ಭಾನುವಾರ, ನವೆಂಬರ್ 13, 2011

ಕಣ್ಣ ಹನಿಗಳ ಕಣಜ ತೋರದಿರಲಾಗದೆ....

ಆ ದಿನ ಮತ್ತು ಆ ಮಾತುಗಳನ್ನು ಮರೆಯಲಾಗುತ್ತಿಲ್ಲ ಅದೊಂದು ಅರ್ಥಪೂರ್ಣ ಕಾರ್ಯಕ್ರಮ. ಅದೀಗ ತಾನೆ ಒಂದು ಅವಘಡದಿಂದ ಪಾರಾಗಿ ಬಂದಿದ್ದ ಹಿರಿಯ ಕವಯತ್ರಿ ಸವಿತ ನಾಗಭೂಷಣ ರವರು ಮಾತನಾಡುತ್ತ " ಈ ಕಾಲದ ಸಂದಿಗ್ಧತೆಗಳು ತುಂಬ ಆತಂಕಕಾರಿಯಾಗಿವೆ. ಬದುಕು ದುಸ್ಥರವಾಗುತ್ತಿದೆ. ರಾಜಕೀಯ ಅರಾಜಕತೆ, ಸಾಮಾಜಿಕ ಬಿಕ್ಕಟ್ಟುಗಳು ಒಟ್ಟಿಗೇ ಸೇರಿಕೊಂಡು ಶೋಷಿತರ ಬಡವರ ಸ್ಥಿತಿ ಹೇಳತೀರದಾಗಿದೆ " ಎಂಬ ಅರ್ಥದಲ್ಲಿ ತಮ್ಮ ಮನದಾಳದ ವಿಷಾದವನ್ನು ವೇದಿಕೆಯಲ್ಲಿ ನಿವೇದಿಸಿಕೊಳ್ಳುತ್ತಿದ್ದರು. ಇಡೀ ಕಾರ್ಯಕ್ರಮವೇ ಆರ್ದ್ರತೆಯಿಂದ ತುಂಬಿಹೋಯಿತು. ಎಲ್ಲರದೂ ಒಂದೇ ಧ್ಯಾನ ಮನುಷ್ಯನ ಬವಣೆಗಳಿಗೆ ಪರಿಹಾರದ ದಾರಿ ಯಾವುದು?..... ಇದೇ ಸಮಯಕ್ಕೆ ಕಾರ್ಯಕ್ರಮದ ಏಕಾಧಿಪತ್ಯವಹಿಸಿದ್ದ ಕನ್ನಡದ ಮಹತ್ವದ ಲೇಖಕರೊಬ್ಬರು ಸವಿತ ನಾಗಭೂಷಣರ ಮಾತಿಗೆ ಪ್ರತಿಯಾಗಿ " ಈ ಕಾಲ ತುಂಬ ದುರಂತದ ಕಾಲ, ಅವಘಡದ ಕಾಲ, ಸಹಿಸಲಸಾಧ್ಯವಾದ ಕಾಲ ಎಲ್ಲವೂ ಸರಿ, ಆದರೆ ನಾವೆಲ್ಲ ಬರಹಗಾರರಾದವರು ಸಂತೋಷಪಡಬೇಕು, ಸಂಭ್ರಮಪಡಬೇಕು ಯಾಕಂದ್ರೆ ನಮ್ಮ ಬರವಣಿಗೆಗೆ ಸಾಕಷ್ಟು ಸರಕು ಸಿಗ್ತಾ ಇದೆ "


ಇಂಥ ಮಾತುಗಳನ್ನಾಡಿದ ಆ ವ್ಯಕ್ತಿಯ ಬರಹ ಅದೆಷ್ಟು ವ್ಯವಹಾರಿಕವಾದದ್ದು. ಈ ಕ್ಷಣವೂ ಸಹ ಐಡೆಂಟಿಟಿಯ ಭ್ರಮೆಗೆ ಬಿದ್ದ ಇಂಥವರು ಕನಿಷ್ಟ ಮನುಷ್ಯತ್ವವನ್ನೂ ಕೂಡ ಬಿಟ್ಟುಬಿಡುವ ಅಮಾನುಷತೆಗೆ ಇಳಿವರಲ್ಲ ಎಂದು ಹತಾಶೆಯಾಗುತ್ತದೆ.

ಹಾದಿ ಬೀದಿಯಲ್ಲಿ ಹಸುಗೂಸುಗಳನ್ನು ಹೊತ್ತು, ದಣಿದ ಕೈಗಳಿಂದಲೇ ತುತ್ತು ಅನ್ನಕ್ಕೆ ಅಂಗಲಾಚುವ, ಉಳ್ಳವರು ನಡೆದಾಡುವ ಕಾಲುಗಳಡಿಯಲ್ಲಿಯೇ ಖಾಯಿಲೆ ಬಿದ್ದಿರುವ, ಸಾವಿರಗಟ್ಟಲೆ ಜೀವಗಳು ಎಲೆ ಉದುರಿದಂತೆ ಉದುರಿಹೋಗುತ್ತಿರುವುದನ್ನು ಅವುಡುಗಚ್ಚಿ ಉಸಿರು ಬಿಗಿ ಹಿಡಿದು ನೋಡುತ್ತಿರುವಾಗ ಈ ಮೇಲಿನ ಎರಡು ಮಾತುಗಳಲ್ಲಿನ ಎರಡು ವಿರುದ್ಧ ಅಂಚುಗಳು ಒಟ್ಟಿಗೇ ಜೀವ ಅಲುಗಾಡಿಸುತ್ತಿವೆ. ವರ್ತಮಾನ ಕರ್ನಾಟಕದ ಕೆಲವು ಚಿಂತನಾ ಧಾರೆಗಳನ್ನು ಗಮನಿಸಿದರೆ ವಿಚಿತ್ರ ತಳಮಳ ಉಂಟಾಗುತ್ತದೆ. ಭೋಗವೇ ಅತ್ಯಂತ ಪ್ರಾಶಸ್ತ್ಯದ ವಸ್ತುವಾಗಿ, ಈ ಭೋಗದ ಹಂಬಲವನ್ನು ಸಾಧಿಸಿಕೊಳ್ಳುವುದಕ್ಕಾಗಿ ಸಿಕ್ಕ ದಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮನುಷ್ಯ ಪರಂಪರೆಗೆ ತನ್ನದೇ ಆದ ಮಹತ್ವಪೂರ್ಣ ಇತಿಹಾಸವಿದೆ. ಈ ಇತಿಹಾಸದ ಮೊದಲ ಪುಟದಿಂದ ಗಮನಿಸುತ್ತ ಬಂದರೆ ಕಾಲವು ಹಿಂದೆ ಸರಿದಂತೆಲ್ಲಾ ಸ್ವಾರ್ಥದ ಹೆಚ್ಚಳವಾಗಿರುವುದು ಕಂಡುಬರುತ್ತದೆ. ಈ ಸ್ವಾರ್ಥದ ಜೊತೆಜೊತೆಗೆ ಅಮಾನವೀಯ ಮುಖವಾಡಗಳು ತಂದೊಡ್ಡಿರುವ ಅವಘಡಗಳು ಅಷ್ಟೇ ಪರಿಣಾಮಕಾರಿಯಾದುವು, ವಿನಾಶಕಾರಿಯಾದುವು ಆಗಿವೆ. ಆದರೆ, ಇದೆಲ್ಲದರ ಮಧ್ಯೆ ಜೀವಗಳನ್ನು ಸಲಹುವ, ಜೀವಪರತೆಯನ್ನು ಉಳಿಸಿಕೊಳ್ಳುವ, ಬೆಳೆಸಿಕೊಳ್ಳುವ, ಹಂಚಿಕೊಳ್ಳುವುದಕ್ಕಾಗಿ ಬದುಕನ್ನೇ ಅರ್ಪಿಸಿಕೊಂಡ ಚೇತನಗಳು ವಿನಾಶಕಾರಿ ಶಕ್ತಿಗಳೊಂದಿಗೆ ನಡೆಸಿದ ಪ್ರತಿರೋಧವೂ ಸಾಮಾನ್ಯವಾದುದ್ದಲ್ಲ. ವಚನ ಬಂಡಾಯ ಈ ಆಲೋಚನೆಗೆ ಇತಿಹಾಸದಲ್ಲಿ ಗಟ್ಟಿಯಾಗಿ ನೆಲೆಯೂರಿದ ಬಹುದೊಡ್ಡ ಪ್ರತಿರೋಧದ ದನಿ. ಇಂದಿನ ಬದುಕಿನ ನಡೆಗಳನ್ನು ಗಮನಿಸಿದಾಗ ಬಹುಶಃ ವಚನ ಬಂಡಾಯ ಕಾಲದ ಅಪಾಯಗಳಿಗಿಂತಲೂ ಆಘಾತಕಾರಿಯಾದ ಸನ್ನಿವೇಶಗಳು ನಮ್ಮೆದುರು ಸೆಡ್ಡು ಹೊಡೆದು ನಿಂತಿವೆ. ನಮ್ಮ ಪ್ರಶ್ನೆ ಇರುವುದು ಈ ಕಾಲದ ಯಾವುದೇ ಸಂಕಷ್ಟಗಳಿಗೆ. ಈ ಬದುಕನ್ನು ಮಾನವೀಯಗೊಳಿಸಬಹುದಾದ ಕನಿಷ್ಠ ಸಹಿಸಬಹುದಾದ ನೆಲೆಯಲ್ಲಿಯಾದರೂ ಕೊಂಡೊಯ್ಯಬಹುದಾದ ಜವಾಬ್ದಾರಿ ಹೊತ್ತುಕೊಂಡಿರುವ ನಿಷ್ಕ್ರೀಯ ಪ್ರಭುತ್ವಕ್ಕೆ ಅಲ್ಲ. ಬದಲಾಗಿ ಮನುಷ್ಯ ತನ್ನ ಬದುಕನ್ನು ಕಟ್ಟಿಕೊಳ್ಳುವುದ ಕಲಿತ ಕ್ಷಣದಿಂದ ಆ ಬದುಕಿಗೆ ಎಲ್ಲ ಭಾಗ್ಯಗಳನ್ನು ತಂದುಕೊಡುವಲ್ಲಿ ಗಣನೀಯ ಪಾತ್ರ ನಿರ್ವಹಿಸಿದ, ಎಲ್ಲ ಬೇಗುದಿಗಳನ್ನು ಸಂತೈಸುತ್ತಲೇ ಆ ಸಂಕಷ್ಕಕ್ಕಿರುವ ಕಾರಣಗಳನ್ನು ವಿಶ್ಲೇಷಿಸಿ ಸಾರ್ಥಕ ಬದುಕನ್ನು ನಿರ್ಮಿಸಿಕೊಟ್ಟ ಬರವಣಿಗೆಯ ಈ ಕ್ಷಣದ ಅರ್ಥವಂತಿಕೆಯ ಕುರಿತು ನಮ್ಮ ಪ್ರಶ್ನೆ ಇದೆ.

ಇಂದಿನ ಬರವಣಿಗೆ, ಸೃಜನಶೀಲತೆ, ಅಭಿವ್ಯಕ್ತಿ ಯಾವುದಕ್ಕೆ ವಿನಿಯೋಗವಾಗುತ್ತಿದೆ ಎಂಬುದೇ ನಾವಿಂದು ಚಿಂತಿಸಬೇಕಾಗಿರುವ ವಿಚಾರ. ಮಿಲಿಯನ್‌ಗಟ್ಟಲೇ ಜನರನ್ನು ಗಿಲಿಟಿನ್ ಯಂತ್ರದ ಬಾಯಿಗೆ ಕೊಟ್ಟ ’ನೀಷೆ’ಯ ವಿಚಾರಧಾರೆಯನ್ನು ವರ್ತಮಾನದ ಪ್ರಭುತ್ವದ ಅಮಾನುಷ ನಡೆಯನ್ನು ಬಲಪಡಿಸುವುದಕ್ಕಾಗಿಯೇ ನವೀಕರಣೆಗೊಳಿಸುವ, ಪ್ರಕಟಿಸುವ ಕ್ರಿಯೆ ನಡೆಯುತ್ತಿದೆ ಎನಿಸುತ್ತದೆ.’ಮನುಷ್ಯನ ಬಿಡುಗಡೆಗೆ ಏಕಮಾತ್ರ ದಾರಿ ಅದು ಆತ್ಮಹತ್ಯೆ’ ಎಂದು ಪ್ರತಿಪಾದಿಸಿದವನ ಚಿಂತನೆಯನ್ನು ಮತ್ತು ರಕ್ತವನ್ನೂ ಬೆವರಿನಂತೆ ಹರಿಸಿ ಬೆಳೆ ಬೆಳೆದು ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಹೋದದ್ದಕ್ಕೆ ಹಗ್ಗ ಹಿಡಿದು ಜಾಲಿಮರದತ್ತ ಹೊರಟವನ ಚಿತ್ರವನ್ನು ಒಟ್ಟಿಗೆ ಕಣ್ಣೆದುರು ತಂದುಕೊಂಡರೆ ಈ ಕಾಲದ ಬುದ್ದಿವಂತಿಕೆಯ ವಾರಸುದಾರರು ಮುಖ್ಯವಾಗಿ ವರ್ತಮಾನದ ಬರಹ ಕೊಡುತ್ತಿರುವ ಕೊಡುಗೆ ಮನದಟ್ಟಾಗುತ್ತದೆ.

ಇದು ಕೇವಲ ಬರವಣಿಗೆಯ ಕುರಿತಾದ ಮಾತಲ್ಲ. ಬದಲಾಗಿ ಸಾರ್ವಜನಿಕವಾಗಿ ಒಳಗೊಳ್ಳಬಹುದಾದ ಎಲ್ಲ ಕ್ರಿಯೆಗಳನ್ನು ಸಹ ನಾವು ಉದಾರತೆಯನ್ನು ತಗೆದು ನಿರ್ದಿಷ್ಠ ದೃಷ್ಟಿಕೋನದಿಂದ ನೋಡಬೇಕಾದ ಜರೂರತ್ತಿದೆ. ಬಹಳಷ್ಟು ವೇದಿಕೆಗಳು, ಭಾಷಣಗಳು, ಮಾಧ್ಯಮಗಳಲ್ಲಿ ಕಾಣಬಹುದಾದ ಸಾಮಾನ್ಯ ಅಂಶವೆಂದರೆ ಸಾಂದರ್ಭಿಕತೆ. ಹೀಗೆ ಇದ್ದವರು ಇನ್ನೊಂದು ಕಡೆ ಹಾಗೆಯೇ ಉಳಿಯದಿರುವ, ಒಂದು ಕಡೆ ಮಾತನಾಡಿದ್ದಕ್ಕೆ ಮತ್ತೊಂದು ಕಡೆ ಬದ್ದವಾಗಿರದ, ಒಂದು ಕಡೆ ಬರೆದದ್ದಕ್ಕೆ ಮತ್ತೊಂದು ಕಡೆ ತದ್ವಿರುದ್ದವಾಗಿರುವುದು ಇವುಗಳಿಗೆ ಮೂಲ ಕಾರಣ ಸಾಂದರ್ಭಿಕತೆ. ಈ ಸಾಂದರ್ಭಿಕ ಅವಕಾಶವಾದವೇ ಇಂದು ದಮನಿತ ಬದುಕಿನ ಕನಿಷ್ಠ ಸಹ್ಯಗೊಳಿಸಬಹುದಾದ ನೈತಿಕ ಜವಾಬ್ದಾರಿಯನ್ನು ಅರ್ಥ ಕಳೆದುಕೊಳ್ಳುವಂತೆ ಮಾಡಿದೆ.

ಅಭಿವ್ಯಕ್ತಿ ಕೇವಲ ಐಡೆಂಟಿಟಿಯಲ್ಲ. ಹಾಗೆ ಐಡೆಂಟಿಟಿ ಎಂದುಕೊಂಡವರ ಭೃಮೆಗೆ ಇತಿಹಾಸದಲ್ಲಿ ಇರುವುದಕ್ಕಿಂತ ಪಾಠ ಬೇರೊಂದಿಲ್ಲ. ಜೀವಗಳು ಬದುಕುವ ಹಕ್ಕು ಇಂದು ’ಅರ್ಥ’ದ ಕೈಯಲ್ಲಿದೆ ಎನ್ನುವುದೇ ಈ ಕಾಲದ ಬಹುದೊಡ್ಡ ದುರಂತ. ಹಣವೆನ್ನುವುದು ಏಕತ್ರವಾಗುತ್ತಾ, ಬಹುಕೋಟಿ ಜನರು ಬದುಕಿ ಬಾಳುತ್ತಿರುವ ಈ ಪ್ರಕೃತಿಯಲ್ಲಿ, ಆ ಎಲ್ಲ ಸಂಪತ್ತನ್ನು ಕೇಂದ್ರಿಕರಿಸುತ್ತ ಇಡೀ ಸಮಷ್ಟಿಯನ್ನೇ ಕೆಲವರು ಮಾತ್ರ ನಿಯಂತ್ರಿಸಬಹುದಾದ ಸ್ಥಿತಿಗೆ ಸರಿಯುತ್ತಿರುವ ವಾಸ್ತವವನ್ನು ನಾವಿಂದು ಗಂಭೀರವಾಗಿ ಅವಲೋಕಿಸಬೇಕಿದೆ. ಸಾರ್ವಜನಿಕವಾದ ಅಭಿವ್ಯಕ್ತಿಯೇ ಇರಲಿ ಅಥವಾ ಕ್ರಿಯೆಯೇ ಇರಲಿ ಇಂದು ಜೀವಪರ ಮಾತ್ರವೇ ಇದೆ ಎಂದು ಹೇಳಲು ಸಾಧ್ಯವಿಲ್ಲದಂತಹ ಸ್ಥಿತಿಗೆ ನಾವಿಂದು ತಲುಪಿದ್ದೇವೆ. ಇಲ್ಲಿ ಅವಕಾಶ ಪ್ರದಾನವಾದ, ಬಹು ಜನಪ್ರಿಯವಾದ ಯಾವುದನ್ನೇ ಆಗಲಿ, ಅದನ್ನು ಒದಗಿಸುವ, ರಂಜನೀಯಗೊಳಿಸುವ, ತನ್ಮೂಲಕ ತಮ್ಮ ಮನೋವಾಂಛೆಗಳನ್ನು ತಣಿಸಿಕೊಳ್ಳುವಿಕೆ ನಮ್ಮ ಮುಂದೆ ಎಗ್ಗಿಲ್ಲದೇ ನಡೆಯುತ್ತಿದೆ. ಈಗಾಗಲೇ ಚಲಾವಣೆಗೊಂಡು ತುಕ್ಕು ಹಿಡಿದು ಹೋಗಿರುವ ಲೈಂಗಿಕ ಕೇಂದ್ರಿತ ಅಬಿವ್ಯಕ್ತಿಗೆ ನವನವೀನ ಬಣ್ಣಗಳನ್ನು ಹಚ್ಚುತ್ತಾ, ತುತ್ತು ಅನ್ನದ ಅಗತ್ಯಕ್ಕಿಂತಲೂ ದೈಹಿಕ ವಾಂಛೆಗಳು ತಂದುಕೊಡುವ ಹುಸಿ ಆಶ್ಚರ್ಯಗಳತ್ತ ಸೆಳೆಯುವ ಹುನ್ನಾರಗಳು ಕಾಲದ ತಲ್ಲಣಗಳಾಚೆ ಕರೆದೊಯ್ಯುವ ಕ್ರಿಯೆಗಳೆಂದೇ ಹೇಳಬೇಕಿದೆ. ಬದುಕಿನ ಉಳಿವಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಅನ್ನದ ಪ್ರಾಧಾನ್ಯತೆ ಹೆಚ್ಚಬೇಕಲ್ಲದೇ ಐಭೋಗದ ವಾರಸುದಾರಿಕೆಯಲ್ಲ.

ಬಹುಜನರ ಭಾವನೆಗಳನ್ನು ರೂಪಿಸುವ ಬಹುದೊಡ್ಡ ಜವಾಬ್ದಾರಿ ಹೊತ್ತಿರುವ ಸಮಾಜದ ವಿವಿಧ ಘಟಕಗಳು ಇಂದು ಅನ್ನ ನೀಡುತ್ತಿರುವವರನ್ನು, ಅವರು ಬೆಳೆಯುವ ಕ್ರಿಯೆಯ ಸವಾಲುಗಳನ್ನು, ಆ ಹೋರಾಟದಲ್ಲಿನ ಅವರ ಸಂಪೂರ್ಣ ಅರ್ಪಣೆಯನ್ನು ನಗಣ್ಯವಾಗಿಸಿ ಬಿಟ್ಟಿರುವ ಅಧಿಕಾರ ಕೇಂದ್ರದಲ್ಲಿರುವವರ ಚಿಂತನೆಗಳು ಕೇವಲ ತಮ್ಮ ಅಧಿಕಾರ ಉಳಿಸಿಕೊಳ್ಳುವ ದಾರಿಗಳಾಗಿ ಉಳಿದುಬಿಟ್ಟಿವೆ. ಇಲ್ಲದೇ ಹೋದರೆ ನಾಡಿನ ಕೋಟ್ಯಾನುಕೋಟಿ ಜನರ ಬದುಕಿನ ಸಲಹುವಿಕೆಯ ಬಹುದೊಡ್ಡ ಜವಾಬ್ದಾರಿ ಹೊತ್ತಿರುವವರ ಬಾಯಿಂದ ಕೈ ಕಡಿಯುವ, ಮಾಟ ಮಂತ್ರ ಮಾಡಿಸುವ ಮಾತುಗಳು ಬರುತ್ತಿರಲಿಲ್ಲ.

ಆರೋಗ್ಯವಂತ ಮನುಷ್ಯ ಸಂವೇದನೆಯು ವರ್ತಮಾನವನ್ನು ವಾಸ್ತವದ ನೆಲೆಯಲ್ಲಿ ಎದುರುಗೊಳ್ಳುವುದು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಮ್ಮ ಮುಂದಿದೆ. ಬೆವರಿನ ಜೊತೆ ರಕ್ತವನ್ನೂ ಬಸಿದುಕೊಂಡು ಕಾಲದ ಜೊತೆ ಪೈಪೋಟಿಗಿಳಿದು ಲಾಭಕ್ಕಾಗಿ ಅಲ್ಲ, ತನ್ನನ್ನು ನಂಬಿದವರನ್ನು ಸಾಕುವುದಕ್ಕಾಗಿ ಅನ್ನ ಬೆಳೆವ ರೈತನಿಗೆ, ಪ್ರಭುತ್ವ ಎಂದೂ ಬೆಳೆದ ಬೆಳೆಗೆ, ಪಟ್ಟ ಶ್ರಮಕ್ಕೆ ತಕ್ಕ ಬೆಲೆಯನ್ನಂತೂ ನೀಡಲೇ ಇಲ್ಲ. ಆದರೆ, ಆ ಅನ್ನಕ್ಕೂ ಕೊಳ್ಳಿ ಇಡುತ್ತಾ ಜೀವ ಸಂಬಂಧಿಯಾದ ಭೂಮಿಯನ್ನು ಆಕ್ರಮಿಸುತ್ತಿರುವ ರೀತಿಯನ್ನು ನೋಡಿದರೆ ಭೋಗ ಪ್ರಧಾನವಾದ ವ್ಯವಸ್ಥೆಯ ವಾರಸುದಾರರು ಮಾತ್ರ ಇನ್ನು ಮುಂದೆ ಬದುಕಬಹುದೇನೋ ಎನಿಸುತ್ತದೆ. ಪರಂಪರೆಯ ಯಾವ ಕಾಲಘಟ್ಟವನ್ನೂ ಗಮನಿಸಿದರೂ ಇವೇ ಸತ್ಯಗಳು ಬೇರೆ ಬೇರೆ ರೂಪದಲ್ಲಿರುವುದು ಖಚಿತವಾಗುತ್ತದೆ. ಆದರೆ, ಒಂದು ಭಿನ್ನತೆ ಎಂದರೆ ಪ್ರಭುತ್ವ ಎಂದೂ ’ನಿಮ್ಮನ್ನು ನುಂಗುತ್ತೇವೆ’ ಎಂದು ಹೇಳುತ್ತಿರಲಿಲ್ಲ. ಮತ್ತು ಆ ನುಂಗುವಿಕೆ ನುಂಗಿಸಿಕೊಂಡವರಿಗೂ ಗೊತ್ತಾಗುತ್ತಿರಲಿಲ್ಲ. ಈಗ ಕಾಲದ ಬದಲಾವಣೆ ಮತ್ತು ಆಧುನಿಕತೆಯ ನಡೆ ಎಂದರೆ ’ನಿಮ್ಮ ತಾಯಿ ನೆಲ ನನ್ನ ವಶಕ್ಕೆ ಬೇಕು’ ಎಂದು ಘಂಟಾಘೋಷವಾಗಿ ಫರ್ಮಾನು ಹೊರಡಿಸುತ್ತದೆ ಮತ್ತು ಒಪ್ಪುವಿಕೆ ಅಥವಾ ಪ್ರತಿರೋಧಿಸುವಿಕೆ ಯಾವುದನ್ನೂ ಲೆಕ್ಕಿಸದೇ ನುಂಗುತ್ತದೆ, ನೀರು ಕುಡಿಯುತ್ತದೆ.ನಾಗರಿಕ ಸಮಾಜ ಇದನ್ನೆಲ್ಲ ಕಣ್ಣು ತೆರೆದು ನೋಡಿ ಬಾಯಿ ಮುಚ್ಚಿಕೊಳ್ಳುತ್ತದೆ, ಯಾವ ಸೋಜಿಗವೂ ಇಲ್ಲದೆ.

ಇಂತಹ ಘಟಾಘಟಿತ ಕಾಲಘಟ್ಟದಲ್ಲಿ ಬುದ್ದಿವಂತಿಕೆಯನ್ನು, ಕೌಶಲವನ್ನು, ಚಾಣಾಕ್ಷತನವನ್ನು ಹೇಗೆ ಬೇಕಾದರೂ ಬಳಸಬಹುದು. ಆದರೆ, ಅದು ಸಾಂದರ್ಭಿಕವಾಗಿ ಹೇಗೆ ಬೇಕೋ ಹಾಗೆ ಬಳಕೆಯಾಗುತ್ತಿದೆ ಎಂಬುದೇ ವಿಷಾದನೀಯವಾದುದು. ’ವೇದಿಕೆ’ ಎಂಬುದೊಂದು ಸಮೂಹದ ಮನಸ್ಥಿತಿಯನ್ನು ರೂಪಿಸುವ ಮಹತ್ವದ ಅವಕಾಶ. ಆದರೆ ಈ ಅವಕಾಶ ಬಹುಜನರ ವಾಂಛೆಗಳಿಗೆ ಮಣೆ ಹಾಕುತ್ತಾ ಜನಪ್ರಿಯವಾಗುವಿಕೆಯನ್ನೇ ಮುಖ್ಯವಾಗಿಸಿಕೊಳ್ಳುತ್ತಿದೆ. ಹೀಗಾದಾಗ ಯಾವ ಜೀವಪರ ಚಟುವಟಿಕೆಗಳಿಗೆ ಅರ್ಥವೆಲ್ಲಿ ಬಂದೀತು.

ನಮ್ಮ ಈ ಕಾಲಘಟ್ಟ ಕಂಬನಿಯ ಕುಯಿಲಿಗೆ ನಿಂತಂತೆ ಭಾಸವಾಗುತ್ತಿದೆ. ಬದುಕು ಎನ್ನುವುದೊಂದು ದುಃಖದ ಬೆಳೆ ಬೆಳೆಯುವ ಹಸನಾದ ಹೊಲ. ಈ ನೆಲದಲ್ಲಿ ದುಡಿಯುವವರು ಹೆಚ್ಚು ಹೆಚ್ಚು ಕಷ್ಪಪಟ್ಟಷ್ಟು ಕಣ್ಣೀರಿನ ಬೆಳೆ ದುಪ್ಪಟ್ಟು ಬೆಳೆಯುತ್ತದೆ. ಈ ಬೆಳೆಯನ್ನು ಪ್ರಭುತ್ವ ಮಾರಾಟದ ಸರಕಾಗಿ ಹರಾಜಿಗಿಟ್ಟು ಬಹುಕೋಟಿ ದರದಲ್ಲಿ ಮಾರುತ್ತದೆ. ಇದಕ್ಕೆ ಸಂವಾದಿಯಾಗಿ ನಮ್ಮ ಮಧ್ಯೆ ಹಲವಾರು ಘಟನೆಗಳು ಸಾಕ್ಷಿಯಾಗಿವೆ. ರೈತನಿಗೆ ಭೂಮಿಯ ಜೊತೆಗಿನ ಸಂಬಂಧವೆಂದರೆ ಅದು ಜೀವ ಸಂಬಂಧ. ಈ ಅನೂಹ್ಯ ಸಂಬಂಧವನ್ನು ದುಡ್ಡಿನ ಅಲಗಿನಿಂದ ಕತ್ತರಿಸಲಾಗುತ್ತಿದೆ.

ಕೊನೆಯಲ್ಲಿ ಪ್ರತಿರೋಧದ ಎಲ್ಲ ನೆಲೆಗಳನ್ನು ಸಂಶೋಧಿಸಿ ದಮನ ಮಾಡುವ ಪ್ರಭುತ್ವ ಕೇವಲ ದೈತ್ಯ ಮಾತ್ರವಾಗಿಲ್ಲ ಬುದ್ದಿವಂತಿಕೆಯದೂ ಆಗಿದೆ. ಮತ್ತು ಆ ಬುದ್ದಿಮತ್ತೆಗೆ ಬರಹಗಾರರೆಂದುಕೊಂಡಿರುವವರ ಕಾಣಿಕೆಯೂ ಇರುವುದೇ ನಮ್ಮ ಮುಂದಿರುವ ನಿಜವಾದ ಗಂಭೀರ ಸವಾಲು. ಮನುಷ್ಯ ಕುಲವನ್ನೇ ವಿನಾಶದತ್ತ ತಳ್ಳಿದ ’ನೀಷೆ’ಯಂಥವರ ಆಲೋಚನೆಗಳು ಮತ್ತೆಮತ್ತೆ ಮರು ರೂಪಗೊಂಡು ಸೌಮ್ಯ ರೂಪದಲ್ಲಿ ದಾಂಗುಡಿ ಇಡುತ್ತಿರುವುದು ಈ ಯೋಚನೆಗೆ ಗಟ್ಟಿ ಸಾಕ್ಷಿ.

-ವೀರಣ್ಣ ಮಡಿವಾಳರ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ