ಭಾನುವಾರ, ನವೆಂಬರ್ 13, 2011

ಕಲಿಗಳ ಕಲಿಕೆ

ಶಾಲೆ ಪ್ರಾರಂಭವಾಗುವ ದಿನ ನೆನಪಿನಲ್ಲಿ ತಂದುಕೊಂಡರೆ ಸಾಕು, ಕನಸುಗಳಿಗೆ ರೆಕ್ಕೆ ಮೂಡುತ್ತವೆ, ಮನಸ್ಸು ಉಲ್ಲಸಿತವಾಗುತ್ತೆ, ಸಂಭ್ರಮ ಉಕ್ಕಿ ಬರುತ್ತದೆ. ಗಡಿನಾಡಿನ ಮೂಲೆಯ ಒಂದು ತೋಟದಲ್ಲಿ ಯಾರಿಗೂ ಪರಿಚಯವೇ ಇಲ್ಲವೇನೋ ಎಂಬಂತೆ ನಗುತ್ತಿರುವ ನನ್ನ ಶಾಲೆ, ಹಲವಾರು ವಿಸ್ಮಯಗಳ ಒಂದು ಕೂಟ.ಶಾಲೆ ಪ್ರಾರಂಭವಾಗುವ ಸರಿಯಾದ ಸಮಯಕ್ಕೆ ತೋಟ ತೋಟಗಳ ನಡುವಿನಿಂದ, ಹೊಲಗದ್ದೆಗಳ ಬದುಗಳಿಂದ, ಗಿಡಮರಗಳ ತಂಪಿನ ನಡುವೆ ತಾವಾಗಿಯೇ ರೂಪಿಸಿಕೊಂಡಿರುವ ಕಾಲು ದಾರಿಗಳಿಂದ ಈ ದಿನ ನಮ್ಮದೇ ಎಂಬಂತೆ ಹೆಜ್ಜೆಯಿಡುತ್ತ ತಮ್ಮ ತೊದಲು ಕೇಕೆಗಳಲ್ಲಿ ಜನಸಂಪರ್ಕದಿಂದ ದೂರವೇ ಇರುವ ನಮ್ಮ ಶಾಲೆಗೆ ಎಲ್ಲ ದಿಕ್ಕುಗಳಿಂದಲೂ ಬರುವ ನನ್ನ ಮಕ್ಕಳ ಸೈನ್ಯದ ಚಿತ್ರ ಸದಾ ನೆನಪು ಹಸಿರಾಗಿಡುವಂಥದ್ದು.


ಇಲ್ಲಿ ವಾಹನಗಳ ದಟ್ಟಣೆಯಿಲ್ಲ, ಜನಗಳ ಗದ್ದಲವಿಲ್ಲ. ಅಂಗಡಿ ಮುಂಗಟ್ಟುಗಳ ಗೊಡವೆಯಿಲ್ಲ. ಇಲ್ಲಿ ಏನಿದ್ದರೂ ಶಾಲೆ ಮಾತ್ರ. ನನ್ನದು ತೋಟದ ಶಾಲೆ. ಗಾವಡ್ಯಾನವಾಡಿ ಎಂಬ ಈ ಹಳ್ಳಿ ನೀವು ಹುಡುಕಿದರೂ ಸಿಗುವುದಿಲ್ಲ. ಇದೇ ಹಳ್ಳಿಗೆ ಬಂದರೂ ನೀವು ಗಾವಡ್ಯಾನವಾಡಿಯನ್ನು ಕಾಣಲು ಸಾದ್ಯವಿಲ್ಲ. ಏಕೆಂದರೆ ಎಲ್ಲ ಗ್ರಾಮಗಳಲ್ಲಿರುವಂತೆ ಇಲ್ಲಿ ಒಟ್ಟಾಗಿ ಮನೆಗಳಿಲ್ಲ. ಹರಟೆಕಟ್ಟೆಯಿಲ್ಲ. ಗುಂಪು ಜನರನ್ನು ಕಾಣಲಾಗುವುದಿಲ್ಲ. ಬೊಗಸೆ ಹೂಗಳನ್ನು ಜೋರಾಗಿ ಆಕಾಶಕ್ಕೆ ತೂರಿದಾಗ ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬೀಳುವ ಹೂಗಳಂತೆ ಇಲ್ಲಿ ಮನೆಗಳು ಒಂದು ರೀತಿ ಮಗು ಬಿಡಿಸಿದ ಚೆಲ್ಲಾಪಿಲ್ಲಿ ಚಿತ್ರಗಳು. ಇಲ್ಲಿ ಮಕ್ಕಳ ದೈನಿಕ ಬದುಕಿನ ನಡೆಗಳಲ್ಲಿಯೇ ಧೀಮಂತಿಕೆಯಿದೆ. ಆಳೆತ್ತರ ಬೆಳೆದಿರುವ ಕಬ್ಬಿನ ತೋಟಗಳ ದಟ್ಟಣೆಯ ಮಧ್ಯೆ ಕಿಲೋಮಿಟರ್‌ಗಟ್ಟಲೆ ಆರು ವರ್ಷದ ಮಗುವೊಂದು ಒಬ್ಬಂಟಿಯಾಗಿ ಶಾಲೆಯ ಮಡಿಲಿಗೆ ಬಂದು ಸೇರುವುದೇ ಇಲ್ಲಿನವರ ತಾಕತ್ತಿನ ಪ್ರತೀಕ. ಇದು ಕೇವಲ ಒಂದು ಮಗುವಿನ ಕಥೆಯಲ್ಲ. ಇಲ್ಲಿನ ತೋಟದ ಶಾಲೆಯ ಎಲ್ಲ ಮಕ್ಕಳಲ್ಲೂ ಇದೇ ಧೈರ್ಯ, ಸ್ಥೈರ್ಯ. ಜನರದ್ದೂ ಇದೇ ಬದುಕು. ಹಗಲೂ ರಾತ್ರಿಯ ವ್ಯತ್ಯಾಸ ಇಲ್ಲಿಲ್ಲ. ಸಂತೆಯ ದಿನವೇ ಪಕ್ಕದ ಹಳ್ಳಿಯಿಂದ ಎಲ್ಲವನ್ನೂ ಸಂಗ್ರಹಿಸಿಟ್ಟುಕೊಳ್ಳಬೇಕು. ಹೊತ್ತು ಮುಳುಗಿದ ಮೇಲೆ ಬೆಂಕಿಪೂಟ್ಟಣ ಖಾಲಿಯಾಗಿದ್ದರೆ ಅದೇ ಕತ್ತಲಲ್ಲಿ ಪಕ್ಕದ ಊರಿಗೆ ನಡೆದು ತಂದು ಮನೆಯಲ್ಲಿ ಬೆಳಕು ಕಾಣಬೇಕು.

ಈ ಎಲ್ಲ ವಿಚಿತ್ರ ವಿಸ್ಮಯಗಳ ಮದ್ಯೆ ನನ್ನ ಮಕ್ಕಳಿದ್ದಾರೆ. ಅವರಿಗೆ ಯಾವ ಕೊರತೆಗಳೂ ಬಾಧಿಸುವುದಿಲ್ಲ. ಅದಮ್ಯ ಚೇತನದ ಅಂತಃಶಕ್ತಿಯ ಈ ಮಕ್ಕಳನ್ನು ತರಗತಿ ಕೋಣೆಯಲ್ಲಿ ಕಾಣುವುದೇ ಒಂದು ಸಂಭ್ರಮ. ಬಹುಶಃ ಬೇಸಿಗೆಯ ರಜೆಯಲ್ಲಿ ಸ್ವಲ್ಪ ಮಸುಕಾಗಿರುವ ಹಾಡುಗಳ ನೆನಪನ್ನು ಮತ್ತೆ ಸ್ವಚ್ಛವಾಗಿಸಿಕೊಳ್ಳಬೇಕು. ಮಕ್ಕಳ ಮನಸ್ಸಿನಲ್ಲಿ ನಗು ಉಕ್ಕಿಸುವ, ತಮಗೆ ತುಂಬಾ ಇಷ್ಟವಾಗುವ ಸ್ಥಳ ಶಾಲೆಯೇ ಎಂದೆನಿಸುವಂತೆ ಮಾಡುವ ಹಾಡು, ಕುಣಿತ, ಕಥೆ ಎಲ್ಲವನ್ನೂ ನಾನೀಗ ಮತ್ತದೇ ಹೊಸ ಹುಮ್ಮಸ್ಸಿನೊಂದಿಗೆ ಹೊಂದಿಸಿಕೊಳ್ಳಬೇಕು. ನನ್ನದು ನಲಿ-ಕಲಿ ತರಗತಿಯಾದುದರಿಂದ ಈ ಪುಟ್ಟ ಹೃದಯಗಳೊಂದಿಗೆ ಬೆರೆತು ಅವುಗಳ ಆಳದಲ್ಲಿ ಇಳಿದು ಕಲಿಸುವ ಕಲಿಯುವ ಕ್ರಿಯೆಯೇ ಅಭೂತಪೂರ್ವವಾದದ್ದು. ನನ್ನ ಒಂದೊಂದು ಆಲೋಚನೆಯೂ ಅಷ್ಟೂ ಮಕ್ಕಳ ಆ ಕ್ಷಣದ ಕಲಿಕೆಯನ್ನು ನಿರ್ಧರಿಸುತ್ತದೆ. ಏನನ್ನು, ಯಾವಾಗ ಎಷ್ಟನ್ನು ಕಲಿಸಬೇಕು ಎನ್ನುವ ನಿರ್ದಿಷ್ಟ ತಿಳುವಳಿಕೆಯಲ್ಲಿ ಎಲ್ಲೂ ವ್ಯತ್ಯಾಸವಾಗುವಂತಿಲ್ಲ. ನಲಿ-ಕಲಿ ತಂದುಕೊಟ್ಟಿರುವ ಮುಕ್ತ ಸ್ವಾತಂತ್ರ್ಯ ನನ್ನ ಮಕ್ಕಳಿಗೆ ನನ್ನಿಂದ ಕಲಿಯಲೇಬೇಕಾದ ಹಕ್ಕನ್ನು ತಂದುಕೊಟ್ಟಿದೆ. ನನ್ನ ಬೇಸರಕ್ಕೆ ಆಸ್ಪದವಿಲ್ಲ. ಇಡೀ ವರುಷದ ಕಲಿಸುವ ಪ್ರಕ್ರಿಯೆಯಲ್ಲಿ ಹಾಗಾಗಲು ಈ ಮಕ್ಕಳು ಬಿಡುವುದೂ ಇಲ್ಲ. ತಮ್ಮ ಜ್ಞಾನದ ಹಸಿವಿಗೆ ತಕ್ಕಷ್ಟನ್ನು ನಾನು ಪೂರೈಸದೇ ಹೋದರೆ ನನ್ನನ್ನೇ ದಿಟ್ಟಿಸಿ ನೋಡಿ ನನಗೆ ಮುಂದಿನ ಪಾಠವನ್ನು ಕಲಿಸಿ ಸರ್ ಎಂದು ಪಟ್ಟುಹಿಡಿದು ಕೇಳುವ ಅವಕಾಶ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿದೆ ಎಂಬುದೇ ಸುಮಾರು ವರುಷಗಳ ಹಿಂದಿನ ಸಾಂಪ್ರದಾಯಿಕತೆಯ ಆಚೆ ನಾವು ಮನೋವೈಜ್ಞಾನಿಕ ಶಿಕ್ಷಣದತ್ತ ಹೆಜ್ಜೆ ಇಟ್ಟಿದ್ದೇವೆ ಎಂಬುದಕ್ಕೆ ಗಟ್ಟಿ ಸಾಕ್ಷಿಯಾಗಿದೆ.

ಇನ್ನು ಮೊದಲನೇ ತರಗತಿಗೆ ಬರುವ ಮಕ್ಕಳನ್ನು ಸ್ವಾಗತಿಸಿಕೊಳ್ಳಬೇಕು. ಆ ಮಗುವಿಗಿರಬಹುದಾದ ಎಲ್ಲ ಅಪರಿಚಿತ ವಾತಾವರಣ ಭಯ ಹುಟ್ಟಿದಂದಿನಿಂದ ಐದು ವರ್ಷ ಹತ್ತು ತಿಂಗಳ ತನಕ ಪಾಲಕರ ತೆಕ್ಕೆಯಲ್ಲಿದ್ದ ಮಗುವನ್ನು, ಒಮ್ಮಿಂದೊಮ್ಮೆಲೆ ಶಾಲೆಯ ಮಡಿಲಲ್ಲಿ ತುಂಬಿಸಿಕೊಳ್ಳುವ ಪ್ರಕ್ರಿಯೆ ಸಂಭ್ರಮದ್ದೂ, ಸವಾಲಿನದ್ದೂ ಹೌದು. ಬೇರೆ ಬೇರೆ ಹಿನ್ನಲೆಗಳಿಂದ, ಬೇರೆ ಬೇರೆ ಸಮೂಹಗಳಿಂದ ಬರುವ ಮಗುವನ್ನು ಒಂದು ದಿನವೂ ತಪ್ಪದೇ ಶಾಲೆಗೆ ಬರುವಂತೆ ಮಾಡಲು ನಮ್ಮಲ್ಲಿ ಅಗತ್ಯ ತಯಾರಿಯಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಸಹ ತರಗತಿ ಕೋಣೆಯನ್ನು ಬಣ್ಣಬಣ್ಣದ ಆಕರ್ಷಕ ಚಿತ್ರಗಳಿಂದ, ಅಕ್ಷರಗಳಿಂದ ಆನಂದಕ ಲೋಕಕ್ಕೆ ಒಳಬಂದ ಅನುಭವವನ್ನು ಮಗುವಿಗೆ ಉಂಟುಮಾಡಲು ತರಗತಿಯನ್ನು ಸಿದ್ದಗೊಳಿಸಬೇಕಿದೆ.

ಈ ಭಾಗದ ಪ್ರತಿ ಹಳ್ಳಿಗಳಲ್ಲೂ ನಡೆಯುವ ಜಾತ್ರೆಗಳು ನಮಗೆ ಪ್ರತಿವರ್ಷವೂ ಸವಾಲು. ಮಕ್ಕಳು ಬರುವುದಿಲ್ಲವೆಂದರೂ ಸಹ ಶಾಲೆ ಬಿಡಿಸಿ ಜಾತ್ರೆಗೆ ಕರೆದೊಯ್ಯುವ ಪಾಲಕರಿಗೆ ಈ ವರ್ಷವಾದರೂ ಸರಿಯಾದ ತಿಳುವಳಿಕೆ ಕೊಡುವ ಜವಾಬ್ದಾರಿ ನಮ್ಮೆಲ್ಲ ಶಿಕ್ಷಕ ಬಳಗದ ಮೇಲಿದೆ.

ಮುದ್ದು ಮಕ್ಕಳೇ, ನಾವು ಏರಲಾಗದ ಎತ್ತರವನ್ನು ನೀವು ಏರುವಂತೆ ಮಾಡಲು, ನಮ್ಮಿಂದ ಸಾಧಿಸಲು ಸಾಧ್ಯವಾಗದ್ದನ್ನು ನೀವು ಸಾಧಿಸುವಂತೆ ಮಾಡಲು ಮತ್ತದೇ ಹುಮ್ಮಸ್ಸಿನೊಂದಿಗೆ ನಿಮ್ಮೊಂದಿಗೆ ಬೆರೆಯಲು ಕಲಿಯಲು, ಕಲಿಸಲು ಎಲ್ಲ ಅಗತ್ಯ ತಯಾರಿಯಲ್ಲಿದ್ದೇವೆ. ಇಲ್ಲೊಂದು ನಿಮ್ಮ ಮನೆಯ ಆತ್ಮೀಯತೆಯನ್ನು ಉಳಿಸಿಕೊಂಡಿರುವ ಶಾಲೆ, ನಿಮಗೆ ಒಂದು ಉತ್ತಮ ಬದುಕನ್ನು ಕಟ್ಟಿಕೊಡಬಲ್ಲ ಗುರುಸಮೂಹ, ನಿಮ್ಮ ಎಲ್ಲ ಆಟತುಂಟಾಟಗಳಿಗೆ ಸಿದ್ದವಾಗಿರುವ ಅಂಗಳ ನಿಮಗಾಗಿ ಕಾದಿದೆ. ಎಂದಿನ ಪ್ರೀತಿ ಆತ್ಮೀಯತೆಯಿಂದ ಸ್ವಾಗತ ಕೋರುತ್ತೇನೆ. ಭವಿಷ್ಯದ ಡಾಕ್ಟರ್, ಎಂಜಿನಿಯರ್, ಪೈಲಟ್‌ಗಳಿಗೆ ಮಾತ್ರವಲ್ಲ ಬುದ್ದ, ಅಂಬೇಡ್ಕರ್, ಗಾಂಧಿ, ಭಗತ್ ಸಿಂಗ್‌ರಿಗೆ.

ವೀರಣ್ಣ ಮಡಿವಾಳರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ