ಭಾನುವಾರ, ನವೆಂಬರ್ 13, 2011

ಬಿಡಿ ಬಿಡಿ ಕವಿತೆ

ಹೆದೆಯೇರಿಸಿ
ಹಿಂದಕ್ಕೆಳೆದೇ ಹೊಡೆಯಬೇಕು ಬಾಣ
ಆವಾಗಲೇ ಬೇಟೆ
ಹಸಿದ ಹೊಟ್ಟೆಯ ಸಿಟ್ಟು
ರಟ್ಟೆಗೆ ತಂದುಕೊಂಡು
ಧಾವಿಸಿ ಓಡಿದರೆ ಸಿಕ್ಕುವುದಿಲ್ಲ ರೊಟ್ಟಿ


***


ಧಡಿಯನ ಕಾಲ್ತುಳಿತಕೆ
ಪುಟ್ಟ ಇರುವೆಯ ಹೊಟ್ಟೆ ಒಡೆಯಿತು
ಮುಂದಡಿಯಿಡುವ
ಇಚ್ಛಾಶಕ್ತಿ ಒಡೆಯಲಾಗಲಿಲ್ಲ
        

***
 
ಆ ಜನನಿಬಿಡ ಬೀದಿಯಲ್ಲಿ
ಕಣ್ಣಲ್ಲೇ ಜೀವ ಹಿಡಿದ ಹಸುಳೆ
ಅಲವತ್ತುಕೊಳ್ಳುತ್ತಿದೆ
ತುತ್ತು ಅನ್ನ ನೀಡಿ ನನ್ನ ಬದುಕಿಸಿ
ಬದುಕಿರುವವರ‍್ಯಾರೂ ಕಾಣಿಸುತ್ತಿಲ್ಲ


***


 
ನನ್ನ ಕೆನ್ನೆ
ಮೇಲೊಂದು ಹನಿ ಮೂಡಿದೆ
ಅದು ಅವಳು ಕೊಟ್ಟ ಮುತ್ತು ಎಂದು
ಲೋಕದ ಆಪಾದನೆ
ಯಾರಿಗೇನು ಗೊತ್ತು
ಅದು ಅವಳು ಕೊಡದಿರುವುದಕ್ಕೆ
ಜಾರಿದ ಕಣ್ಣ ಹನಿಯೆಂದು


***


ಭುವಿಯೊಡಲು ಬಿರಿದಿದೆ
ಯಾರದೋ ದಾಳಿಗೆ
ಸದ್ದು ಬೇಡ ಜಗವೇ
ಮಗು ಮಲಗಿದೆ
ನನ್ನವಳ ಒಡಲೊಳಗೆ





ಕಲಿಗಳ ಕಲಿಕೆ

ಶಾಲೆ ಪ್ರಾರಂಭವಾಗುವ ದಿನ ನೆನಪಿನಲ್ಲಿ ತಂದುಕೊಂಡರೆ ಸಾಕು, ಕನಸುಗಳಿಗೆ ರೆಕ್ಕೆ ಮೂಡುತ್ತವೆ, ಮನಸ್ಸು ಉಲ್ಲಸಿತವಾಗುತ್ತೆ, ಸಂಭ್ರಮ ಉಕ್ಕಿ ಬರುತ್ತದೆ. ಗಡಿನಾಡಿನ ಮೂಲೆಯ ಒಂದು ತೋಟದಲ್ಲಿ ಯಾರಿಗೂ ಪರಿಚಯವೇ ಇಲ್ಲವೇನೋ ಎಂಬಂತೆ ನಗುತ್ತಿರುವ ನನ್ನ ಶಾಲೆ, ಹಲವಾರು ವಿಸ್ಮಯಗಳ ಒಂದು ಕೂಟ.ಶಾಲೆ ಪ್ರಾರಂಭವಾಗುವ ಸರಿಯಾದ ಸಮಯಕ್ಕೆ ತೋಟ ತೋಟಗಳ ನಡುವಿನಿಂದ, ಹೊಲಗದ್ದೆಗಳ ಬದುಗಳಿಂದ, ಗಿಡಮರಗಳ ತಂಪಿನ ನಡುವೆ ತಾವಾಗಿಯೇ ರೂಪಿಸಿಕೊಂಡಿರುವ ಕಾಲು ದಾರಿಗಳಿಂದ ಈ ದಿನ ನಮ್ಮದೇ ಎಂಬಂತೆ ಹೆಜ್ಜೆಯಿಡುತ್ತ ತಮ್ಮ ತೊದಲು ಕೇಕೆಗಳಲ್ಲಿ ಜನಸಂಪರ್ಕದಿಂದ ದೂರವೇ ಇರುವ ನಮ್ಮ ಶಾಲೆಗೆ ಎಲ್ಲ ದಿಕ್ಕುಗಳಿಂದಲೂ ಬರುವ ನನ್ನ ಮಕ್ಕಳ ಸೈನ್ಯದ ಚಿತ್ರ ಸದಾ ನೆನಪು ಹಸಿರಾಗಿಡುವಂಥದ್ದು.


ಇಲ್ಲಿ ವಾಹನಗಳ ದಟ್ಟಣೆಯಿಲ್ಲ, ಜನಗಳ ಗದ್ದಲವಿಲ್ಲ. ಅಂಗಡಿ ಮುಂಗಟ್ಟುಗಳ ಗೊಡವೆಯಿಲ್ಲ. ಇಲ್ಲಿ ಏನಿದ್ದರೂ ಶಾಲೆ ಮಾತ್ರ. ನನ್ನದು ತೋಟದ ಶಾಲೆ. ಗಾವಡ್ಯಾನವಾಡಿ ಎಂಬ ಈ ಹಳ್ಳಿ ನೀವು ಹುಡುಕಿದರೂ ಸಿಗುವುದಿಲ್ಲ. ಇದೇ ಹಳ್ಳಿಗೆ ಬಂದರೂ ನೀವು ಗಾವಡ್ಯಾನವಾಡಿಯನ್ನು ಕಾಣಲು ಸಾದ್ಯವಿಲ್ಲ. ಏಕೆಂದರೆ ಎಲ್ಲ ಗ್ರಾಮಗಳಲ್ಲಿರುವಂತೆ ಇಲ್ಲಿ ಒಟ್ಟಾಗಿ ಮನೆಗಳಿಲ್ಲ. ಹರಟೆಕಟ್ಟೆಯಿಲ್ಲ. ಗುಂಪು ಜನರನ್ನು ಕಾಣಲಾಗುವುದಿಲ್ಲ. ಬೊಗಸೆ ಹೂಗಳನ್ನು ಜೋರಾಗಿ ಆಕಾಶಕ್ಕೆ ತೂರಿದಾಗ ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬೀಳುವ ಹೂಗಳಂತೆ ಇಲ್ಲಿ ಮನೆಗಳು ಒಂದು ರೀತಿ ಮಗು ಬಿಡಿಸಿದ ಚೆಲ್ಲಾಪಿಲ್ಲಿ ಚಿತ್ರಗಳು. ಇಲ್ಲಿ ಮಕ್ಕಳ ದೈನಿಕ ಬದುಕಿನ ನಡೆಗಳಲ್ಲಿಯೇ ಧೀಮಂತಿಕೆಯಿದೆ. ಆಳೆತ್ತರ ಬೆಳೆದಿರುವ ಕಬ್ಬಿನ ತೋಟಗಳ ದಟ್ಟಣೆಯ ಮಧ್ಯೆ ಕಿಲೋಮಿಟರ್‌ಗಟ್ಟಲೆ ಆರು ವರ್ಷದ ಮಗುವೊಂದು ಒಬ್ಬಂಟಿಯಾಗಿ ಶಾಲೆಯ ಮಡಿಲಿಗೆ ಬಂದು ಸೇರುವುದೇ ಇಲ್ಲಿನವರ ತಾಕತ್ತಿನ ಪ್ರತೀಕ. ಇದು ಕೇವಲ ಒಂದು ಮಗುವಿನ ಕಥೆಯಲ್ಲ. ಇಲ್ಲಿನ ತೋಟದ ಶಾಲೆಯ ಎಲ್ಲ ಮಕ್ಕಳಲ್ಲೂ ಇದೇ ಧೈರ್ಯ, ಸ್ಥೈರ್ಯ. ಜನರದ್ದೂ ಇದೇ ಬದುಕು. ಹಗಲೂ ರಾತ್ರಿಯ ವ್ಯತ್ಯಾಸ ಇಲ್ಲಿಲ್ಲ. ಸಂತೆಯ ದಿನವೇ ಪಕ್ಕದ ಹಳ್ಳಿಯಿಂದ ಎಲ್ಲವನ್ನೂ ಸಂಗ್ರಹಿಸಿಟ್ಟುಕೊಳ್ಳಬೇಕು. ಹೊತ್ತು ಮುಳುಗಿದ ಮೇಲೆ ಬೆಂಕಿಪೂಟ್ಟಣ ಖಾಲಿಯಾಗಿದ್ದರೆ ಅದೇ ಕತ್ತಲಲ್ಲಿ ಪಕ್ಕದ ಊರಿಗೆ ನಡೆದು ತಂದು ಮನೆಯಲ್ಲಿ ಬೆಳಕು ಕಾಣಬೇಕು.

ಈ ಎಲ್ಲ ವಿಚಿತ್ರ ವಿಸ್ಮಯಗಳ ಮದ್ಯೆ ನನ್ನ ಮಕ್ಕಳಿದ್ದಾರೆ. ಅವರಿಗೆ ಯಾವ ಕೊರತೆಗಳೂ ಬಾಧಿಸುವುದಿಲ್ಲ. ಅದಮ್ಯ ಚೇತನದ ಅಂತಃಶಕ್ತಿಯ ಈ ಮಕ್ಕಳನ್ನು ತರಗತಿ ಕೋಣೆಯಲ್ಲಿ ಕಾಣುವುದೇ ಒಂದು ಸಂಭ್ರಮ. ಬಹುಶಃ ಬೇಸಿಗೆಯ ರಜೆಯಲ್ಲಿ ಸ್ವಲ್ಪ ಮಸುಕಾಗಿರುವ ಹಾಡುಗಳ ನೆನಪನ್ನು ಮತ್ತೆ ಸ್ವಚ್ಛವಾಗಿಸಿಕೊಳ್ಳಬೇಕು. ಮಕ್ಕಳ ಮನಸ್ಸಿನಲ್ಲಿ ನಗು ಉಕ್ಕಿಸುವ, ತಮಗೆ ತುಂಬಾ ಇಷ್ಟವಾಗುವ ಸ್ಥಳ ಶಾಲೆಯೇ ಎಂದೆನಿಸುವಂತೆ ಮಾಡುವ ಹಾಡು, ಕುಣಿತ, ಕಥೆ ಎಲ್ಲವನ್ನೂ ನಾನೀಗ ಮತ್ತದೇ ಹೊಸ ಹುಮ್ಮಸ್ಸಿನೊಂದಿಗೆ ಹೊಂದಿಸಿಕೊಳ್ಳಬೇಕು. ನನ್ನದು ನಲಿ-ಕಲಿ ತರಗತಿಯಾದುದರಿಂದ ಈ ಪುಟ್ಟ ಹೃದಯಗಳೊಂದಿಗೆ ಬೆರೆತು ಅವುಗಳ ಆಳದಲ್ಲಿ ಇಳಿದು ಕಲಿಸುವ ಕಲಿಯುವ ಕ್ರಿಯೆಯೇ ಅಭೂತಪೂರ್ವವಾದದ್ದು. ನನ್ನ ಒಂದೊಂದು ಆಲೋಚನೆಯೂ ಅಷ್ಟೂ ಮಕ್ಕಳ ಆ ಕ್ಷಣದ ಕಲಿಕೆಯನ್ನು ನಿರ್ಧರಿಸುತ್ತದೆ. ಏನನ್ನು, ಯಾವಾಗ ಎಷ್ಟನ್ನು ಕಲಿಸಬೇಕು ಎನ್ನುವ ನಿರ್ದಿಷ್ಟ ತಿಳುವಳಿಕೆಯಲ್ಲಿ ಎಲ್ಲೂ ವ್ಯತ್ಯಾಸವಾಗುವಂತಿಲ್ಲ. ನಲಿ-ಕಲಿ ತಂದುಕೊಟ್ಟಿರುವ ಮುಕ್ತ ಸ್ವಾತಂತ್ರ್ಯ ನನ್ನ ಮಕ್ಕಳಿಗೆ ನನ್ನಿಂದ ಕಲಿಯಲೇಬೇಕಾದ ಹಕ್ಕನ್ನು ತಂದುಕೊಟ್ಟಿದೆ. ನನ್ನ ಬೇಸರಕ್ಕೆ ಆಸ್ಪದವಿಲ್ಲ. ಇಡೀ ವರುಷದ ಕಲಿಸುವ ಪ್ರಕ್ರಿಯೆಯಲ್ಲಿ ಹಾಗಾಗಲು ಈ ಮಕ್ಕಳು ಬಿಡುವುದೂ ಇಲ್ಲ. ತಮ್ಮ ಜ್ಞಾನದ ಹಸಿವಿಗೆ ತಕ್ಕಷ್ಟನ್ನು ನಾನು ಪೂರೈಸದೇ ಹೋದರೆ ನನ್ನನ್ನೇ ದಿಟ್ಟಿಸಿ ನೋಡಿ ನನಗೆ ಮುಂದಿನ ಪಾಠವನ್ನು ಕಲಿಸಿ ಸರ್ ಎಂದು ಪಟ್ಟುಹಿಡಿದು ಕೇಳುವ ಅವಕಾಶ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿದೆ ಎಂಬುದೇ ಸುಮಾರು ವರುಷಗಳ ಹಿಂದಿನ ಸಾಂಪ್ರದಾಯಿಕತೆಯ ಆಚೆ ನಾವು ಮನೋವೈಜ್ಞಾನಿಕ ಶಿಕ್ಷಣದತ್ತ ಹೆಜ್ಜೆ ಇಟ್ಟಿದ್ದೇವೆ ಎಂಬುದಕ್ಕೆ ಗಟ್ಟಿ ಸಾಕ್ಷಿಯಾಗಿದೆ.

ಇನ್ನು ಮೊದಲನೇ ತರಗತಿಗೆ ಬರುವ ಮಕ್ಕಳನ್ನು ಸ್ವಾಗತಿಸಿಕೊಳ್ಳಬೇಕು. ಆ ಮಗುವಿಗಿರಬಹುದಾದ ಎಲ್ಲ ಅಪರಿಚಿತ ವಾತಾವರಣ ಭಯ ಹುಟ್ಟಿದಂದಿನಿಂದ ಐದು ವರ್ಷ ಹತ್ತು ತಿಂಗಳ ತನಕ ಪಾಲಕರ ತೆಕ್ಕೆಯಲ್ಲಿದ್ದ ಮಗುವನ್ನು, ಒಮ್ಮಿಂದೊಮ್ಮೆಲೆ ಶಾಲೆಯ ಮಡಿಲಲ್ಲಿ ತುಂಬಿಸಿಕೊಳ್ಳುವ ಪ್ರಕ್ರಿಯೆ ಸಂಭ್ರಮದ್ದೂ, ಸವಾಲಿನದ್ದೂ ಹೌದು. ಬೇರೆ ಬೇರೆ ಹಿನ್ನಲೆಗಳಿಂದ, ಬೇರೆ ಬೇರೆ ಸಮೂಹಗಳಿಂದ ಬರುವ ಮಗುವನ್ನು ಒಂದು ದಿನವೂ ತಪ್ಪದೇ ಶಾಲೆಗೆ ಬರುವಂತೆ ಮಾಡಲು ನಮ್ಮಲ್ಲಿ ಅಗತ್ಯ ತಯಾರಿಯಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಸಹ ತರಗತಿ ಕೋಣೆಯನ್ನು ಬಣ್ಣಬಣ್ಣದ ಆಕರ್ಷಕ ಚಿತ್ರಗಳಿಂದ, ಅಕ್ಷರಗಳಿಂದ ಆನಂದಕ ಲೋಕಕ್ಕೆ ಒಳಬಂದ ಅನುಭವವನ್ನು ಮಗುವಿಗೆ ಉಂಟುಮಾಡಲು ತರಗತಿಯನ್ನು ಸಿದ್ದಗೊಳಿಸಬೇಕಿದೆ.

ಈ ಭಾಗದ ಪ್ರತಿ ಹಳ್ಳಿಗಳಲ್ಲೂ ನಡೆಯುವ ಜಾತ್ರೆಗಳು ನಮಗೆ ಪ್ರತಿವರ್ಷವೂ ಸವಾಲು. ಮಕ್ಕಳು ಬರುವುದಿಲ್ಲವೆಂದರೂ ಸಹ ಶಾಲೆ ಬಿಡಿಸಿ ಜಾತ್ರೆಗೆ ಕರೆದೊಯ್ಯುವ ಪಾಲಕರಿಗೆ ಈ ವರ್ಷವಾದರೂ ಸರಿಯಾದ ತಿಳುವಳಿಕೆ ಕೊಡುವ ಜವಾಬ್ದಾರಿ ನಮ್ಮೆಲ್ಲ ಶಿಕ್ಷಕ ಬಳಗದ ಮೇಲಿದೆ.

ಮುದ್ದು ಮಕ್ಕಳೇ, ನಾವು ಏರಲಾಗದ ಎತ್ತರವನ್ನು ನೀವು ಏರುವಂತೆ ಮಾಡಲು, ನಮ್ಮಿಂದ ಸಾಧಿಸಲು ಸಾಧ್ಯವಾಗದ್ದನ್ನು ನೀವು ಸಾಧಿಸುವಂತೆ ಮಾಡಲು ಮತ್ತದೇ ಹುಮ್ಮಸ್ಸಿನೊಂದಿಗೆ ನಿಮ್ಮೊಂದಿಗೆ ಬೆರೆಯಲು ಕಲಿಯಲು, ಕಲಿಸಲು ಎಲ್ಲ ಅಗತ್ಯ ತಯಾರಿಯಲ್ಲಿದ್ದೇವೆ. ಇಲ್ಲೊಂದು ನಿಮ್ಮ ಮನೆಯ ಆತ್ಮೀಯತೆಯನ್ನು ಉಳಿಸಿಕೊಂಡಿರುವ ಶಾಲೆ, ನಿಮಗೆ ಒಂದು ಉತ್ತಮ ಬದುಕನ್ನು ಕಟ್ಟಿಕೊಡಬಲ್ಲ ಗುರುಸಮೂಹ, ನಿಮ್ಮ ಎಲ್ಲ ಆಟತುಂಟಾಟಗಳಿಗೆ ಸಿದ್ದವಾಗಿರುವ ಅಂಗಳ ನಿಮಗಾಗಿ ಕಾದಿದೆ. ಎಂದಿನ ಪ್ರೀತಿ ಆತ್ಮೀಯತೆಯಿಂದ ಸ್ವಾಗತ ಕೋರುತ್ತೇನೆ. ಭವಿಷ್ಯದ ಡಾಕ್ಟರ್, ಎಂಜಿನಿಯರ್, ಪೈಲಟ್‌ಗಳಿಗೆ ಮಾತ್ರವಲ್ಲ ಬುದ್ದ, ಅಂಬೇಡ್ಕರ್, ಗಾಂಧಿ, ಭಗತ್ ಸಿಂಗ್‌ರಿಗೆ.

ವೀರಣ್ಣ ಮಡಿವಾಳರ

ಕಣ್ಣ ಹನಿಗಳ ಕಣಜ ತೋರದಿರಲಾಗದೆ....

ಆ ದಿನ ಮತ್ತು ಆ ಮಾತುಗಳನ್ನು ಮರೆಯಲಾಗುತ್ತಿಲ್ಲ ಅದೊಂದು ಅರ್ಥಪೂರ್ಣ ಕಾರ್ಯಕ್ರಮ. ಅದೀಗ ತಾನೆ ಒಂದು ಅವಘಡದಿಂದ ಪಾರಾಗಿ ಬಂದಿದ್ದ ಹಿರಿಯ ಕವಯತ್ರಿ ಸವಿತ ನಾಗಭೂಷಣ ರವರು ಮಾತನಾಡುತ್ತ " ಈ ಕಾಲದ ಸಂದಿಗ್ಧತೆಗಳು ತುಂಬ ಆತಂಕಕಾರಿಯಾಗಿವೆ. ಬದುಕು ದುಸ್ಥರವಾಗುತ್ತಿದೆ. ರಾಜಕೀಯ ಅರಾಜಕತೆ, ಸಾಮಾಜಿಕ ಬಿಕ್ಕಟ್ಟುಗಳು ಒಟ್ಟಿಗೇ ಸೇರಿಕೊಂಡು ಶೋಷಿತರ ಬಡವರ ಸ್ಥಿತಿ ಹೇಳತೀರದಾಗಿದೆ " ಎಂಬ ಅರ್ಥದಲ್ಲಿ ತಮ್ಮ ಮನದಾಳದ ವಿಷಾದವನ್ನು ವೇದಿಕೆಯಲ್ಲಿ ನಿವೇದಿಸಿಕೊಳ್ಳುತ್ತಿದ್ದರು. ಇಡೀ ಕಾರ್ಯಕ್ರಮವೇ ಆರ್ದ್ರತೆಯಿಂದ ತುಂಬಿಹೋಯಿತು. ಎಲ್ಲರದೂ ಒಂದೇ ಧ್ಯಾನ ಮನುಷ್ಯನ ಬವಣೆಗಳಿಗೆ ಪರಿಹಾರದ ದಾರಿ ಯಾವುದು?..... ಇದೇ ಸಮಯಕ್ಕೆ ಕಾರ್ಯಕ್ರಮದ ಏಕಾಧಿಪತ್ಯವಹಿಸಿದ್ದ ಕನ್ನಡದ ಮಹತ್ವದ ಲೇಖಕರೊಬ್ಬರು ಸವಿತ ನಾಗಭೂಷಣರ ಮಾತಿಗೆ ಪ್ರತಿಯಾಗಿ " ಈ ಕಾಲ ತುಂಬ ದುರಂತದ ಕಾಲ, ಅವಘಡದ ಕಾಲ, ಸಹಿಸಲಸಾಧ್ಯವಾದ ಕಾಲ ಎಲ್ಲವೂ ಸರಿ, ಆದರೆ ನಾವೆಲ್ಲ ಬರಹಗಾರರಾದವರು ಸಂತೋಷಪಡಬೇಕು, ಸಂಭ್ರಮಪಡಬೇಕು ಯಾಕಂದ್ರೆ ನಮ್ಮ ಬರವಣಿಗೆಗೆ ಸಾಕಷ್ಟು ಸರಕು ಸಿಗ್ತಾ ಇದೆ "


ಇಂಥ ಮಾತುಗಳನ್ನಾಡಿದ ಆ ವ್ಯಕ್ತಿಯ ಬರಹ ಅದೆಷ್ಟು ವ್ಯವಹಾರಿಕವಾದದ್ದು. ಈ ಕ್ಷಣವೂ ಸಹ ಐಡೆಂಟಿಟಿಯ ಭ್ರಮೆಗೆ ಬಿದ್ದ ಇಂಥವರು ಕನಿಷ್ಟ ಮನುಷ್ಯತ್ವವನ್ನೂ ಕೂಡ ಬಿಟ್ಟುಬಿಡುವ ಅಮಾನುಷತೆಗೆ ಇಳಿವರಲ್ಲ ಎಂದು ಹತಾಶೆಯಾಗುತ್ತದೆ.

ಹಾದಿ ಬೀದಿಯಲ್ಲಿ ಹಸುಗೂಸುಗಳನ್ನು ಹೊತ್ತು, ದಣಿದ ಕೈಗಳಿಂದಲೇ ತುತ್ತು ಅನ್ನಕ್ಕೆ ಅಂಗಲಾಚುವ, ಉಳ್ಳವರು ನಡೆದಾಡುವ ಕಾಲುಗಳಡಿಯಲ್ಲಿಯೇ ಖಾಯಿಲೆ ಬಿದ್ದಿರುವ, ಸಾವಿರಗಟ್ಟಲೆ ಜೀವಗಳು ಎಲೆ ಉದುರಿದಂತೆ ಉದುರಿಹೋಗುತ್ತಿರುವುದನ್ನು ಅವುಡುಗಚ್ಚಿ ಉಸಿರು ಬಿಗಿ ಹಿಡಿದು ನೋಡುತ್ತಿರುವಾಗ ಈ ಮೇಲಿನ ಎರಡು ಮಾತುಗಳಲ್ಲಿನ ಎರಡು ವಿರುದ್ಧ ಅಂಚುಗಳು ಒಟ್ಟಿಗೇ ಜೀವ ಅಲುಗಾಡಿಸುತ್ತಿವೆ. ವರ್ತಮಾನ ಕರ್ನಾಟಕದ ಕೆಲವು ಚಿಂತನಾ ಧಾರೆಗಳನ್ನು ಗಮನಿಸಿದರೆ ವಿಚಿತ್ರ ತಳಮಳ ಉಂಟಾಗುತ್ತದೆ. ಭೋಗವೇ ಅತ್ಯಂತ ಪ್ರಾಶಸ್ತ್ಯದ ವಸ್ತುವಾಗಿ, ಈ ಭೋಗದ ಹಂಬಲವನ್ನು ಸಾಧಿಸಿಕೊಳ್ಳುವುದಕ್ಕಾಗಿ ಸಿಕ್ಕ ದಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮನುಷ್ಯ ಪರಂಪರೆಗೆ ತನ್ನದೇ ಆದ ಮಹತ್ವಪೂರ್ಣ ಇತಿಹಾಸವಿದೆ. ಈ ಇತಿಹಾಸದ ಮೊದಲ ಪುಟದಿಂದ ಗಮನಿಸುತ್ತ ಬಂದರೆ ಕಾಲವು ಹಿಂದೆ ಸರಿದಂತೆಲ್ಲಾ ಸ್ವಾರ್ಥದ ಹೆಚ್ಚಳವಾಗಿರುವುದು ಕಂಡುಬರುತ್ತದೆ. ಈ ಸ್ವಾರ್ಥದ ಜೊತೆಜೊತೆಗೆ ಅಮಾನವೀಯ ಮುಖವಾಡಗಳು ತಂದೊಡ್ಡಿರುವ ಅವಘಡಗಳು ಅಷ್ಟೇ ಪರಿಣಾಮಕಾರಿಯಾದುವು, ವಿನಾಶಕಾರಿಯಾದುವು ಆಗಿವೆ. ಆದರೆ, ಇದೆಲ್ಲದರ ಮಧ್ಯೆ ಜೀವಗಳನ್ನು ಸಲಹುವ, ಜೀವಪರತೆಯನ್ನು ಉಳಿಸಿಕೊಳ್ಳುವ, ಬೆಳೆಸಿಕೊಳ್ಳುವ, ಹಂಚಿಕೊಳ್ಳುವುದಕ್ಕಾಗಿ ಬದುಕನ್ನೇ ಅರ್ಪಿಸಿಕೊಂಡ ಚೇತನಗಳು ವಿನಾಶಕಾರಿ ಶಕ್ತಿಗಳೊಂದಿಗೆ ನಡೆಸಿದ ಪ್ರತಿರೋಧವೂ ಸಾಮಾನ್ಯವಾದುದ್ದಲ್ಲ. ವಚನ ಬಂಡಾಯ ಈ ಆಲೋಚನೆಗೆ ಇತಿಹಾಸದಲ್ಲಿ ಗಟ್ಟಿಯಾಗಿ ನೆಲೆಯೂರಿದ ಬಹುದೊಡ್ಡ ಪ್ರತಿರೋಧದ ದನಿ. ಇಂದಿನ ಬದುಕಿನ ನಡೆಗಳನ್ನು ಗಮನಿಸಿದಾಗ ಬಹುಶಃ ವಚನ ಬಂಡಾಯ ಕಾಲದ ಅಪಾಯಗಳಿಗಿಂತಲೂ ಆಘಾತಕಾರಿಯಾದ ಸನ್ನಿವೇಶಗಳು ನಮ್ಮೆದುರು ಸೆಡ್ಡು ಹೊಡೆದು ನಿಂತಿವೆ. ನಮ್ಮ ಪ್ರಶ್ನೆ ಇರುವುದು ಈ ಕಾಲದ ಯಾವುದೇ ಸಂಕಷ್ಟಗಳಿಗೆ. ಈ ಬದುಕನ್ನು ಮಾನವೀಯಗೊಳಿಸಬಹುದಾದ ಕನಿಷ್ಠ ಸಹಿಸಬಹುದಾದ ನೆಲೆಯಲ್ಲಿಯಾದರೂ ಕೊಂಡೊಯ್ಯಬಹುದಾದ ಜವಾಬ್ದಾರಿ ಹೊತ್ತುಕೊಂಡಿರುವ ನಿಷ್ಕ್ರೀಯ ಪ್ರಭುತ್ವಕ್ಕೆ ಅಲ್ಲ. ಬದಲಾಗಿ ಮನುಷ್ಯ ತನ್ನ ಬದುಕನ್ನು ಕಟ್ಟಿಕೊಳ್ಳುವುದ ಕಲಿತ ಕ್ಷಣದಿಂದ ಆ ಬದುಕಿಗೆ ಎಲ್ಲ ಭಾಗ್ಯಗಳನ್ನು ತಂದುಕೊಡುವಲ್ಲಿ ಗಣನೀಯ ಪಾತ್ರ ನಿರ್ವಹಿಸಿದ, ಎಲ್ಲ ಬೇಗುದಿಗಳನ್ನು ಸಂತೈಸುತ್ತಲೇ ಆ ಸಂಕಷ್ಕಕ್ಕಿರುವ ಕಾರಣಗಳನ್ನು ವಿಶ್ಲೇಷಿಸಿ ಸಾರ್ಥಕ ಬದುಕನ್ನು ನಿರ್ಮಿಸಿಕೊಟ್ಟ ಬರವಣಿಗೆಯ ಈ ಕ್ಷಣದ ಅರ್ಥವಂತಿಕೆಯ ಕುರಿತು ನಮ್ಮ ಪ್ರಶ್ನೆ ಇದೆ.

ಇಂದಿನ ಬರವಣಿಗೆ, ಸೃಜನಶೀಲತೆ, ಅಭಿವ್ಯಕ್ತಿ ಯಾವುದಕ್ಕೆ ವಿನಿಯೋಗವಾಗುತ್ತಿದೆ ಎಂಬುದೇ ನಾವಿಂದು ಚಿಂತಿಸಬೇಕಾಗಿರುವ ವಿಚಾರ. ಮಿಲಿಯನ್‌ಗಟ್ಟಲೇ ಜನರನ್ನು ಗಿಲಿಟಿನ್ ಯಂತ್ರದ ಬಾಯಿಗೆ ಕೊಟ್ಟ ’ನೀಷೆ’ಯ ವಿಚಾರಧಾರೆಯನ್ನು ವರ್ತಮಾನದ ಪ್ರಭುತ್ವದ ಅಮಾನುಷ ನಡೆಯನ್ನು ಬಲಪಡಿಸುವುದಕ್ಕಾಗಿಯೇ ನವೀಕರಣೆಗೊಳಿಸುವ, ಪ್ರಕಟಿಸುವ ಕ್ರಿಯೆ ನಡೆಯುತ್ತಿದೆ ಎನಿಸುತ್ತದೆ.’ಮನುಷ್ಯನ ಬಿಡುಗಡೆಗೆ ಏಕಮಾತ್ರ ದಾರಿ ಅದು ಆತ್ಮಹತ್ಯೆ’ ಎಂದು ಪ್ರತಿಪಾದಿಸಿದವನ ಚಿಂತನೆಯನ್ನು ಮತ್ತು ರಕ್ತವನ್ನೂ ಬೆವರಿನಂತೆ ಹರಿಸಿ ಬೆಳೆ ಬೆಳೆದು ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಹೋದದ್ದಕ್ಕೆ ಹಗ್ಗ ಹಿಡಿದು ಜಾಲಿಮರದತ್ತ ಹೊರಟವನ ಚಿತ್ರವನ್ನು ಒಟ್ಟಿಗೆ ಕಣ್ಣೆದುರು ತಂದುಕೊಂಡರೆ ಈ ಕಾಲದ ಬುದ್ದಿವಂತಿಕೆಯ ವಾರಸುದಾರರು ಮುಖ್ಯವಾಗಿ ವರ್ತಮಾನದ ಬರಹ ಕೊಡುತ್ತಿರುವ ಕೊಡುಗೆ ಮನದಟ್ಟಾಗುತ್ತದೆ.

ಇದು ಕೇವಲ ಬರವಣಿಗೆಯ ಕುರಿತಾದ ಮಾತಲ್ಲ. ಬದಲಾಗಿ ಸಾರ್ವಜನಿಕವಾಗಿ ಒಳಗೊಳ್ಳಬಹುದಾದ ಎಲ್ಲ ಕ್ರಿಯೆಗಳನ್ನು ಸಹ ನಾವು ಉದಾರತೆಯನ್ನು ತಗೆದು ನಿರ್ದಿಷ್ಠ ದೃಷ್ಟಿಕೋನದಿಂದ ನೋಡಬೇಕಾದ ಜರೂರತ್ತಿದೆ. ಬಹಳಷ್ಟು ವೇದಿಕೆಗಳು, ಭಾಷಣಗಳು, ಮಾಧ್ಯಮಗಳಲ್ಲಿ ಕಾಣಬಹುದಾದ ಸಾಮಾನ್ಯ ಅಂಶವೆಂದರೆ ಸಾಂದರ್ಭಿಕತೆ. ಹೀಗೆ ಇದ್ದವರು ಇನ್ನೊಂದು ಕಡೆ ಹಾಗೆಯೇ ಉಳಿಯದಿರುವ, ಒಂದು ಕಡೆ ಮಾತನಾಡಿದ್ದಕ್ಕೆ ಮತ್ತೊಂದು ಕಡೆ ಬದ್ದವಾಗಿರದ, ಒಂದು ಕಡೆ ಬರೆದದ್ದಕ್ಕೆ ಮತ್ತೊಂದು ಕಡೆ ತದ್ವಿರುದ್ದವಾಗಿರುವುದು ಇವುಗಳಿಗೆ ಮೂಲ ಕಾರಣ ಸಾಂದರ್ಭಿಕತೆ. ಈ ಸಾಂದರ್ಭಿಕ ಅವಕಾಶವಾದವೇ ಇಂದು ದಮನಿತ ಬದುಕಿನ ಕನಿಷ್ಠ ಸಹ್ಯಗೊಳಿಸಬಹುದಾದ ನೈತಿಕ ಜವಾಬ್ದಾರಿಯನ್ನು ಅರ್ಥ ಕಳೆದುಕೊಳ್ಳುವಂತೆ ಮಾಡಿದೆ.

ಅಭಿವ್ಯಕ್ತಿ ಕೇವಲ ಐಡೆಂಟಿಟಿಯಲ್ಲ. ಹಾಗೆ ಐಡೆಂಟಿಟಿ ಎಂದುಕೊಂಡವರ ಭೃಮೆಗೆ ಇತಿಹಾಸದಲ್ಲಿ ಇರುವುದಕ್ಕಿಂತ ಪಾಠ ಬೇರೊಂದಿಲ್ಲ. ಜೀವಗಳು ಬದುಕುವ ಹಕ್ಕು ಇಂದು ’ಅರ್ಥ’ದ ಕೈಯಲ್ಲಿದೆ ಎನ್ನುವುದೇ ಈ ಕಾಲದ ಬಹುದೊಡ್ಡ ದುರಂತ. ಹಣವೆನ್ನುವುದು ಏಕತ್ರವಾಗುತ್ತಾ, ಬಹುಕೋಟಿ ಜನರು ಬದುಕಿ ಬಾಳುತ್ತಿರುವ ಈ ಪ್ರಕೃತಿಯಲ್ಲಿ, ಆ ಎಲ್ಲ ಸಂಪತ್ತನ್ನು ಕೇಂದ್ರಿಕರಿಸುತ್ತ ಇಡೀ ಸಮಷ್ಟಿಯನ್ನೇ ಕೆಲವರು ಮಾತ್ರ ನಿಯಂತ್ರಿಸಬಹುದಾದ ಸ್ಥಿತಿಗೆ ಸರಿಯುತ್ತಿರುವ ವಾಸ್ತವವನ್ನು ನಾವಿಂದು ಗಂಭೀರವಾಗಿ ಅವಲೋಕಿಸಬೇಕಿದೆ. ಸಾರ್ವಜನಿಕವಾದ ಅಭಿವ್ಯಕ್ತಿಯೇ ಇರಲಿ ಅಥವಾ ಕ್ರಿಯೆಯೇ ಇರಲಿ ಇಂದು ಜೀವಪರ ಮಾತ್ರವೇ ಇದೆ ಎಂದು ಹೇಳಲು ಸಾಧ್ಯವಿಲ್ಲದಂತಹ ಸ್ಥಿತಿಗೆ ನಾವಿಂದು ತಲುಪಿದ್ದೇವೆ. ಇಲ್ಲಿ ಅವಕಾಶ ಪ್ರದಾನವಾದ, ಬಹು ಜನಪ್ರಿಯವಾದ ಯಾವುದನ್ನೇ ಆಗಲಿ, ಅದನ್ನು ಒದಗಿಸುವ, ರಂಜನೀಯಗೊಳಿಸುವ, ತನ್ಮೂಲಕ ತಮ್ಮ ಮನೋವಾಂಛೆಗಳನ್ನು ತಣಿಸಿಕೊಳ್ಳುವಿಕೆ ನಮ್ಮ ಮುಂದೆ ಎಗ್ಗಿಲ್ಲದೇ ನಡೆಯುತ್ತಿದೆ. ಈಗಾಗಲೇ ಚಲಾವಣೆಗೊಂಡು ತುಕ್ಕು ಹಿಡಿದು ಹೋಗಿರುವ ಲೈಂಗಿಕ ಕೇಂದ್ರಿತ ಅಬಿವ್ಯಕ್ತಿಗೆ ನವನವೀನ ಬಣ್ಣಗಳನ್ನು ಹಚ್ಚುತ್ತಾ, ತುತ್ತು ಅನ್ನದ ಅಗತ್ಯಕ್ಕಿಂತಲೂ ದೈಹಿಕ ವಾಂಛೆಗಳು ತಂದುಕೊಡುವ ಹುಸಿ ಆಶ್ಚರ್ಯಗಳತ್ತ ಸೆಳೆಯುವ ಹುನ್ನಾರಗಳು ಕಾಲದ ತಲ್ಲಣಗಳಾಚೆ ಕರೆದೊಯ್ಯುವ ಕ್ರಿಯೆಗಳೆಂದೇ ಹೇಳಬೇಕಿದೆ. ಬದುಕಿನ ಉಳಿವಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಅನ್ನದ ಪ್ರಾಧಾನ್ಯತೆ ಹೆಚ್ಚಬೇಕಲ್ಲದೇ ಐಭೋಗದ ವಾರಸುದಾರಿಕೆಯಲ್ಲ.

ಬಹುಜನರ ಭಾವನೆಗಳನ್ನು ರೂಪಿಸುವ ಬಹುದೊಡ್ಡ ಜವಾಬ್ದಾರಿ ಹೊತ್ತಿರುವ ಸಮಾಜದ ವಿವಿಧ ಘಟಕಗಳು ಇಂದು ಅನ್ನ ನೀಡುತ್ತಿರುವವರನ್ನು, ಅವರು ಬೆಳೆಯುವ ಕ್ರಿಯೆಯ ಸವಾಲುಗಳನ್ನು, ಆ ಹೋರಾಟದಲ್ಲಿನ ಅವರ ಸಂಪೂರ್ಣ ಅರ್ಪಣೆಯನ್ನು ನಗಣ್ಯವಾಗಿಸಿ ಬಿಟ್ಟಿರುವ ಅಧಿಕಾರ ಕೇಂದ್ರದಲ್ಲಿರುವವರ ಚಿಂತನೆಗಳು ಕೇವಲ ತಮ್ಮ ಅಧಿಕಾರ ಉಳಿಸಿಕೊಳ್ಳುವ ದಾರಿಗಳಾಗಿ ಉಳಿದುಬಿಟ್ಟಿವೆ. ಇಲ್ಲದೇ ಹೋದರೆ ನಾಡಿನ ಕೋಟ್ಯಾನುಕೋಟಿ ಜನರ ಬದುಕಿನ ಸಲಹುವಿಕೆಯ ಬಹುದೊಡ್ಡ ಜವಾಬ್ದಾರಿ ಹೊತ್ತಿರುವವರ ಬಾಯಿಂದ ಕೈ ಕಡಿಯುವ, ಮಾಟ ಮಂತ್ರ ಮಾಡಿಸುವ ಮಾತುಗಳು ಬರುತ್ತಿರಲಿಲ್ಲ.

ಆರೋಗ್ಯವಂತ ಮನುಷ್ಯ ಸಂವೇದನೆಯು ವರ್ತಮಾನವನ್ನು ವಾಸ್ತವದ ನೆಲೆಯಲ್ಲಿ ಎದುರುಗೊಳ್ಳುವುದು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಮ್ಮ ಮುಂದಿದೆ. ಬೆವರಿನ ಜೊತೆ ರಕ್ತವನ್ನೂ ಬಸಿದುಕೊಂಡು ಕಾಲದ ಜೊತೆ ಪೈಪೋಟಿಗಿಳಿದು ಲಾಭಕ್ಕಾಗಿ ಅಲ್ಲ, ತನ್ನನ್ನು ನಂಬಿದವರನ್ನು ಸಾಕುವುದಕ್ಕಾಗಿ ಅನ್ನ ಬೆಳೆವ ರೈತನಿಗೆ, ಪ್ರಭುತ್ವ ಎಂದೂ ಬೆಳೆದ ಬೆಳೆಗೆ, ಪಟ್ಟ ಶ್ರಮಕ್ಕೆ ತಕ್ಕ ಬೆಲೆಯನ್ನಂತೂ ನೀಡಲೇ ಇಲ್ಲ. ಆದರೆ, ಆ ಅನ್ನಕ್ಕೂ ಕೊಳ್ಳಿ ಇಡುತ್ತಾ ಜೀವ ಸಂಬಂಧಿಯಾದ ಭೂಮಿಯನ್ನು ಆಕ್ರಮಿಸುತ್ತಿರುವ ರೀತಿಯನ್ನು ನೋಡಿದರೆ ಭೋಗ ಪ್ರಧಾನವಾದ ವ್ಯವಸ್ಥೆಯ ವಾರಸುದಾರರು ಮಾತ್ರ ಇನ್ನು ಮುಂದೆ ಬದುಕಬಹುದೇನೋ ಎನಿಸುತ್ತದೆ. ಪರಂಪರೆಯ ಯಾವ ಕಾಲಘಟ್ಟವನ್ನೂ ಗಮನಿಸಿದರೂ ಇವೇ ಸತ್ಯಗಳು ಬೇರೆ ಬೇರೆ ರೂಪದಲ್ಲಿರುವುದು ಖಚಿತವಾಗುತ್ತದೆ. ಆದರೆ, ಒಂದು ಭಿನ್ನತೆ ಎಂದರೆ ಪ್ರಭುತ್ವ ಎಂದೂ ’ನಿಮ್ಮನ್ನು ನುಂಗುತ್ತೇವೆ’ ಎಂದು ಹೇಳುತ್ತಿರಲಿಲ್ಲ. ಮತ್ತು ಆ ನುಂಗುವಿಕೆ ನುಂಗಿಸಿಕೊಂಡವರಿಗೂ ಗೊತ್ತಾಗುತ್ತಿರಲಿಲ್ಲ. ಈಗ ಕಾಲದ ಬದಲಾವಣೆ ಮತ್ತು ಆಧುನಿಕತೆಯ ನಡೆ ಎಂದರೆ ’ನಿಮ್ಮ ತಾಯಿ ನೆಲ ನನ್ನ ವಶಕ್ಕೆ ಬೇಕು’ ಎಂದು ಘಂಟಾಘೋಷವಾಗಿ ಫರ್ಮಾನು ಹೊರಡಿಸುತ್ತದೆ ಮತ್ತು ಒಪ್ಪುವಿಕೆ ಅಥವಾ ಪ್ರತಿರೋಧಿಸುವಿಕೆ ಯಾವುದನ್ನೂ ಲೆಕ್ಕಿಸದೇ ನುಂಗುತ್ತದೆ, ನೀರು ಕುಡಿಯುತ್ತದೆ.ನಾಗರಿಕ ಸಮಾಜ ಇದನ್ನೆಲ್ಲ ಕಣ್ಣು ತೆರೆದು ನೋಡಿ ಬಾಯಿ ಮುಚ್ಚಿಕೊಳ್ಳುತ್ತದೆ, ಯಾವ ಸೋಜಿಗವೂ ಇಲ್ಲದೆ.

ಇಂತಹ ಘಟಾಘಟಿತ ಕಾಲಘಟ್ಟದಲ್ಲಿ ಬುದ್ದಿವಂತಿಕೆಯನ್ನು, ಕೌಶಲವನ್ನು, ಚಾಣಾಕ್ಷತನವನ್ನು ಹೇಗೆ ಬೇಕಾದರೂ ಬಳಸಬಹುದು. ಆದರೆ, ಅದು ಸಾಂದರ್ಭಿಕವಾಗಿ ಹೇಗೆ ಬೇಕೋ ಹಾಗೆ ಬಳಕೆಯಾಗುತ್ತಿದೆ ಎಂಬುದೇ ವಿಷಾದನೀಯವಾದುದು. ’ವೇದಿಕೆ’ ಎಂಬುದೊಂದು ಸಮೂಹದ ಮನಸ್ಥಿತಿಯನ್ನು ರೂಪಿಸುವ ಮಹತ್ವದ ಅವಕಾಶ. ಆದರೆ ಈ ಅವಕಾಶ ಬಹುಜನರ ವಾಂಛೆಗಳಿಗೆ ಮಣೆ ಹಾಕುತ್ತಾ ಜನಪ್ರಿಯವಾಗುವಿಕೆಯನ್ನೇ ಮುಖ್ಯವಾಗಿಸಿಕೊಳ್ಳುತ್ತಿದೆ. ಹೀಗಾದಾಗ ಯಾವ ಜೀವಪರ ಚಟುವಟಿಕೆಗಳಿಗೆ ಅರ್ಥವೆಲ್ಲಿ ಬಂದೀತು.

ನಮ್ಮ ಈ ಕಾಲಘಟ್ಟ ಕಂಬನಿಯ ಕುಯಿಲಿಗೆ ನಿಂತಂತೆ ಭಾಸವಾಗುತ್ತಿದೆ. ಬದುಕು ಎನ್ನುವುದೊಂದು ದುಃಖದ ಬೆಳೆ ಬೆಳೆಯುವ ಹಸನಾದ ಹೊಲ. ಈ ನೆಲದಲ್ಲಿ ದುಡಿಯುವವರು ಹೆಚ್ಚು ಹೆಚ್ಚು ಕಷ್ಪಪಟ್ಟಷ್ಟು ಕಣ್ಣೀರಿನ ಬೆಳೆ ದುಪ್ಪಟ್ಟು ಬೆಳೆಯುತ್ತದೆ. ಈ ಬೆಳೆಯನ್ನು ಪ್ರಭುತ್ವ ಮಾರಾಟದ ಸರಕಾಗಿ ಹರಾಜಿಗಿಟ್ಟು ಬಹುಕೋಟಿ ದರದಲ್ಲಿ ಮಾರುತ್ತದೆ. ಇದಕ್ಕೆ ಸಂವಾದಿಯಾಗಿ ನಮ್ಮ ಮಧ್ಯೆ ಹಲವಾರು ಘಟನೆಗಳು ಸಾಕ್ಷಿಯಾಗಿವೆ. ರೈತನಿಗೆ ಭೂಮಿಯ ಜೊತೆಗಿನ ಸಂಬಂಧವೆಂದರೆ ಅದು ಜೀವ ಸಂಬಂಧ. ಈ ಅನೂಹ್ಯ ಸಂಬಂಧವನ್ನು ದುಡ್ಡಿನ ಅಲಗಿನಿಂದ ಕತ್ತರಿಸಲಾಗುತ್ತಿದೆ.

ಕೊನೆಯಲ್ಲಿ ಪ್ರತಿರೋಧದ ಎಲ್ಲ ನೆಲೆಗಳನ್ನು ಸಂಶೋಧಿಸಿ ದಮನ ಮಾಡುವ ಪ್ರಭುತ್ವ ಕೇವಲ ದೈತ್ಯ ಮಾತ್ರವಾಗಿಲ್ಲ ಬುದ್ದಿವಂತಿಕೆಯದೂ ಆಗಿದೆ. ಮತ್ತು ಆ ಬುದ್ದಿಮತ್ತೆಗೆ ಬರಹಗಾರರೆಂದುಕೊಂಡಿರುವವರ ಕಾಣಿಕೆಯೂ ಇರುವುದೇ ನಮ್ಮ ಮುಂದಿರುವ ನಿಜವಾದ ಗಂಭೀರ ಸವಾಲು. ಮನುಷ್ಯ ಕುಲವನ್ನೇ ವಿನಾಶದತ್ತ ತಳ್ಳಿದ ’ನೀಷೆ’ಯಂಥವರ ಆಲೋಚನೆಗಳು ಮತ್ತೆಮತ್ತೆ ಮರು ರೂಪಗೊಂಡು ಸೌಮ್ಯ ರೂಪದಲ್ಲಿ ದಾಂಗುಡಿ ಇಡುತ್ತಿರುವುದು ಈ ಯೋಚನೆಗೆ ಗಟ್ಟಿ ಸಾಕ್ಷಿ.

-ವೀರಣ್ಣ ಮಡಿವಾಳರ



ಅರ್ಪಣೆ ಮತ್ತು ಅಭಿಮಾನದ ಪ್ರಶ್ನೆ

ಈ ಕಾಲ ಮಾಧ್ಯಮಗಳ ಕಾಲ, ಈ ಕಾಲದ ಚಿಂತನೆ ಮಾಧ್ಯಮವೇ ರೂಪಿಸುತ್ತಿರುವ ಚಿಂತನೆ. ಬಹುಕೋಟಿ ಜನರಿರುವ ನಮ್ಮ ನಾಡಿನ ಆತ್ಮದ ಒಟ್ಟು ಚಿತ್ರಣವನ್ನು ಬೆರಳೆಣಿಕೆಯ ಕೆಲವು ಮಿತ್ರರು ತಮಗೆ ಬೇಕಾದಂತೆ ಕಟ್ಟುತ್ತಿದ್ದಾರೆ. ಈ ರೀತಿಯ ಚಿತ್ರವೇ ಪರಿಪೂರ್ಣ ಎಂಬಂತೆ ಸಮಷ್ಠಿ ಪ್ರಭಾವ ಮೂಡಿಸುತ್ತಿದ್ದಾರೆ. ಇದು ವರ್ತಮಾನದ ದುರಂತ ಮಾತ್ರವಲ್ಲ ಭೋಗದ ವಾರಸುದಾರರ ವಿಜೃಂಭಣೆಯ ವಿಷಮ ಸ್ಥಿತಿ. ತಮ್ಮದೇ ನಿರ್ಧಾರಿತ ಮೌಲ್ಯಗಳನ್ನಾಧರಿಸಿ ಶ್ರೇಷ್ಠ ಮತ್ತು ಕನಿಷ್ಟವೆಂಬ ವ್ಯಸನವನ್ನು ಹುಟ್ಟು ಹಾಕುತ್ತಾ ಕಾಲದ ವಾಸ್ತವ ತಲ್ಲಣಗಳಾಚೆ ಆರೋಗ್ಯಕರ ದೃಷ್ಟಿಕೊನವನ್ನು ಹಾದಿತಪ್ಪಿಸುವ ಹುನ್ನಾರ ಈ ಮಿತ್ರರ ಅಭಿವ್ಯಕ್ತಿಯ ಹಿಂದಿದೆ ಎಂಬುದು ತಿಳಿಯಲಾರದ್ದೇನಲ್ಲ. ಎಲ್ಲವನ್ನೂ ರಂಜನೀಯಗೊಳಿಸುತ್ತ ಪರಂಪರೆ ಪಿಡುಗುಗಳಿಗೆ ಹೊಸದೊಂದು ರೂಪಕೊಟ್ಟು ಬಹುಜನರಿಗೆ ಇಷ್ಟವಾಗುವ ಧಾಟಿಯಲ್ಲಿ ಹೇಳುವ, ಹಿಂದೆಂದಿಗೂ ಇಲ್ಲದಂತಿರುವ ಕೌಶಲಗಳನ್ನು ತಾವೇ ಸೃಜಿಸಿದ ಸೃಷ್ಟಿಕರ್ತರೆಂದು ಬೀಗುತ್ತಾ, ಆ ಕೌಶಲಗಳನ್ನು ತಮ್ಮ ತಮ್ಮದೇ ಪಟಾಲಂಗೆ ಧಾರೆ ಎರೆಯುತ್ತಾ ಒಂದಿಲ್ಲವಾದರೆ ಇನ್ನೊಂದು ಅದು ಇಲ್ಲವಾದರೆ ತಮ್ಮದೇ ಒಂದು ಸಂಸ್ಥಾಪನೆ ಮಾಡಿಕೊಳ್ಳುತ್ತಾ ನಡೆಯುತ್ತಿರುವ ರೀತಿಯನ್ನು ಮುಗುಮ್ಮಾಗಿ ಗಮನಿಸುತ್ತಿರುವ ಶ್ರೀಸಾಮಾನ್ಯನಿಗೆ ಬಾಯಿ ಇಲ್ಲವೆನ್ನಲಾಗುತ್ತಿದೆ. ಈ ಶ್ರೀಸಾಮಾನ್ಯನ ಯಾವುದೇ ಪ್ರತಿರೋಧಕ್ಕೂ ಮೌಲ್ಯವಿಲ್ಲ ಅಥವಾ ಮೌಲ್ಯವನ್ನು ಸಾಬೀತು ಪಡಿಸುವ ಅವಕಾಶವಿಲ್ಲ.


ತಾನು ಎನ್ನುವುದನ್ನು ಉತ್ಪ್ರೇಕ್ಷಯ ಆತ್ಯಂತಿಕ ಸ್ಥಿತಿಯಲ್ಲಿ ಕಲ್ಪಿಸಿಕೊಂಡು ಅದನ್ನು ಸಾಧಿಸುವ ಹೀನತೆಗೆ ಯಾವ ದಾರಿಯಾದರೂ ಸರಿ ಎನ್ನುವ ಮನಸ್ಥಿತಿಯೇ ಏನು ಬರೆದರೂ ನಡೆದೀತು ಎನ್ನುವ ಅಹಮ್ಮಿಕೆಯನ್ನು ಕೆಲವರಲ್ಲಿ ಹುಟ್ಟಿಸಿದೆ. ಈ ಕೆಲವರು ಕರ್ನಾಟಕದ ಪ್ರಸಕ್ತ ವರ್ತಮಾನಕ್ಕೆ ಮಾಡಿರುವ ಆಘಾತ ತುಂಬಾ ಪರಿಣಾಮಕಾರಿಯಾದುದೆ. ಯಾವುದೇ ಇದ್ದರೂ ಅದನ್ನು ತಮ್ಮ ಸ್ವ ಕೇಂದ್ರಿತ ನೆಲೆಯಲ್ಲಿ ವಿಶ್ಲೇಶಿಸಿ ಅಂತಿಮ ತಿರ್ಪು ಎಂಬಂತೆ ವರ್ತಿಸುವ ಇಂಥವರಿಗೆ ನಾಡಿನ ಸಮಸ್ಥ ಜನರ ಬದುಕನ್ನು ಕಟ್ಟಿದವರು ನಾರಾಯಣಮೂರ್ತಿ, ದೇಶವನ್ನು ಸಮೃದ್ಧಗೊಳಿಸಿದವರು ಟಾಟಾ, ಬಿರ್ಲಾ, ಮಿತ್ತಲ್, ಅಂಬಾನಿಯಾದರೆ ಆಶ್ಚರ್ಯವಿಲ್ಲ. ಶ್ರೇಷ್ಠತೆಯ ವಾಸಿಯಾಗದ ವ್ಯಸನವನ್ನು ತಮ್ಮಲ್ಲಿ ಹುಟ್ಟಿಸಿಕೊಂಡು, ಈ ಕಾಯಿಲೆಯನ್ನು ಅಮಾಯಕರಿಗೂ ಅಂಟಿಸಿ ವಿಕೃತ ಭೋಗದ ಸುಖ ಅನುಭವಿಸುತ್ತಿರುವ ಈ ಹೊತ್ತಿನ ಇಂಥ ಮನಸ್ಥಿತಿಗಳಿಗೆ ಮಾತ್ರ ಸಾಹಿತ್ಯ ಒಂದು ವರ್ಗ, ಸಾಹಿತಿ ಒಂದು ಹುದ್ದೆ. ಸಮಷ್ಠಿ ಬದುಕಿನ ತಿರುಳಾದ ಹಳ್ಳಿಯ ಹಳ್ಳಿಗನಿಗೂ ಮಾತಿನ ಒಂದು ಧಾಟಿ ಗೊತ್ತು, ತನ್ನ ಆಂತರ್ಯವನ್ನು ಮತ್ತೊಬ್ಬರ ಅಂತರಾಳಕ್ಕೆ ಮುಟ್ಟಿಸುವ ದಾರಿ ಗೊತ್ತು. ಅದು ಎಂದೂ ಉಡಾಫೆಯದಾಗಿರಲಾರದು. ತಾನೆ ಎನ್ನುವ ಅಹಮ್ಮಿಕೆಯಿಂದ ಕೂಡಿರಲಾರದು. ಸ್ವರತಿಯುಳ್ಳ ಮನಸ್ಸಿಗೆ ಮಾತ್ರ ಸಾಹಿತಿ ಎನ್ನುವುದು ಒಂದು ಅಧಿಕಾರವಾಗಿ ಸೀಮಾತೀತ ಕಲ್ಪನೆಯಾಗಿ ಕಾಣುತ್ತದೆ. ಹಾಗೆ ನಿರ್ಣಯಿಸಿದ ಕಾರಣದಿಂದಲೇ ಓಬೆರಾಯ ಎನ್ನುವ ಪದವಾಗಲಿ ನಾಲ್ಕು ಕವಿತೆ ಆರು ಕಥೆ ಎರಡು ಪ್ರಭಂಧ ಎನ್ನುವ ಅಂಕಿ ಅಂಶವಾಗಲಿ ಮಾನದಂಡವಾಗುತ್ತದೆ. ಈ ರೀತಿಯ ಅಭಿಪ್ರಾಯದ ಹಿಂದಿರುವುದು ಅದೆಂಥ ತಿರಸ್ಕಾರದ ಹಮ್ಮು ಎಂಬುದನ್ನು ಮರೆಮಾಚಲಾಗದು. ನಿಜವಾಗಿಯೂ ಸಾಹಿತ್ಯ ಎನ್ನುವುದು ಒಂದು ವರ್ಗವೆ ? ಸಾಹಿತಿ ಎನ್ನುವುದು ಒಂದು ಹುದ್ದೆಯೇ ? ಈ ರೀತಿಯ ಪರಿಕಲ್ಪನೆಯನ್ನು ವರ್ತಮಾನದ ಒಟ್ಟು ಬದುಕಿನಲ್ಲಿಟ್ಟು ನೋಡಲು ಸಾಧ್ಯವೆ ? ಕಾಲ ಸಂದರ್ಭದ ನಿರ್ಣಾಯಕ ಪಾತ್ರವನ್ನು ವಹಿಸಿದ ಮಹನೀಯರನ್ನ ಸಾಹಿತಿ ಎಂದು ಮಾತ್ರ ಪರಿಗಣಿಸಲು ಸಾಧ್ಯವೇ ? ಅವರೊಳಗಿನ ಶ್ರೀಸಾಮನ್ಯತೆಯನ್ನ ನೀರಾಕರಿಸಲಾದಿತೇ ? ಹಾಗಾದರೆ ಈ ಪರಿಕಲ್ಪನೆಯಲ್ಲಿಯೇ ಮಾತನಾಡುವವರ ಕುರಿತು ಅವರ ಚರ್ವಿತ ಚರ್ವಣಗಳ ಜಾಲಾಡಿಸಿ ನೋಡುವ ಶ್ರಮವೇ ಬೇಕಿಲ್ಲ ಎನಿಸುತ್ತದೆ. ಯಾವುದೇ ಮನುಷ್ಯನ ಅಭಿವ್ಯಕ್ತಿಗೆ ಆಯಾ ಕಾಲಘಟ್ಟದ ಮೌಲ್ಯ, ಆ ಮನುಷ್ಯನ ಇರುವಿನ ಆಚೆಗೂ ಅವನು ಕಟ್ಟಿಕೊಟ್ಟ ಅಭಿವ್ಯಕ್ತಿಗೆ ದಕ್ಕುವ ಸಾರ್ಥ್ಯಕ್ಯವನ್ನು ಮನಗಾನಲು ಬಾರದವರು ಮಾತ್ರ ಇಂಥದೊಂದು ಉಡಾಫೆಯನ್ನು ಹಂಚಿಕೊಳ್ಳುತ್ತಾರೆ. ಮೂಲತಃ ಯಾವುದೇ ಬರಹದ ಸೃಷ್ಟಿಯ ಮೂಲ ಮನುಷ್ಯ ಸಹಜತೆ. ಈ ಮನುಷ್ಯ ಸಹಜತೆಯ ಅರಿವಿಲ್ಲದವ ಕಾಲದ ಪ್ರವಾಹದಲ್ಲಿ ಉಳಿಯಬಲ್ಲಂಥಹುದನ್ನಾವುದೂ ಕೊಡಲಾರ, ತಾನೂ ಉಳಿಯಲಾರ.

ಕನ್ನಡ ಬದುಕು ಕೇವಲ ಉದ್ಯೋಗದ ಮೂಲವಲ್ಲ. ಇನ್ನೂ ಮುಂದುವರೆದು ಹೇಳುವುದಾದರೆ ಸಾಪ್ಟವೇರ್ ಉದ್ಯೋಗದ ಮೂಲವಲ್ಲ. ಸಾವಿರ ಜನರನ್ನು ತನ್ನ ನೂರಾರು ಎಕರೆ ಜಮೀನಿನಲ್ಲಿ ತಿಂಗಳಿಗೆ ಇಂತಿಷ್ಟು ಕೂಲಿ ಮಾತಾಡಿ ಜೀವನಪೂರ್ತಿ ದುಡಿಸಿಕೊಳ್ಳುವ, ಆ ದುಡಿಯುವವರ ದುಡಿಮೆಯಲ್ಲಿ ಎತ್ತರೆತ್ತರ ಏರುವ ಜಮೀನುದಾರ ತನ್ನ ಸಂಪತ್ತಿನ ಸಮೃದ್ಧಿಗೆ ಉದ್ಯೋಗ ಕೊಟ್ಟಿರುತ್ತಾನೆಯೇ ಹೊರತು ತನಗಾಗಿ ದುಡಿಯುವವರ ಬದುಕನ್ನು ಸಲಹುವುದಕ್ಕಾಗಿ ಅಲ್ಲ. ಪ್ರಪಂಚದಾದ್ಯಂತ ಹಂಚಿ ಹೋಗಿರುವ ಅದೆಷ್ಟು ಸಾಪ್ಟವೇರ ಜನರಿಗೆ, ಬೇರೆ ಬೇರೆ ಉದ್ಯೋಗದಲ್ಲಿರುವವರಿಗೆ ಎಷ್ಟು ದೇಶದ ಎಷ್ಟು ಉದ್ಯಮಿಗಳು ಉದ್ಯೋಗ ನೀಡಿದ್ದಾರೆ. ಹಾಗಾದರೆ ಅವರೆಲ್ಲರಿಗೂ ಕನ್ನಡಿಗರ ಬದುಕನ್ನು ಕಟ್ಟಿಕೊಟ್ಟವರೆಂಬ ಗುಣವಿಶೇಷಣ ಬಳಸಬಹುದಾದರೆ ನಮ್ಮ ಕನ್ನಡದ ಆಸ್ಮಿತೆಯ ದ್ಯೋತಕವಾದ ಪ್ರತಿಯೋಂದು ಚಟುವಟಿಕೆಗೂ ಕ್ರೀಯೆಗೂ ಅವರ ಅಮೃತ ಹಸ್ತವನ್ನೆ ಬಳಸೊಣವೇ ? ಕೇವಲ ಸಾಪ್ಟವೇರ ಮಾತ್ರವಲ್ಲ ಹೊಟ್ಟೆ ಹೊರೆಯುವಿಕೆಯೇ ಪ್ರಧಾನವಾಗಿರುವ ಸ್ವ ಕೇಂದ್ರಿತ ಸಂಪತ್ತನ್ನು ವೃದ್ಧಿಸುವುದೇ ಗುರಿಯಾಗಿರುವ ಅಲ್ಲದೇ ಈ ಕಾಲದಲ್ಲಿ ಡಾಮಿನಂಟಾಗಿ ಉಳಿಯಬಹುದಾದ ಅವಕಾಶವನ್ನು ಒದಗಿಸಿರುವ ಉದ್ಯೋಗಿಗಳ ಉದ್ಯೋಗದಾತರಿಗೆ ಕರ್ನಾಟಕದ ಅಲ್ಲೇ ಕುಂತಿರುವ ಎಲ್ಲರೂ ಎದ್ದು ಬಂದು ಆ ಮಹಾವ್ಯಕ್ತಿಗಳು ಬರಲಿಲ್ಲವಾದರೆ ಅವರಿಗೆ ಅಂಗಲಾಚಿ ಬೇಡಿಕೊಂಡು ಅವರಿಗೆ ಜೈಘೋಷ ಹಾಕುತ್ತಾ ಮೇರವಣಿಗೆ ಮೂಲಕ ಕರೆತರೋಣವೆ ?

ಅರ್ಪಣೆ ಮತ್ತು ಅಭಿಮಾನವನ್ನು ಕೆಲವು ಜನ ಪರಂಪರೆಯಿಂದ ವರ್ತಮಾನದಿಂದ ಅರ್ಥಮಾಡಿಕೊಳ್ಳಲೆ ಇಲ್ಲ. ಹಾಗೆನ್ನುವದಕ್ಕಿಂತ ಅವುಗಳ ಗೊಡವೆಯೇ ಬೇಡದವರಿಗೆ ಏನು ಹೇಳುವುದು. ಬದುಕನ್ನು ನಾಡು ನುಡಿಗಾಗಿ ಅರ್ಪಿಸಿಕೊಳ್ಳುವುದನ್ನು ಬಿಟ್ಟು ಕನ್ನಡದ ಮಾಹಾನ್ ಚೇತನಗಳೆಲ್ಲರೂ ಒಂದೊಂದು ಇನ್ಪೊಸಿಸ್ ಕಟ್ಟಿ ಲಕ್ಷಾಂತರ ಕೋಟಿ ಸಂಪಾದಿಸಿ ಸಾವಿರಾರು ಜನರನ್ನು ಉದ್ಯೋಗಿಗಳಾನ್ನಾಗಿ ಮಾಡಿಕೊಂಡು ನೂರಾರು ಕೋಟಿ ತೆರಿಗೆ ವಂಚಿಸಿ ಕನ್ನಡ ಭಾಷೆಯ ಅಸ್ತಿತ್ವಕ್ಕೋಂದು ಸಾಪ್ಟವೇರ ಅಭಿವೃದ್ಧಿ ಮಾಡದೇ ಹೋದರೂ ಪರವಾಗಿಲ್ಲ ಭೋಗ ಜಗತ್ತಿನ ವಾರಸುದಾರರಾಗಿ ಬೀಗ ಬೇಕಿತ್ತೇ ? ಓಬೆರಾಯನ ಕಾಲದ ಸಾಹಿತಿಗಳೆಂದರೆ ಯಾರು ? ಸಿದ್ದಲಿಂಗ ಪಟ್ಟಣಶೆಟ್ಟಿ, ಜಿಎಸ್.ಎಸ್., ಜಿ. ವೆಂಕಟಸುಬ್ಬಯ್ಯ, ಜಂಬಣ್ಣ ಅಮರಚಿಂತ, ಅಲ್ಲಮಪ್ರಭು ಬೆಟ್ಟದೂರ ಅಥವಾ ಚಂದ್ರಕಾಂತ ಕುಸನೂರರೇ ? ಅಥವಾ ಜೋಗಿಯವರೆ ಹೇಳಿಕೊಂಡಿರುವ ನಾ. ಮೊಗಸಾಲೆಯವರೆ ? ಹಾಗಾದರೇ ತಾವು ಯಾವ ಕಾಲದವರು ಮತ್ತು ತಮ್ಮ ಸಾಹಿತ್ಯ ಎಷ್ಟು ಲೇಟೆಸ್ಟ ಎನ್ನುವುದನ್ನು ಕೇಳಲು ನಾವು ಯಾರು ಅಲ್ಲವೇ ?

ಖಂಡಿತವಾಗಿಯೂ ಇಂದು ನಡೆಯುತ್ತಿರುವ ನಡೆಸುತ್ತಿರುವ ಎಲ್ಲ ಚರ್ಚೆಗಳೂ ಒಂದು ಆತ್ಮಾಭಿಮಾನದ ಕಾರ್ಯಕ್ರಮವನ್ನ ಭಾಷೆಕೇಂದ್ರಿತವೋ ಪ್ರತಿಷ್ಠೆಯ ಪ್ರಶ್ನೆಯಾಗಿಯೋ ಪರಿಗಣಿಸಿರುವ ಕಾರಣದಿಂದಾಗಿಯೇ ಹೀಗೆಲ್ಲವೂ ನಡೆಯುತ್ತಿದೆ. ಅರ್ಪಣೆಗೆ ಅರ್ಥವಿಲ್ಲ ಅಭಿಮಾನಕ್ಕೆ ಮರ್ಯಾದೆ ಇಲ್ಲ ಕನ್ನಡಿಗನ ಬದುಕನ್ನು ಕೇಂದ್ರವಾಗಿಟ್ಟುಕೊಂಡು ಆ ಬದುಕಿನ ಸಂಕಷ್ಟಗಳನ್ನು ಕೇಂದ್ರವಾಗಿಟ್ಟುಕೊಂಡು ಆ ಸಂಕಷ್ಟದ ರೂಕ್ಷತೆಯ ದೂರ ಮಾಡುವಿಕೆಯನ್ನಿಟ್ಟುಕೊಂಡು, ಕೊಡುಕೊಳ್ಳುವ, ಚರ್ಚಿಸುವ ಕ್ರಿಯೆಗಿಳಿಯುವ ಯಾವುದೂ ಸಹ ಇದನ್ನು ಆಯೋಜಿಸಿರುವ ವ್ಯವಸ್ಥೆಗೂ ಬೇಕಿಲ್ಲ, ಇದನ್ನು ಪ್ರತಿಷ್ಟೆಯ ಸಂಭ್ರಮಕೂಟವಾಗಿ ಭಾವಿಸಿ ಇದರ ಅರ್ಥವಂತಿಕೆಯನ್ನು ಪ್ರಶ್ನಿಸುವವರನ್ನಷ್ಟೇ ಅಲ್ಲದೆ ಇಡೀ ಅಭಿವ್ಯಕ್ತಿಯ ಪರಂಪರೆ ಮತ್ತು ವರ್ತಮಾನವನ್ನು ಅಲ್ಲಗಳೆಯುವ, ಉಡಾಫೆಯಿಂದ ನೋಡುವವರಿಂದ ಏನನ್ನು ನಿರೀಕ್ಷಿಸಲಾದೀತು ?

ವಿಶ್ವ ಕನ್ನಡ ಪ್ರತಿಷ್ಠೆಗೆ ಜೈ

ನಾರಾಯಣಮೂರ್ತಿ ಜೊತೆ ನಮ್ಮ ಕೈ

ಎನ್ನೋಣವೇ ? ಸಕ್ಕರೆ ನಾಡಿನ ಬೆಲ್ಲ ಬೆಳೆಯುವ ಮನುಷ್ಯ ಕೈಗೆ ಬಂದ ತುತ್ತು ಬಾಯಿಗೆ ಬರಲಾರದ್ದಕ್ಕೆ ಬಳಲುತ್ತಿದ್ದಾನೆ, ಅದೆಲ್ಲ ಯಾರಿಗೆ ಬೇಕು ಬಿಡಿ.



ವೀರಣ್ಣ ಮಡಿವಾಳರ





ಪೋಗದಿರಲೋ ವಸಂತ...

ಎಲೆ ಉದುರಿ ಬಿದ್ದ ಬೋಳು ಮರದ ಎದೆಯಲ್ಲೊಂದು ಹೊಸ ಚಿಗುರು. ಒಂದಿನಿತು ಬಿಡದೆ ಗಿಡವನಪ್ಪಿದ ಬಳ್ಳಿಯ ಮೈತುಂಬ ಹೂಮೊಗ್ಗು. ಬದುಕಿನ ದಣಿವನೆಲ್ಲ ತೋರುವ, ಇನ್ನೇನು ತನ್ನ ಕಾಲ ಮುಗಿಸಲಿರುವ ಹಳದಿ ಬಣ್ಣ, ನನ್ನನ್ನು ಯಾರೂ ತಡೆಯಲು ಸಾಧ್ಯವೇ ಇಲ್ಲ, ಇನ್ನು ಮುಂದೆ ನನ್ನದೆ ಎಲ್ಲ ಎಂಬಂತೆ ಹೊಮ್ಮುತ್ತಿರುವ ಹಸಿರು, ಒಂದೇ ಮರದಲ್ಲಿನ ಈ ಎರಡರ ಸೋಜಿಗ ತುಂಬ ಆಹ್ಲಾದಕರವಾದದ್ದು. ಬದುಕಿನ ಬವಣೆಗಳಲ್ಲಿ ಮುಳುಗೆದ್ದ ಮುಖದಲ್ಲಿ ಮಂದಹಾಸ ಮೂಡಿಸುವಂತೆ ಮತ್ತೆ ಬಂದಿದ್ದಾನೆ ವಸಂತ ಬಣ್ಣ ಬಣ್ಣದ ಮೋಡಗಳ ತುರುಬಿಗಿಟ್ಟುಕೊಂಡು, ಬೆಂದು ಬಸವಳಿದ ಮಾವು ಬೇವುಗಳಿಗೆ ಹಸಿರಿನುಸಿರಾಗಿ, ಕೋಗಿಲೆಯ ಕೊರಳೊಳಗಿನ ಹರುಷದ ಹೊನಲಾಗಿ, ಹಾಡುತ್ತಾ ಕುಣಿಯುತ್ತಾ, ಅತ್ತೂ ಅತ್ತೂ ದಣಿದ ಕಣ್ಣುಗಳಿಗೆ ಸಾಂತ್ವನವಾಗಿ ಬಂದಿದ್ದಾಳೆ ಕೋಟಿ ಹೂವಿನ, ಕೋಟಿ ಬಣ್ಣದ ಚಲುವಿನ ಚೈತ್ರ. ಎದೆಯ ಗೂಡೊಳಗಿನ ಎಲುಬಿನ ಹಂದರವ, ದನಕರುಗಳು ಹೆದರುವಂತೆ ತೋರಿಸುತ್ತಿರುವ ಬೆಟ್ಟಕ್ಕೆ ಈಗ ಎಳಸು ಹುಲ್ಲಿನ ಹೊದಿಕೆ. ಒಣಗಿದ ರವುದಿಯ ತಿಂದು ತಿಂದು ಬಡಕಲಾಗಿ ಹೋಗಿದ್ದ ಆಡು ಕುರಿಗಳ ಕಣ್ಣಲ್ಲಿ ಮಿಂಚೊಂದು ಮೂಡಿದೆ. ತತ್ರಾಣಿಯ ನೀರು ಖಾಲಿಯಾಗಿ ಕೊಳಲೂದಲು ತ್ರಾಣವಿಲ್ಲದೆ ಎಲೆ ಕಳಚಿದ ಗಿಡದ ಕೆಳಗೆ ವಸಂತಾಗಮನದ ಕಾತರದಲ್ಲಿದ್ದ ದನಗಾಹಿ ಹುಡುಗನ ಪ್ರಜ್ಞೆಯಲ್ಲೊಂದು ಭರವಸೆಯ ಸೆಳಕು. ಎದೆಯ ನೋವೆಲ್ಲ ಕೊಳಲದನಿಯಾಗಿಸಿದವನ ತಪಸ್ಸಿಗೆ ಫಲ ಸಿಕ್ಕಿದೆ. ತತ್ರಾಣಿ ತುಂಬ ಜೀವ ಜಲ, ಸಕಲ ಜೀವಗಳಿಗೆ ತಿಂದು ತಿಂದು ಮೀಗುವಷ್ಟು ಹಸಿರ ಮೇವು. ಮನುಷ್ಯ ಚೈತನ್ಯದಾಳದಲ್ಲಿ ಪ್ರಕೃತಿಯ ಧ್ಯಾನ, ಪ್ರಕೃತಿಯ ಪ್ರತಿ ಮಿಡಿತದಲೂ ಜೀವ ಪೊರೆವ ಹಂಬಲ.


ಸಿಹಿಯುಣ್ಣುವ ಆಸೆಯನ್ನು ಅಣಕಿಸುವಂತೆ ಈ ದುಬಾರಿಯ ದಿನಗಳಲ್ಲಿ ಮತ್ತೆ ಬಂದಿದೆ ಯುಗಾದಿ. ತಾನು ಹೊರುವ ಚೀಲದಷ್ಟೆ ಮಣಭಾರವಾಗಿರುವ ಬದುಕನ್ನು ಹೊತ್ತು ಮಾಲಿಕನಿಗೆ ಕೊಟ್ಟು, ಬೆಳೆದು ನಿಂತ ಮಗಳ ಹೊಸ ಸೀರೆಯ ಕನಸನ್ನು ಈ ಸಲದ ಯುಗಾದಿಗಾದರೂ ನನಸಾಗಿಸುವ ಹಂಬಲ ಅಪ್ಪನಿಗೆ. ಮದುವೆಯಾದದ್ದೆ ಬಂತು ತವರನ್ನು ಕಂಡೆ ಇರದ ಹಿರಿಮಗಳನ್ನು ಅಳಿಯನ ಜೊತೆ ಯುಗಾದಿಯ ನೆಪದಲ್ಲಾದರೂ ಕರೆಸಿಕೊಂಡು ಹೊಸ ಬಟ್ಟೆ ಕೊಟ್ಟು ಹಬ್ಬ ಮಾಡುವ ಅವ್ವನ ಅಭಿಲಾಷೆಗೆ ಎಂದಿಗಿಂತ ನಾಲ್ಕು ಮನೆವಾಳ್ತೆಯ ಹೆಚ್ಚಿನ ಕೆಲಸ. ವರ್ಷದ ಎಲ್ಲ ದಿನಗಳಲ್ಲೂ ದುಡಿಯುವುದಕ್ಕೆ ಹುಟ್ಟಿದಂತಿರುವ ಕೋಟಿ ಜನ ಹಬ್ಬ ಮಾಡಲು ಯುಗಾದಿಗೇ ಕಾಯುವ ನಮ್ಮ ನೆಲದ ಸೋಜಿಗದ ಗುಣ ಅಪರಿಮಿತವಾದದ್ದು. ಹೊಲದಲ್ಲಿನ ಹಸಿರಿನ ಹಬ್ಬವೆ, ಮನೆಯಲ್ಲಿ ಹೊಸ ಬಟ್ಟೆ ತೊಡುವ ಇಚ್ಛಾಶಕ್ತಿಯನ್ನು ಹುಟ್ಟಿಸುತ್ತದೆ. ಎತ್ತರೆತ್ತರ ಏರುವ ಬೆಲ್ಲ ಬೇಳೆಯ ಬೆಲೆಯ ಜೊತೆ ಸೋತರಟ್ಟೆಗೆ ದೊರೆಯದ ಕನಿಷ್ಟ ಕೂಲಿ ಪೈಪೋಟಿಗೆ ಬಿದ್ದು ಹಬ್ಬದಡುಗೆ ಮಾಡಿಸಲೇ ಬೇಕೆಂಬ ಪಣ ತೊಡುತ್ತದೆ. ದುಡಿದ ದುಡಿಮೆಗೆ ತಕ್ಕ ದುಡ್ಡು ಕೊಡುವುದಂತೂ ನಮ್ಮನ್ನು ದುಡಿಸಿಕೊಳ್ಳುವವರಿಗೆ ಸಾಧ್ಯವಾಗಲೇ ಇಲ್ಲ, ’ಕನಿಷ್ಟ ಕೂಲಿಯನ್ನಾದರೂ ಕೊಡಿ ಯುಗಾದಿ ಹಬ್ಬ ಬಂದಿದೆ’ ಎಂದು ಬೊಗಸೆಯೊಡ್ಡಿ ಗೋಗರೆದವರಿಗೆ ಕೊಪ್ಪಳದಲ್ಲಿ ಲಾಟಿ ಏಟಿನ ಸಿಹಿಯುಣ್ಣಿಸಿದ್ದಾರೆ. ಇದು ಒಂದು ಊರಿನ ಒಂದು ಬವಣೆಯ ಚಿತ್ರವಲ್ಲ. ನಮ್ಮ ನಾಡಿನ ಎಲ್ಲ ಊರಿನ ಎಲ್ಲ ಚಿತ್ರಗಳಲ್ಲೂ ಇದೇ ಬಿಕ್ಕಿನ ಬೇರೆ ಬೇರೆ ದನಿಗಳಿವೆ. ಇವುಗಳನ್ನು ಕಾಣುವ ಕೇಳುವ ಯಾವ ಮನಸ್ಸುಗಳಿಗೂ ಪರಿಹಾರ ಒದಗಿಸುವ ದಾರಿಗಳನ್ನು ಕಂಡುಕೊಳ್ಳುವುದು ಬೇಕಿಲ್ಲ. ದುಡಿಮೆಯ ಸಂಸ್ಕೃತಿಗೆ ಇಂದು ಎಲ್ಲಿಲ್ಲದ ಸವಾಲುಗಳು, ಸಂದಿಗ್ಧತೆಗಳು. ಎಲ್ಲ ಸಂಪತ್ತನ್ನು ಏಕತ್ರವಾಗಿಸಿಕೊಂಡಿರುವ ಸಾಹುಕಾರರಿಗೆ ನೆಲ ಜಲ ಗಾಳಿಯೂ ಸಹ ಮಾರಿಕೊಳ್ಳುವ ಸರಕು. ಹೌದು ಈ ಯುಗಾದಿಯ ಪ್ರೀತಿ ಅನೂಹ್ಯವಾದದ್ದು. ಕಣ್ಣ ಹನಿಗಳ ಕಣಜ ಎದೆಯಲ್ಲಿ ಒಟ್ಟು ಗೂಡಿಸಿಕೊಂಡು, ಹೆಂಡತಿ ಮಕ್ಕಳ ಹೃದಯದಲ್ಲಿ ಸ್ವಚ್ಛಂದ ಹಕ್ಕಿಗಳ ಚಿಲಿಪಿಲಿ ಕೇಳುವ ಹುಮ್ಮಸ್ಸನ್ನು ಹೊಮ್ಮಿಸುವ ಯುಗಾದಿಯಿಲ್ಲದಿದ್ದರೆ ಬಹುಶಃ ಎಲ್ಲ ಬದುಕು ನಿಸ್ತೇಜ, ಅಸಹ್ಯ.

ಜಾಗತಿಕ ವಹಿವಾಟಿನ ಇಂದಿನ ದಿನಗಳಲ್ಲಿ ಮಾರುಕಟ್ಟೆಯ ಮೇಲೆ ಮಾರಾಟಕ್ಕಿಡದ ವಸ್ತುವೇ ಇಲ್ಲ. ಇಲ್ಲಿ ಎಲ್ಲವೂ ಬಿಕರಿಗಿದೆ. ಒಂದು ಕಾಲವಿತ್ತು, ಅವರು ಬೆಳೆದ ಬೇಳೆ ಇವರಿಗೆ, ಇವರ ಗಾಣದ ಬೆಲ್ಲ ಅವರಿಗೆ, ಇವರ ಮನೆ ಒಲೆಗೂ, ಅವರ ಮನೆ ಬೆಂಕಿಗೂ ಬಿಡಿಸಲಾಗದ ನಂಟು. ಮನೆಯಾಳಿನ ಮಗನಿಗೆ ಕಡಿಮೆ ದರ್ಜೆಯದ್ದೆ ಆದರೂ ಹೊಸ ಬಟ್ಟೆ ಕೊಡುವಷ್ಟು ಉದಾರವಾಗಿದ್ದ ಜಮೀನ್ದಾರ. ಇಂದಿನ ಕಾರ್ಪೊರೇಟ ಒಡೆಯನ ಉಪದೇಶ ಬೇರೆ. ದುಡಿದವರ ದುಡಿತ ತಂದು ಕೊಟ್ಟ ಐಶಾರಾಮಿಕೆಯ ಭೋಗದಲ್ಲಿ ಮೈ ಮನಸ್ಸುಗಳನ್ನು ಜಡವಾಗಿಸಿಕೊಂಡು ಸದಾ ಸುಖ ನಿದ್ರೆಯ ಮಂಪರಿನಲ್ಲೆ, ಸಮಯದ ಜೊತೆ ಜಿದ್ದಿಗೆ ಬಿದ್ದು ದುಡಿಯುವವರಿಗೆ ’ಹೀಗೆ ದುಡಿಯಬೇಕು, ಹಾಗೆ ದುಡಿಯಬೇಕು’ ಎಂಬ ಪಾಠ ಕೇಳುವುದು ನಮಗೇನು ವಿಸ್ಮಯ ಮೂಡಿಸುವುದಿಲ್ಲ. ಪ್ರಕೃತಿಯ ಮಗುವಾಗಿ ಹುಟ್ಟಿದ ಮನುಷ್ಯನಿಗೆ ’ಹೊಟ್ಟೆ ತುಂಬ ಹಾಲು ಕುಡಿದು ಸೊಂಪಾಗಿ ಬೆಳಯೊ ಕಂದಾ’ ಎಂದು ಎದೆಯೂಡುವ ಅವ್ವನಿಗೆ, ಯಾವಾಗ ಮನುಷ್ಯ ಹಾಲಿನ ಕಡಲೇ ಬಗಿದು ಕುಡಿಯಬೇಕೆಂದು, ಹೆತ್ತವ್ವನ ಎದೆಯನ್ನೆ ಸೀಳುವ ದುಸ್ಸಾಹಸಕ್ಕಿಳದನೊ, ಹೇಗೆ ಸಹಿಸಿಯಾಳು ಪ್ರಕೃತಿ, ಹುಟ್ಟಿಸಿದವಳೆ ಹುರಿದುಮುಕ್ಕದೆ ವಿಧಿಯಿಲ್ಲ. ಸುನಾಮಿಯಾಗಿ, ಚಂಡಮಾರುತವಾಗಿ, ಅಕಾಲಿಕ ಮಳೆಯಾಗಿ ಹೇಗೆ ಬೇಕೂ ಹಾಗೆ ಮನುಷ್ಯ ಜೀವದ ಸೊಕ್ಕು ಮುರಿಯುತ್ತಿದ್ದಾಳೆ.

ಈಗ ನಮ್ಮ ಮುಂದಿರುವುದು ಯಾವ ಯುಗದ ಆದಿ ಅಥವಾ ಯಾವ ಯುಗದ ಅಂತ್ಯ. ಜೀವ ಹುಟ್ಟಿದಾಗಿನ ಆದಿಯ ಅಳುದನಿಗೆ ಇಂದು ಹಲವು ರೂಪ. ಹಿಂದಾದರೆ ರಾತ್ರಿ ಮೂಡುವ ಚುಕ್ಕಿಯನ್ನು ಕಂಡರೆ, ನಾಳೆ ಬೀಳುವ ಮಳೆ ಗೊತ್ತಾಗುತ್ತಿತ್ತು. ಇಂದು ಪರಿಸ್ಥಿತಿ ಹಾಗಿಲ್ಲ ಮೊನ್ನೆ ಸುರಿದ ಅಕಾಲಿಕ ಮಳೆಗೆ ಎದೆಮಟ್ಟ ಬೆಳೆದ ಗೋದಿ ನೆಲಕಚ್ಚಿತು. ಹೋಳಿಗೆ ಮಾಡುವುದು ಹೇಗೆ ? ಇದು ಯಾವ ಕಾಲ ಎಂಬುದೇ ತಿಳಿಯದ ಕಾಲದಲ್ಲಿ ನಮ್ಮ ಬದುಕಿದೆ. ಯಾರು ಹೇಗೆ ಎಂಬುದು ಅರ್ಥವಾಗದ, ಎಲ್ಲಿ ಯಾವಾಗ ಏನು ನಡೆಯುತ್ತದೆ ಎಂಬ ನಮ್ಮ ಎಣಿಕೆ ನಂಬಿಕೆ ಬುಡಮೇಲಾಗುವ, ಯಾರದೋ ಕೈಯಲ್ಲಿ ತಮ್ಮ ಪ್ರಾಣವನ್ನು ಕೊಟ್ಟು, ಆಡಿಸಿದಂತೆ ಆಡುವ ತೊಗಲು ಗೊಂಬೆಯಾಗಿರುವ ಅನ್ನದಾತರ ಸ್ಥಿತಿ, ಈ ಸಂಧಿಗ್ಧತೆ ಇಷ್ಟು ಭೀಕರವಾಗಿ ಇತಿಹಾಸದ ಯಾವ ಪುಟದಲ್ಲೂ ಇರಲಿಕ್ಕಿಲ್ಲ. ಪ್ರತಿ ಯುಗಾದಿಯಂದು ಪ್ರಕೃತಿ ಮೈಪೊರೆ ಕಳಚಿ ಹೊಸ ಜೀವ ಉಕ್ಕಿಸುತ್ತದೆ, ಮನುಷ್ಯ ಬದುಕು ರವರವ ಬಾಯಾರಿಕೆಯನ್ನು ತಣಿಕೊಂಡು ಮತ್ತೆ ಬದುಕುವ ತ್ರಾಣವನ್ನು ಆವಾಹಿಸಿಕೊಳ್ಳುತ್ತದೆ. ಆದರೆ ಇದರ ಪರಿಣಾಮ ಮಾತ್ರ ಹೇಳತೀರಲಾಗದು.

ಹೋದ ಯುಗಾದಿಯಿಂದ ಇಂದಿನ ಯುಗಾದಿಯ ವರೆಗೆ ನಡೆದ ಒಟ್ಟು ಚಿತ್ರಗಳ ಆಚೆ ನಿಂತು ನೋಡಿದರೆ ಹಳೆಯ ಬಿಕ್ಕಿಗೆ ಹೊಸ ಕಾರಣಗಳಿದ್ದಂತೆ ತೋರುತ್ತದೆ. ಜಾಲಿ ಮರದಲ್ಲಿ ನೇಣಿಗೆ ಬಿದ್ದ ಅದೆಷ್ಟು ಅನ್ನದಾತರಿಗೆ ಬದುಕು ಸಹ್ಯವಾಗಿಸುವ ಕನಿಷ್ಟ ಕ್ರಿಯೇಯನ್ನು ನಡೆಸದ ನಮ್ಮನ್ನಾಳುವ ಪ್ರಭುಗಳು ತಮ್ಮ ಪ್ರತಿಷ್ಠೆಯ ಸಮಾರಂಭದಲ್ಲಿ ರೈತಗೀತೆಯನ್ನು ಹಾಡಿಸಿದರೆ ಅದು ಶೋಕಗೀತೆಯಾಗಿ ಮಾತ್ರ ಕೇಳಿಸುತ್ತದೆ. ಒಂದು ಕಡೆ ವಸಂತ ಬವಣಿತರ ಬದುಕಿನ ಅಂತಃಶಕ್ತಿಯನ್ನು ಕಂಡೆ ಜೀವ ಹಿಡಿದಿದ್ದಾನೆ, ಇನ್ನೋಂದು ಕಡೆ ಹುಟ್ಟಿಸಿದ ಮಕ್ಕಳು ಹಸಿವಿನ ಹಾಹಾಕಾರದಲ್ಲಿ ತೊಳಲುತ್ತಿದ್ದರೂ ಒಡೆದ ಗಡಿಗೆಯ ಚಿಪ್ಪಿನಲ್ಲಿ ಆರಿಸಿ ತಂದ ಭತ್ತವನ್ನು ಕುದಿಸಿ ಗಂಜಿ ಕುಡಿಸುವುದನ್ನು ನೇರ ಕಣ್ಣುಗಳಿಂದ ದಿಟ್ಟಿಸಿ, ಒಳಗೊಳಗೆ ಬಿಕ್ಕುವ ಚೈತ್ರಳಿಗೆ ಎಲ್ಲವೂ ವಿಷಾದ ಚಿತ್ರಗಳಾಗಿ ಕಾಡುತ್ತವೆ. ಕೋಟಿ ಜನದ ಬೋಳು ಬದುಕೇ, ಕೆಲವು ಉಳ್ಳವರ ಪಾಲಿಗೆ ಸರಕಾಗಿರುವುದು ಈ ಸಲದ ಯುಗಾದಿಗೆ ಮತ್ತೊಂದು ಸೇರ್ಪಡೆ. ಹೌದು ಎಲ್ಲೋ ಎಡವಟ್ಟಾಗುತ್ತಿದೆ. ಈ ಎಡವಟ್ಟುಗಳು ತಂದೊಡ್ಡಿರುವ ದಾರುಣತೆಯನ್ನು ಮಾತ್ರ ಅನುಭವಿಸುವ ನಾವು ಇವುಗಳ ವಾರಸುದಾರರನ್ನು ಬೊಟ್ಟು ಮಾಡಿ ತೋರಿಸುವಂತಿಲ್ಲ.

ಮತ್ತೆ ಬಂದ ಯುಗಾದಿಗೂ ಹಸನಾದ ಬದುಕಿನ ಕನಸು ನನಸಾಗಿಸುವ ತಾಕತ್ತಿಲ್ಲ. ಚೆಂದದ ಬದುಕಿನ ಕನಸುಗಳನ್ನೂ ಎದೆಯೊಳಗೆ ಬೆಳೆಸಿಕೊಳ್ಳುವ ಕನಸುಗಾರರಿಗೆ ಅವುಗಳನ್ನು ಸಾಕಾರಗೊಳಿಸುವ ಅಧಿಕಾರವಿಲ್ಲ. ಅಧಿಕಾರವುಳ್ಳ ಮಹಾಮಹಿಮರ ಭೋಗದ ಮತ್ತಿನಲ್ಲಿ, ದೀನರ ಬದುಕು ಕೆಟ್ಟ ಕನಸುಗಳಾಗಿ ಕಾಡುವುದಕ್ಕೆ ಅವಕಾಶವಿಲ್ಲ. ಯುಗಾದಿ ಮತ್ತೊಂದು ಹರುಷದ ಹಬ್ಬವಾಗಿ ಬಂದಿಲ್ಲ. ಒಂದೇ ಮನದ ಕೋಟಿ ಬಿಕ್ಕುಗಳನ್ನು ಸಹ್ಯವಾಗಿಸುವ ಕನಿಷ್ಟ ಶಕ್ತಿ, ಜೀವ ಚೈತನ್ಯವನ್ನು ಪ್ರತಿ ಜೀವ ಕನದಲ್ಲೂ ಅನುರಣನಗೊಳಿಸುವ ಸಾಮರ್ಥ್ಯ ಮಾತ್ರ ಈ ಯುಗಾದಿಗೆ ಇದೆಯೇನೋ. ಅದರ ಆಚೆ ನಾವಾಗಿಯೇ ಮಾಡಿಕೊಂಡ ಎಲ್ಲ ಅವಘಡಗಳಿಗೆ ಯಾರನ್ನೂ ದೂರಿ ಪ್ರಯೋಜನವಿಲ್ಲ, ಅದರಲ್ಲೂ ಮುಖ್ಯವಾಗಿ ನಮಗೆ ಬದುಕುವ ಅವಕಾಶ ಕೊಟ್ಟ ಪ್ರಕೃತಿಯನ್ನಂತೂ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಯಾರಿಗೂ ಅರ್ಹತೆ ಇಲ್ಲ. ಇದೇನಿದ್ದರೂ ನಮ್ಮ ಮತ್ತು ನಮ್ಮ ಬದುಕಿನ ಜವಾಬ್ದಾರಿ ಹೊತ್ತ ಆಳುವ ಪ್ರಭುಗಳ ನಡುವಿನ ಜಟಾಪಟಿ. ಈ ಜಗಳದಲ್ಲಿ ಸೋಲು ನಮ್ಮ ಕಡೆಯೇ ನೋಡುತ್ತಿದ್ದರೂ, ಸಮಾನತೆಯ ಕನಸಿನ ಬೀಜಕ್ಕೆ ಮಾತ್ರ ನಮ್ಮ ಬೆವರಿನ ಹನಿಗಳು ನೀರುಣಿಸುತ್ತಿವೆ. ಈ ಯುಗಾದಿಗೆ ಸತ್ತ ಬೀಜಗಳಿಗೆ ಜೀವ ಕೊಡುವ ಶಕ್ತಿ ಇರುವುದಾದರೆ, ಬವಣಿತರ ಬದುಕಿನ ಕನಸಿಗೆ ಚೈತನ್ಯ ತುಂಬುವ ಶಕ್ತಿ ಇದ್ದೆ ಇರುತ್ತದೆ. ಪ್ರಕೃತಿಯ ಪ್ರತಿ ಬದಲಾವಣೆಯಿಂದಲೂ ಕಲಿಯಬೇಕಿದೆ ಕಲಿತಂತೆ ನಡೆಯುವ ಉತ್ಸಾಹವನ್ನು ಉಳಿಸಿಕೊಳ್ಳಬೇಕಿದೆ. ಎದೆ ತುಂಬ ಆಸೆ, ಕಣ್ಣ ತುಂಬ ಕನಸು ಒಟ್ಟುಗೂಡಿಸಿಕೊಂಡು ಇಲ್ಲೆ ಎಲ್ಲೋ ಹಾಳಾಗಿ ಹೋಗಿರುವ ವಸಂತನನ್ನು ಕರೆತರಬೇಕಿದೆ. ಎಲ್ಲ ದಾಳಿಗಳೂ, ಎಲ್ಲ ಹತಿಯಾರಗಳೂ, ಎಲ್ಲ ಕದನಗಳನ್ನೂ ಕಂಡು ಕಂಡು ಬೇಸತ್ತಿರುವ ಚೈತ್ರಳಿಗೆ, ಒಂದೇ ಹೊಟ್ಟೆಯಿಂದ ಹುಟ್ಟಿ ಬಂದ ನಮ್ಮೆಲ್ಲರ ಸಹಬಾಳ್ವೆಯನ್ನು ಈ ಹಬ್ಬದ ನೆವದಲ್ಲಾದರೂ ಮನಗಾಣಿಸಬೇಕಿದೆ.

ಈ ಸಲದ ಯುಗಾದಿಯ ಹೊಸ್ತಿಲಲ್ಲಿ ನಿಂತು ಬಯಸುವುದೇನು ಮತ್ತದೇ ವಸಂತನೊಳಗೆ ಚೈತ್ರ ಒಂದಾಗಿ ಬದುಕಿಗೆ ಭರವಸೆಯ ಬೆಳಕನ್ನು ಹೊತ್ತು ತರಲಿ. ದಾರಿ ತುಂಬಾ ತುಂಬಿರುವ ದುರಂತಗಳ ಬಾಯಾರಿಕೆ ತಣಿಯಲಿ. ಜಾತಿ ಧಿಕ್ಕರಿಸಿದ ಕಾರಣಕ್ಕೆ, ಊರಿನವರಿಂದ, ಸಂಭಂಧಿಕರಿಂದ, ಅಪ್ಪ ಅಮ್ಮ ತಮ್ಮ ಅಕ್ಕ ತಂಗಿಯರಿಂದ ಬಹಿಷ್ಕಾರಕ್ಕೆ ಒಳಗಾಗಿ ದಿನವೂ ಬಿಕ್ಕುತ್ತಿರುವ ನಮ್ಮಂಥವರಿಗೆ ಈ ಕರುಳ ಬಳ್ಳಿಗಳು ಮತ್ತೆ ದೊರಕಲಿ.

ವೀರಣ್ಣ ಮಡಿವಾಳರ