರು. 'ಸವಾಲು' ಆ ಸಂಕಲನದ ಒಂದು ಕವಿತೆ.]

ಜೀವ ಪಣಕ್ಕಿಟ್ಟು ಜೀವನ ಕಟ್ಟುವ ಹಾದಿಯಲ್ಲಿ.....
                                                         
ರೂಪ ಹಾಸನ

ಯಾರೂ ಯಾರನ್ನೂ ನಂಬದಂತಹ, ಅನುಮಾನಗಳೇ ಮುಗ್ಧತೆಯನ್ನು ಸುಡುವ ಅಸ್ತ್ರಗಳಾಗುತ್ತಿರುವ ಈ ಹೊತ್ತಿನಲ್ಲಿ ನೋವು-ಕ್ರೌರ್ಯಗಳು ಅಕ್ಕಪಕ್ಕದ ಮನೆಯಲ್ಲೇ ವಾಸಿಸುವ ಮಿತ್ರರಂತಾಗುತ್ತಿವೆ. ನೋವು ಹೊತ್ತು ತರುವ ಹಿಂಸೆಯನ್ನು ಪ್ರಶ್ನಿಸುವಂತೆಯೂ ಇಲ್ಲ. ಏಕೆಂದರೆ ಅದರ ಆಳ ಬೇರುಗಳೆಡೆಯಲ್ಲಿ ಚಾಚಿಕೊಂಡಿರುವ ವಿಷದ ಬೀಜಗಳು ಮತ್ತೆ ಮತ್ತೆ ಮೊಳೆಯುತ್ತಲೇ ಇರುವ ರಕ್ತ ಬೀಜಾಸುರ ಸಂತತಿಯಂತೆ ಎಲ್ಲೆಡೆಗೆ ಚೆಲ್ಲಾಡಿ ಬಿದ್ದು ಗಹಗಹಿಸಿ ನಗುತ್ತಾ ಬೃಹದಾಕಾರವಾಗಿ ಜೀವರಾಶಿಯನ್ನೇ ನುಂಗುತ್ತಿರುವಾಗ ತಲ್ಲಣಿಸುತ್ತಿರುವ ಜೀವ ಹೊತ್ತು ಕವಿತೆ ಕೇಳುತ್ತಿದೆ 'ದಾರಿಯೆಲ್ಲಿದೆ ಇಲ್ಲಿ ನಿಷ್ಕಲ್ಮಶ ಪ್ರೀತಿಗೆ?' ಎಂದು.

ಈ 'ಸವಾಲು' ಕವಿತೆಯಲ್ಲಿ ನಂಬಿಕೆಯ ಪ್ರಪಂಚವನ್ನೇ ಅನುಮಾನಿಸುತ್ತಿರುವ ಈ ಹೊತ್ತಿನಲ್ಲಿ ಕಣ್ಣ ಹನಿ ತುಂಬಿದ ಕೊಡವಾಗಿರುವ ಎದೆಯ ತಲ್ಲಣದ ಎಳೆ ಎಳೆಗಳು ಬಿಚ್ಚಿಕೊಳ್ಳುತ್ತವೆ. ಆಕಾಶದಲ್ಲಿ ಹೊಂಚುತ್ತಿರುವ ಗಿಡುಗನ ಸುಳಿವು ಸಿಕ್ಕರೂ ಹಕ್ಕಿ, ಗೂಡು ಬಿಟ್ಟು ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಾ, ಆತಂಕದಲ್ಲಿ ಹೊರಬರಲೇ ಬೇಕಿರುವ ಅನಿವಾರ್ಯತೆಯನ್ನು ನಮ್ಮೆದುರಿಗೆ ಬಿಚ್ಚಿಡುವ ಕವಿ, ಹಕ್ಕಿಗೆ ಮರಿಗಳ ಹಸಿವು ನೀಗುವ ಸವಾಲಿರುವುದನ್ನು ನೆನಪಿಸಿ, ಪ್ರೀತಿ-ವಾತ್ಸಲ್ಯಗಳ ಮುಂದೆ ಸಾವಿನ ಭೀಕರತೆಯೂ ಕ್ಷುಲ್ಲಕವಾಗುವ ಅಂತಃಕರಣದ ರೂಪಕವನ್ನು ನಮ್ಮೆದುರಿಗೆ ಬಿಚ್ಚಿಡುತ್ತಾರೆ.

ಹೊರಗೆ ಬೆಕ್ಕು ಠಳಾಯಿಸುತ್ತಾ ಇಲಿಗಾಗಿ ಹೊಂಚು ಹಾಕುತ್ತಿದ್ದರೂ ಇಲಿ ಕಾಳು ಕಡಿಯನ್ನು ಕದಿಯಲೇ ಬೇಕಿದೆ. ಅದಕ್ಕೆ ಈ ಜೀವ ವತರ್ುಲದಲ್ಲಿ ತಾನು ಬಿದ್ದಿರುವ ಅರಿವಿಲ್ಲದೆಯೂ, ಬೆಕ್ಕಿನ ಕೈಗೆ ಸಿಕ್ಕಿ ಹಾಕಿಕೊಂಡರೆ ಉಳಿಗಾಲವಿಲ್ಲವೆಂಬ ನಿಜ ಅದಕ್ಕೆ ಗೊತ್ತಿದೆ. ಆದರೆ ಬದುಕಿನ ಸಂಘರ್ಷಗಳು ಎಷ್ಟೇ ದೊಡ್ಡವಾದರೂ ಬದುಕು ಅದಕ್ಕಿಂಥಾ ದೊಡ್ಡದು. ಬದುಕುವುದು ಎಲ್ಲಕ್ಕಿಂಥಾ ಮುಖ್ಯ ಎಂಬ ಅರಿವಿಲ್ಲದೇ ಸಾಗುವ ಪ್ರಕೃತಿ ಸಹಜ ದಾರಿಗೆ, ಎಷ್ಟು ಪೆಟ್ಟುಗಳು ಬಿದ್ದರೂ ಮತ್ತೆ ಚೇತರಿಸಿಕೊಂಡು ಏಳಲೇ ಬೇಕಾದ ಸವಾಲು ಮತ್ತು ಅನಿವಾರ್ಯತೆ.

ಬದುಕು ಮತ್ತು ಅದನ್ನು ಒಳಗೊಳ್ಳುವಾಗ ನಡೆಸುವ ಸಂಘರ್ಷ ಚಿಗುರೆಲೆಯ ಕೊಂಬೆಯಲ್ಲಿ ಹಾವು ನಿಡುಸುಯ್ಯುತ್ತ ಮಲಗಿದಂತೆಂದು ಬೆಚ್ಚಿಬೀಳಿಸುವ ಕವಿ, ಕಾಲಕೆಳಗೆ ಬಿದ್ದಿರುವ ಆ ಮರವುದುರಿಸಿದ ಪಕ್ವಗೊಂಡು ಬಿದ್ದ ಹಳದಿ ಎಲೆಗಳ ಶವದ ಮಿಸುಕಿನಲ್ಲಿ ತರಗೆಲೆಗಳನ್ನು ಪ್ರೀತಿಯಿಂದ ಸವರಲು ಎತ್ತಿಕೊಂಡಾಗ ಕಣ್ಣು ತನ್ನಂತೆ ತಾನೇ ಅದರ ಸಾರ್ಥಕತೆ ನೆನೆದು ಹನಿಗೂಡುತ್ತದೆ. ಸವಾಲಿಗೆ ಎದೆಯೊಡ್ಡಿ ನಿಂತ ಸಂಘರ್ಷ ನೆನಪಿಸುವಂತೆ ಗಾಳಿ ಧೂಳನ್ನು ಹೊತ್ತು ತಂದು ಮೈಯೆಲ್ಲ ಕೆಂಧೂಳು ರಾಚಿದಾಗ, ಆ ಕೆಂಧೂಳು ತೊಳೆಯಲು ತನ್ನದಲ್ಲದ, ಯಕಶ್ಚಿತ್ ತನ್ನ ಮೈಮೇಲಿನ ಇಬ್ಬನಿ ಉದುರಿಸದೇ ಆ ಬಿರು ಬಿಸಿಲಿನಲ್ಲೂ ಆಸರೆಯಾಗಿ ನಿಂತ ಗಿಡ ತನ್ನ ಒಡಲನ್ನೇ ಬಸಿದು ಹನಿಯುದುರಿಸಿದ್ದನ್ನು ಸಾರ್ಥಕತೆಯಿಂದ ಕವಿ ನೆನೆಯುತ್ತಾನೆ.

ಬದುಕಿಗೊಡ್ಡುವ ಸವಾಲುಗಳ ಜೊತೆ ಜೊತೆಗೇ, ಒಳಗಿನಿಂದಲೇ ಹದಗೊಳಲು ಗಟ್ಟಿ ಆಸರೆಗಳೂ ದಾರಿಯುದ್ದಕ್ಕೂ ಇರುತ್ತವೆ. ನೋವು, ಸವಾಲು ಮತ್ತು ಸಂಘರ್ಷಗಳೇ ತುಂಬಿದ ಹಾದಿಯಲ್ಲಿಯೂ, ಪ್ರೀತಿ ಮತ್ತು ಸಹನೆ ತುಂಬಿದ ಕೈಗಳ ಸಾಂತ್ವನ ಇದೆಯೆಂದೇ ಬದುಕು ಸಹ್ಯವಾಗುತ್ತದೆ. ಬದುಕಿನ ಸವಾಲು ಮತ್ತು ಅದನ್ನು ಕಾಯುವ ಜೀವ ಕಾರುಣ್ಯ ಒಟ್ಟೊಟ್ಟಿಗೇ ಸಾಗುವ ಶಕ್ತಿಗಳು. ನುಂಗಿ ನೊಣೆಯಲು ಕಾದು ನಿಂತ ಸಾವಿನ ಸೆರಗಿನಲ್ಲೂ ಕಾಯುವ ಒಂದು ಆಶಾವಾದ ಇರುವೆಡೆಗೆ ನಮ್ಮನ್ನು ಸೆಳೆವ ಕವಿ, ಈ ಸಂಘರ್ಷಮಯ ಬದುಕುವ ಸವಾಲಿಗಿಂತಾ, ಬದುಕುಳಿಯಲೇ ಬೇಕಾದ ಅನಿವಾರ್ಯತೆಯಲ್ಲಿ ಎದುರಾಗುವ ಜೀವ ಪ್ರೀತಿಯ ಹಿರಿಮೆಯನ್ನು ಎತ್ತಿ ಹಿಡಿದು ಆ ಆಶಾವಾದದೆಡೆಗೆ ನಮ್ಮನ್ನು ಕರೆದೊಯ್ಯುತ್ತಾನೆ.

2 ಕಾಮೆಂಟ್‌ಗಳು: